Advertisement

ತಾಲೂಕಿನಾದ್ಯಂತ ಭಾರಿ ಮಳೆ, ಕೊಚ್ಚಿ ಹೋದ ಬೆಳೆ!

03:59 PM Oct 18, 2021 | Team Udayavani |

ದೇವನಹಳ್ಳಿ: ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ರೈತರ ತೋಟಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿರುವುದರಿಂದ ಕೂಡಲೇ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ದಾಖಲೆ ಮಳೆ: ಶನಿವಾರ ಸಂಜೆಯಿಂದ ರಾತ್ರಿವರೆಗೆ ಉತ್ತಮ ಮಳೆಯಾಗಿದೆ. ರೈತರಿಗೆ ಈ ಮಳೆ ನುಂಗಲಾರದ ತುತ್ತಾಗಿದೆ. ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.

Advertisement

ತೋಟಗಳಿಗೆ ನೀರು ನುಗ್ಗಿರುವುದರಿಂದ ರೈತರು ಸಾಲಸೋಲ ಮಾಡಿ ಬೆಳೆದಿದ್ದ ಹೂವು ನೀರುಪಾಲಾಗಿದೆ. ತಾಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಇದೇ ಮೊದಲ ಭಾರಿಗೆ 56.5 ಮಿ. ಮೀಟರ್‌ ನಷ್ಟು ದಾಖಲೆ ಮಳೆಯಾಗಿದ್ದು, ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದ್ದರು. ರಾಜಕಾಲುವೆ ಒತ್ತುವರಿ.

ರೈತರಿಗೆ ಕಿರಿಕಿರಿ: ಮಳೆಯ ನೀರು ಕೆರೆಗಳಿಗೆ ಹರಿದು ಹೋಗುವಂತೆ ಮಾಡಲಿಕ್ಕಾಗಿ ನಿರ್ಮಾಣ ಮಾಡಿರುವ ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ, ಮಳೆಯ ನೀರು ಕಾಲುವೆಗಳ ಮುಖಾಂತರ ಕೆರೆಗೆ ಹರಿಯಬೇಕಾಗಿರುವುದರ ಬದಲಾಗಿ ರೈತರ ತೋಟಗಳಿಗೆ ನುಗ್ಗಿವೆ. ಇದರಿಂದ ರೈತರ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಪಾರ ಬೆಳೆ ಹಾನಿ: ತಾಲೂಕಿನ ಅಣ್ಣೇಶ್ವರ, ಬೈಚಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಹೂವಿನ ಬೆಳೆಗಳು, ರಾಗಿ ಬೆಳೆ, ಜೋಳದ ಬೆಳೆ, ಸೌತೆಗಿಡ ಸೇರಿದಂತೆ ಬಹುತೇಕ ಬೆಳೆಗಳಿಗೆ ನೀರು ನುಗ್ಗಿದ್ದು, ಹೂವಿನ ಗಿಡಗಳು ಕೊಳೆಯುವಂತಹ ಸ್ಥಿತಿಗೆ ತಲುಪಿವೆ. ಲಕ್ಷಾಂತರ ರೂಪಾಯಿಗಳಷ್ಟು ಬಂಡವಾಳ ಹೂಡಿಕೆ ಮಾಡಿದ್ದೇವೆ. ತೋಟಗಳಲ್ಲಿ ನಿಂತಿರುವ ನೀರನ್ನು ಹೊರಗೆ ಹಾಕಲು ಮೋಟಾರುಗಳನ್ನು ಇಟ್ಟು ನೀರು ಖಾಲಿ ಮಾಡಿದರೂ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಮತ್ತೆ ಜಲಾವೃತವಾಗಿದೆ. ನೀರು ನಿಂತರ ಪರಿಣಾಮ ಹೂ ಬಿಡಿಸಲಿಕ್ಕೂ ಕಾರ್ಮಿಕರು ಬರುತ್ತಿಲ್ಲ. ತೋಟಕ್ಕೆ ನಾವು ಔಷಧಿ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಔಷಧಿಯೆಲ್ಲಾ ನೀರು ಪಾಲಾಗಿದೆ.

ಒಂದು ಬಾರಿ ಔಷಧ ಸಿಂಪಡಣೆ ಮಾಡಬೇಕೆಂದರೆ 4 ರಿಂದ 5 ಸಾವಿರ ಖರ್ಚು ಮಾಡಬೇಕು. ಹೂವಿನ ಗಿಡಗಳ ಕಾಂಡಗಳು ಕೊಳೆಯುವಂತಾಗಿದ್ದು, ಬೆಳೆ ನಾಶವಾದರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ ಎನ್ನುವ ಆತಂಕವೂ ಕಾಡುತ್ತಿದೆ. ವಿಮಾನ ನಿಲ್ದಾಣದ ಕಡೆಯಿಂದಲೂ ಕೂಡಾ ನೀರು ನಮ್ಮ ತೋಟಗಳಿಗೆ ನುಗ್ಗುತ್ತವೆ. ಕಾಲುವೆಯನ್ನು ಮಾಡಿ, ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದಲೂ ನೀರು ಈ ಭಾಗಕ್ಕೆ ಹರಿದು ಬಂದು ತೋಟಗಳಲ್ಲಿ ನಿಲುತ್ತಿವೆ ಎಂದು ರೈತರು ತಮ್ಮ ನೋವನ್ನು ವ್ಯಕ್ತಪಡಿಸಿದರು.

Advertisement

ತಾಲೂಕಿನ ಹೋಬಳಿವಾರು ಮಳೆಯ ಅಂಕಿ ಅಂಶ-

ದೇವನಹಳ್ಳಿ ಟೌನ್‌- 26.1ಮಿ.ಮಿ.,  ವಿಜಯಪುರ- 5.2ಮಿ.ಮಿ., ಕುಂದಾಣ- 6.0ಮಿ.ಮಿ.,  ವಿಶ್ವನಾಥಪುರ- 5.4ಮಿ.ಮಿ.,

ಚನ್ನರಾಯಪಟ್ಟಣ- 13.8ಮಿ.ಮಿ. ಒಟ್ಟು 56.5ಮಿ.ಮಿ. ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next