Advertisement

ವ್ಯಾಪಕ ನಾಶನಷ್ಟ,ನೂರಾರು ಮಂದಿ ರಕ್ಷಣೆ,33 ಕುಟುಂಬ ಸ್ಥಳಾಂತರ

06:00 AM Jul 09, 2018 | Team Udayavani |

ಕಾಸರಗೋಡು: ರವಿವಾರ ಬೆಳಗ್ಗೆ ವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ನಾಶನಷ್ಟ ಸಂಭವಿಸಿದ್ದು, ಕೊರಕ್ಕೋಡು, ಬಂಬ್ರಾಣ ಬಯಲು ಪ್ರದೇಶ ನೆರೆಗೆ ಸಿಲುಕಿದೆ. 

Advertisement

ಬಂಬ್ರಾಣ ಪ್ರದೇಶದಲ್ಲಿ 33 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.ನೂರಾರು ಮಂದಿಯನ್ನು ರಕ್ಷಿಸಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಧಾರಾಕಾರ ಮಳೆಗೆ ಮಧುವಾಹಿನಿ ಹೊಳೆ ಉಕ್ಕಿ ಹರಿದು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಾಂಗಣದೊಳಗೆ ಮಳೆ ನೀರು ನುಗ್ಗಿದೆ.

ಕಾಸರಗೋಡು ಟೌನ್‌ ಹಾಲ್‌ನ ಹಿಂದುಗಡೆಯ ಕೊರಕ್ಕೋಡು ಪಾಂಗೋಡಿನಲ್ಲಿ ಚಂದ್ರಗಿರಿ ನದಿ ಉಕ್ಕಿ ಹರಿದು ಆ ಪ್ರದೇಶದ ಸುಮಾರು ಹದಿನೈದಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯ ಒಳಗೆ ಮತ್ತು ಹೊರಗಡೆ ನೀರು ತಂಬಿದ್ದು, ಭೀತಿಯನ್ನು ಆವರಿಸಿದೆ. ತತ್‌ಕ್ಷಣ ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಲೀಡಿಂಗ್‌ ಫಯರ್‌ಮನ್‌ ಕೆ.ವಿ. ಮನೋಹರನ್‌ ನೇತೃತ್ವದಲ್ಲಿ ಸುರೇಶ್‌ ಕುಮಾರ್‌, ಉಮೇಶನ್‌, ಅನೀಶ್‌, ಅನೂಪ್‌ ಫೈಬರ್‌ ದೋಣಿ, ಜಾಕೆಟ್‌ ಇತ್ಯಾದಿ ರಕ್ಷಣಾ ಸಾಮಾಗ್ರಿಗಳೊಂದಿಗೆ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ರಕ್ಷಿಸಲ್ಪಟ್ಟವರನ್ನು ಅವರ ಸಂಬಂಧಿಕರ ಮನೆಗಳಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.

ಭಾರೀ ಮಳೆಗೆ ಬೋವಿಕ್ಕಾನ ಸಮೀಪದ ಎರಿಂಜೇರಿ ಪಾಣೂರು ಕೊಚ್ಚಿ ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಶಿರಿಯಾ ಹೊಳೆ ಉಕ್ಕಿ ಹರಿದು ಬಯಲು ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ. ವಿಸ್ತಾರವಾದ ಈ ಪ್ರದೇಶದಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದು, ಈ ಪೈಕಿ 33 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬಂಬ್ರಾಣ ಬಯಲು ಜಲಾವೃತ ಗೊಂಡ ಹಿನ್ನೆಲೆಯಲ್ಲಿ ಮಂಜೇಶ್ವರ ತಹಶೀಲ್ದಾರ್‌ ಸಕೀರ್‌ ಹುಸೈನ್‌, ಗ್ರಾಮಾಧಿಕಾರಿ ಕೀರ್ತನ್‌ ಹಾಗೂ ಕುಂಬಳೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಈ ಪ್ರದೇಶದಲ್ಲಿ ವಾಸಿಸುವ ಅಬ್ಟಾಸ್‌, ಮಮ್ಮು ತೆಲ್ಲತ್ತ್ವಳಪ್‌, ಮೊಹಮ್ಮದ್‌ ಮುಕ್ರಿ ವಳಪ್‌, ಇಬ್ರಾಹಿಂ ಕಲ್ಲಟ್ಟಿ, ಸುಹರಾ, ಮಮಿಂಞಿ, ಮೊಗರ್‌ ಮೊಹಮ್ಮದ್‌, ನಂಬಿಡಿ ಮೊದೀನ್‌, ಬಡುವನ್‌ ಕುಂಞಿ, ಹರೀಶ್‌, ರವಿ ಶೆಟ್ಟಿ, ಕೃಷ್ಣ ಶೆಟ್ಟಿ, ನಾರಾಯಣ ಶೆಟ್ಟಿ ಸಹಿತ 33 ಕುಟುಂಬಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.

Advertisement

ಬಾದೆಮಾರ್‌ನಲ್ಲಿ ಆವರಣ ಗೋಡೆ ಕುಸಿತ  
ಹೊಸಂಗಡಿ ಬಳಿಯ ಬಾದೆಮಾರ್‌ ಕೆಳಗಿನ ಹಿತ್ಲುನಲ್ಲಿ ಮನೆಯ ಹಿತ್ತಿಲಿಗೆ ಕಟ್ಟಿದ ಆವರಣಗೋಡೆ ಕುಸಿದು ಬಿದ್ದಿದೆ. ತೋಡಿನ ಬದಿಯಲ್ಲೇ ಕಟ್ಟಲಾಗಿದ್ದ ವಸಂತ ಅವರ ಹಿತ್ತಿಲಿನ ಆವರಣಗೋಡೆ ಬಿರುಮಳೆಗೆ ಕುಸಿದಿದೆ. ಸುಮಾರು 25 ಮೀಟರ್‌ ಉದ್ದಕ್ಕೆ ಆವರಣ ಗೋಡೆ ಕುಸಿದಿದೆ.

