ಚಿಕ್ಕಮಗಳೂರು: ಕುಂಭದ್ರೋಣ ಮಳೆಯಿಂದ ಮಲೆನಾಡು ಚಿಕ್ಕಮಗಳೂರು ಅಕ್ಷರಶಃ ನಲುಗಿ ಹೋಗಿದೆ. ಶುಕ್ರವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಕಣಿವೆ ಹಳ್ಳಿಯ ಬಳಿ ಗುಡ್ಡ ಕುಸಿದು ಮಣ್ಣು -ಕಲ್ಲು ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ನಗರದಿಂದ ಶಿವಮೊಗ್ಗ ಹಾಗೂ ಯಶವಂತಪುರಕ್ಕೆ ತೆರಳಬೇಕಿದ್ದ ರೈಲುಗಳ ಸಂಚಾರ ರದ್ದುಪಡಿಸಲಾಯಿತು.
ಮೂಡಿಗೆರೆ ತಾಲೂಕಿನ ಬೈಗೂರು ಗ್ರಾಮದಲ್ಲಿ ಹೇಮಾವತಿಯ ನೀರು 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ತಾಲೂಕಿನ ಕಸ್ಕೆಬೈಲ್ ಎಂಬಲ್ಲಿ ಕೆರೆ ಒಡ್ಡು ಒಡೆದು, 30 ಎಕರೆಗೂ ಹೆಚ್ಚು ಕಾಫಿ ತೋಟ ನಾಶವಾಗಿದೆ. ಕಳಸ ಸೇತುವೆ ಮುಳುಗಿದ್ದು, ಹೊರನಾಡಿಗೆ ಇನ್ನೊಂದು ಸಂಪರ್ಕ ಕಲ್ಪಿಸುತ್ತಿದ್ದ ಹಳುವಳ್ಳಿ ಭಾಗದಲ್ಲೂ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದೆ.
ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾಲುಸಂಕ ಮುಳುಗಡೆಯಾಗಿದೆ. ಭದ್ರಾ ನದಿಗೆ ಸೇರುವ ಉಪನದಿ ಬೆಳ್ಳಾಹೊಳೆ ಉಕ್ಕಿ ಹರಿಯುತ್ತಿದ್ದು, ಹಳ್ಳ ದಾಟಲಾಗದೆ ಸುಮಾರು 100 ಕ್ಕೂ ಅಧಿಕ ಆದಿವಾಸಿಗಳ ಕುಟುಂಬ ಪರದಾಡುತ್ತಿದೆ.
ಕಳಸ ಸಮೀಪದ ಕೋಟೆಹೊಳೆ ಸೇತುವೆ ಭದ್ರಾ ನದಿಯಲ್ಲಿ ಮುಳುಗಡೆಯಾಗಿದ್ದು, 20ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಶೃಂಗೇರಿ ಶಂಕರ ಮಠದ ಗುರುಭವನ ಹಾಗೂ ಗಾಂಧಿ ಭವನಕ್ಕೆ ತುಂಗಾ ನದಿಯ ನೀರು ನುಗ್ಗಿದ್ದು, ಮಠದ ಪ್ರಸಾದ ನಿಲಯವೂ ಜಲಾವೃತವಾಗಿದೆ. ಯಾತ್ರಿ ನಿವಾಸಕ್ಕೂ ನದಿ ನೀರು ನುಗ್ಗಿದ್ದು, ನರಸಿಂಹವನಕ್ಕೆ ತೆರಳುವ ಮಾರ್ಗ ನೀರಿನಲ್ಲಿ ಮುಳುಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ ಹಾಗೂ ಕೊಪ್ಪ ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಿ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್ ಆದೇಶ ಹೊರಡಿಸಿದ್ದಾರೆ.
10 ಕಿ.ಮೀ.ಹೊತ್ತು ತಂದರು: ಮೂಡಿಗೆರೆ ತಾಲೂಕಿನ ಕಳಸದಿಂದ 10 ಕಿ.ಮೀ. ದೂರದ ಕಲ್ಕೋಡು ಗ್ರಾಮದಲ್ಲಿ ಮನೆ ಬಿದ್ದು ಮಹಿಳೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲು ಗ್ರಾಮಸ್ಥರು ಮಹಿಳೆಯನ್ನು ಹೊತ್ತುಕೊಂಡು ಬಂದಿದ್ದಾರೆ. ಮಳೆಯ ಹೊಡೆತಕ್ಕೆ ಸಿಲುಕಿ ಮನೆ ಕುಸಿದಿದ್ದು, ಸರೋಜಾ ಎಂಬುವರು ಗಾಯಗೊಂಡಿದ್ದರು. ಗ್ರಾಮದ ಸಂಪರ್ಕ ಕಡಿತಗೊಂಡಿದ್ದರಿಂದ ಜನರೇ ಆಕೆಯನ್ನು 10 ಕಿ.ಮೀ. ಹೊತ್ತು ಕಳಸ ಪಟ್ಟಣಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement