Advertisement

ಕೇರಳದಲ್ಲಿ ವರುಣನ ಆರ್ಭಟ

11:49 AM Jul 20, 2019 | Team Udayavani |

ತಿರುವನಂತಪುರ: ಧಾರಾಕಾರ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲ್ಪಟ್ಟಿದ್ದ ಕೇರಳದ ಜಿಲ್ಲೆಗಳಾದ ಕಲ್ಲಿಕೋಟೆ, ಇಡುಕ್ಕಿ, ಮಲಪ್ಪುರಂ, ತ್ರಿಶೂರ್‌, ಎರ್ನಾಕುಳಂ, ಕೊಟ್ಟಾಯಂನಲ್ಲಿ ಗುರುವಾರದಿಂದ ಅಗಾಧವಾಗಿ ಮಳೆಯಾಗುತ್ತಿದೆ. ದಿನದಿಂದ ದಿನಕ್ಕೆ ಮುಂಗಾರು ತೀವ್ರತೆ ಪಡೆಯುತ್ತಿದ್ದು, ಗುರುವಾರ-ಶುಕ್ರವಾರ ಕಲ್ಲಿಕೋಟೆ ಹಾಗೂ ಇಡುಕ್ಕಿಯಲ್ಲಿ 14 ಸೆಂ.ಮೀ. ಮಳೆಯಾಗಿದ್ದರೆ, ಉಳಿದ ಜಿಲ್ಲೆಗಳ ಕೆಲ ಭಾಗಗಳಲ್ಲಿ 12 ಸೆಂ.ಮೀ. ಮಳೆ ಬಿದ್ದಿದೆ.

Advertisement

ಶುಕ್ರವಾರ, ಇಡುಕ್ಕಿ ಜಿಲ್ಲೆಯ ಇಟ್ಟುಮನೂರ್‌-ಪೀರುಮೆಂಡು ರಸ್ತೆಯಲ್ಲಿ ಅಲ್ಪ ಪ್ರಮಾಣದ ಭೂಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಟ್ಟಣಂತಿಟ್ಟ ಜಿಲ್ಲೆಯಲ್ಲಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವು 5 ದಿನಗಳ ಮಾಸಿಕ ಪೂಜೆಗಾಗಿ ತೆರೆಯಲ್ಪಟ್ಟಿದ್ದು, ದೇವರ ದರ್ಶನಕ್ಕಾಗಿ ಸಾಗರೋಪಾದಿಯಾಗಿ ಆಗಮಿಸುತ್ತಿರುವ ಭಕ್ತಾದಿಗಳಿಗೆ ಪಂಬಾ ಪ್ರಾಂತ್ಯದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಆಗಿರುವುದರಿಂದ ತೊಂದರೆಯಾಗಿತ್ತು. ಆದರೆ, ಶುಕ್ರವಾರ ಮಧ್ಯಾಹ್ನದ ನಂತರ ಪ್ರವಾಹದಲ್ಲಿ ಕೊಂಚ ಇಳಿಮುಖವಾಗುತ್ತಿದೆ.

ಜು.19ರಿಂದ 22ರಂದು ವಯನಾಡ್‌, ಮಲಪ್ಪುರಂ, ಕಣ್ಣೂರು ಜಿಲ್ಲೆಗಳಲ್ಲೂ ಅಗಾಧ ಮಳೆಯಾಗುತ್ತದೆ ಎಂದಿರುವ ಹವಾಮಾನ ಇಲಾಖೆ ಆ ಜಿಲ್ಲೆಗಳನ್ನೂ ರೆಡ್‌ ಅಲರ್ಟ್‌ ವ್ಯಾಪಿಗೆ ತಂದಿತ್ತು. ಹಾಗಾಗಿ, ಅಲ್ಲಿಯೂ ಹೆಚ್ಚು ಮಳೆಯ ನಿರೀಕ್ಷೆ ಇದೆ.

ಮೀನುಗಾರರು ನಾಪತ್ತೆ?: ತಿರುವನಂತಪುರ ಜಿಲ್ಲೆಯ ವಿಳಿಂಜಂನಿಂದ ಸಮುದ್ರಕ್ಕಿಳಿದಿದ್ದ ನಾಲ್ವರು ಮೀನುಗಾರರು ವಾಪಸ್‌ ಬಂದಿಲ್ಲ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನೌಕಾಪಡೆಯ ಸಹಾಯ ಕೋರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರ: ಸಿಡಿಲಿಗೆ 8 ಬಲಿ
ಬಿಹಾರದ ಕೇಂದ್ರ ವಲಯದಲ್ಲಿರುವ ಧಾನ್ಪುರ್‌ ಮುಸಾಹರಿ ಎಂಬ ಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಬಡಿದ ಸಿಡಿಲಿಗೆ 15 ವರ್ಷದೊಳಗಿನ 7 ಮಕ್ಕಳು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವ ರೆಲ್ಲರೂ ಅದೇ ಹಳ್ಳಿಯವರು. ಈ ಮೂಲಕ ಬಿಹಾರದಲ್ಲಿ ಮಳೆ, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 92ಕ್ಕೇರಿದೆ.

Advertisement

ಅಸ್ಸಾಂಗೆ ನೆರವು: ಪಿಎಂ ಭರವಸೆ
ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಬಿಜೆಪಿಯ 10 ಸಂಸದರ ನಿಯೋಗ ಕಳುಹಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದು, ರಾಜ್ಯಕ್ಕೆ ಎಲ್ಲ ರೀತಿಯ ನೆರವನ್ನೂ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಅಸ್ಸಾಂ ಸಂಸದ ದಿಲಿಪ್‌ ಸಾಯ್ಕಿಯಾ ತಿಳಿಸಿದ್ದಾರೆ. ಪ್ರಧಾನಿ ಕಾರ್ಯಾಲಯ ಸಹ ಟ್ವೀಟ್ ಮಾಡಿದ್ದು, ಅಸ್ಸಾಂಗೆ ಬೇಕಾದ ನೆರವನ್ನು ನೀಡುವುದಾಗಿ ಹೇಳಿದೆ. ಸಾವಿನ ಸಂಖ್ಯೆ 47ಕ್ಕೆ: ಕಳೆದ ಕೆಲ ದಿನಗಳಿಂದ ಉಂಟಾಗಿರುವ ಭೀಕರ ಪ್ರವಾಹದಿಂದ ತತ್ತರಿಸಿರುವ ಅಸ್ಸಾಂನಲ್ಲಿ ಶುಕ್ರವಾರ 11 ಜನರು ಮೃತಪಟ್ಟಿದ್ದು, ಈವರೆಗೆ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 47ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next