ಉಕ್ಕಿ ಹರಿದ ಹೊಳೆ 
ಉಪ್ಪಳ ಹೊಳೆ ಉಕ್ಕಿ ಹರಿದು ಹೊಸಂಗಡಿ ಬಾದೆಮಾರ್‌ ಹೊಸಗದ್ದೆ ನಿವಾಸಿ ಗಂಗಾಧರ ಹಾಗೂ ಸಮೀಪದ ಕೊಪ್ಪಳ ಸಂಜೀವ ಅವರ ಮನೆ ಜಲಾವೃತಗೊಂಡಿದೆ. ಈ ಪ್ರದೇಶದ ಗದ್ದೆ, ತೋಡುಗಳಲ್ಲಿ ನೀರು ತುಂಬಿಕೊಂಡಿದೆ. ಭತ್ತ ಕೃಷಿ ಮಾಡಲು ಸಿದ್ಧತೆ ನಡೆಸುತ್ತಿರುವಂತೆ ಗದ್ದೆಗೆ ನೀರು ನುಗ್ಗಿದ್ದರಿಂದ ಕೃಷಿಕರು ಕಂಗಾಲಾಗಿದ್ದಾರೆ.

ಅಪಾಯ ಮಟ್ಟ ಮೀರಿದ ಶಿರಿಯಾ ಹೊಳೆ 
ಎರಡು ದಿನಗಳಿಂದ ಎಡೆಬಿಡದೆ ಸುರಿಯು ತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಸೇರಿದಂತೆ ನದಿಗಳು ತುಂಬಿ ಹರಿಯುತ್ತಿವೆ. ಪೆರ್ಮುದೆ ಸಮೀಪದಿಂದ ಹರಿದು ಕುಂಬಳೆ ಬಳಿಯ ಅರಬಿ ಸುಮುದ್ರ ಸೇರುವ ಶಿರಿಯಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಂಗಡಿ ಮೊಗರು ಸಮೀಪ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಶಿರಿಯಾ ನದಿ ನೀರು ಸಮೀಪದ  ಮಸೀದಿ ಪರಿಸರಕ್ಕೆ ಆವರಿಸಿದೆ.
ಅಂಗಡಿಮೊಗರು ಸೇತುವೆಯ ಇಕ್ಕಡೆ ಯಲ್ಲಿರುವ ಮಸೀದಿಗಳ ಪ್ರಾಂಗಣವು ನದಿ ನೀರಿನಿಂದ ಆವೃತವಾಗಿದೆ. ಶಿರಿಯಾ ನದಿ ಸಮೀಪವಿರುವ ತೆಂಗು ಮತ್ತು ಕಂಗಿನ ತೋಟಗಳಲ್ಲಿ ನದಿ ನೀರು ಹರಿದಿದ್ದು ಸಮೀಪದ ಪ್ರದೇಶ ವಾಸಿಗಳು ಭಯಭೀತರಾಗಿದ್ದಾರೆ. ಮಣಿಯಂಪಾರೆ, ಕನಿಯಾಲ ಸೇರಿದಂತೆ ಕಿದೂರು, ಬಂಬ್ರಾಣ ಪ್ರದೇಶದ ಹೊಲ ಗದ್ದೆಗಳಲ್ಲಿ ನದಿ ನೀರು ಆವೃತವಾಗಿದೆ. ನದಿ ನೀರಿನ ರಭಸ ಹೆಚ್ಚಾದ ಕಾರಣ ಸಮೀಪದ ಪ್ರದೇಶ ವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ದಶಕಗಳ ಹಿಂದಿನ ಪ್ರವಾಹದ ನೆನಪು 
ಶಿರಿಯಾ ನದಿಗೆ ಮಣಿಯಂಪಾರೆ ಹಾಗೂ ಬಂಬ್ರಾಣದಲ್ಲಿ ಎರಡು ಆಣೆಕಟ್ಟುಗಳಿದ್ದು, ಕಿರು ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗಿದೆ. ಎರಡು ದಶಕಗಳ ಹಿಂದೆ ಇದೇ ರೀತಿಯ ಪ್ರವಾಹ ಭೀತಿ ಶಿರಿಯಾ ನದಿ ತಟ ಪ್ರದೇಶದಲ್ಲಿ ಸಂಭವಿಸಿತ್ತು. ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಡಿ ಪ್ರದೇಶದ ಮಾಣಿಲದಲ್ಲಿ ಸಣ್ಣ ಹೊಳೆಗಳು ಶಿರಿಯಾ ನದಿ ಸೇರುತ್ತಿದ್ದು ಗಡಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಭೀತಿ ಹೆಚ್ಚಿದೆ ಎನ್ನಲಾಗಿದೆ. ಉಳಿದಂತೆ ಉಪ್ಪಳ ಹೊಳೆ, ಮಂಜೇಶ್ವರ ಹೊಳೆಗಳು ತುಂಬಿ ಹರಿಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next