ಮಂಗಳೂರು/ಉಡುಪಿ :ಬಂಗಾಲಕೊಲ್ಲಿಯಲ್ಲಿ ಮೇಲ್ಮೆ„ ಸುಳಿಗಾಳಿ ಉಂಟಾಗಿದ್ದು, ಹಿಂಗಾರು ಮಾರುತ ಚುರುಕುಗೊಳ್ಳುವ ನಿರೀಕ್ಷೆ ಇದೆ. ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದ್ದು, ಕರಾವಳಿ ಭಾಗದ ಅಲ್ಲಲ್ಲೂ ಸಾಧಾರಣ ಮಳೆ ಸುರಿಯುವ ನಿರೀಕ್ಷೆ ಇದೆ. ಬುಧವಾರ ಸಾಯಂಕಾಲ ಸುಳ್ಯ ತಾಲೂಕಿನ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯಿತು.
ಕೆಲವು ದಿನಗಳಿಂದ ಬಿಸಿಲು ವಾತವರಣ ಇದ್ದ ಸುಳ್ಯದಲ್ಲಿ ಬುಧ ವಾರ ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಒಂದು ಗಂಟೆ ಸಮಯ ಮಳೆಯಾಯಿತು. ಸುಳ್ಯ ನಗರ, ಅರಂತೋಡು, ಬೆಳ್ಳಾರೆ, ಕಲ್ಮಡ್ಕ, ಜಾಲೂÕರು, ಸಂಪಾಜೆ, ಕಲ್ಲುಗುಂಡಿ, ಸುಬ್ರಹ್ಮಣ್ಯ, ಕೊಲ್ಲಮೊಗ್ರು ಕಡಬ, ಸೇರಿದಂತೆ ವಿವಿಧೆಡೆ ಮಳೆಯಾಯಿತು.
ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಬೆಳ್ತಂಗಡಿ, ಕಲ್ಮಂಜ, ಧರ್ಮಸ್ಥಳ, ಉಜಿರೆ, ಕಡಿರುದ್ಯಾವರ, ಪುತ್ತೂರು, ವಿಟ್ಲ, ಬಳ್ಪ, ಉಬರಡ್ಕ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಭಾಗದಲ್ಲಿ ಸಂಜೆ ವೇಳೆ ಸಣ್ಣದಾಗಿ ಮಳೆಯಾಗಿದೆ.
ಭತ್ತದ ಕೃಷಿಕರಲ್ಲಿ ಆತಂಕ
ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಅಕಾಲಿಕ ಮಳೆಯಿಂದ ಕಟಾವು ಕಾರ್ಯಕ್ಕೆ ಹಿನ್ನಡೆಯಾಗಿದೆ. ಗದ್ದೆಯಲ್ಲಿ ನೀರು ತುಂಬಿದರೆ ಕಟಾವು ಕಾರ್ಯ ಅಸಾಧ್ಯವಾಗುತ್ತದೆ ಅಲ್ಲದೆ ನಿರಂತರ ಮಳೆಯಾದಲ್ಲಿ ತನೆಯಿಂದ ಭತ್ತ ಉದುರಿ ಮೊಳಕೆ ಬರುವ ಸಾಧ್ಯತೆಯೂ ಇದೆ. ಮಳೆ ಮುಂದುವರಿದಲ್ಲಿ ಬೈಹುಲ್ಲಿಗೆ ಹಾನಿಯಾಗುವ ಆತಂಕ ಬೆಳೆಗಾರರದ್ದಾಗಿದೆ. ಉಡುಪಿ, ಮಲ್ಪೆ, ಮಣಿಪಾಲ ಸುತ್ತಮುತ್ತ ಮಧ್ಯಾಹ್ನ ಬಳಿಕ ಸಂಜೆವರೆಗೂ ಬಿಸಿಲು, ಮೋಡದ ವಾತಾವರಣ ನಡುವೆ ಸಣ್ಣದಾಗಿ ಹನಿಹನಿ ಮಳೆಯಾಗಿದೆ.
Related Articles
ಗರಿಷ್ಠ ಉಷ್ಣಾಂಶ ಏರಿಕೆ
ಕರಾವಳಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದೆ. ಮಂಗಳೂರು ನಗರದಲ್ಲಿ 32.4 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. 24 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಮುಂದಿನ 5 ದಿನ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಕೋಲಾರ, ಮಂಡ್ಯ ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಗುರುವಾರ ಯೆಲ್ಲೋ ಅಲರ್ಟ್ ಘೋಷಿಸಿದ್ದು ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಉಳಿದೆಡೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ನ.7ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿದೆ.