Advertisement

ಭಾರೀ ಮಳೆ; ಪ್ರಾಣ ಪಣಕ್ಕಿಟ್ಟು ಸೇತುವೆ ದಾಟಿದರು!

06:41 PM Oct 01, 2022 | Team Udayavani |

ತೆಲಸಂಗ: ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಗ್ರಾಮದ ಡೋಣಿ ಹಳ್ಳದ ತಾತ್ಕಾಲಿಕ ಸೇತುವೆ ಕುಸಿದಿದ್ದು ಜನ ಪ್ರಾಣ ಪಣಕ್ಕಿಟ್ಟು ಸೇತುವೆ ದಾಟಿದ ಘಟನೆ ನಡೆದಿದ್ದು, ಬಿಜ್ಜರಗಿ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿ ಹಾಗೂ ಜನಪ್ರತಿನಿ ಧಿಗಳ ವಿರುದ್ಧ ಸ್ಥಳಿಯರಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ಹಗ್ಗ ಹಿಡಿದು ದಾಟಿದರು: ಸಂಜೆ ನಿರಂತರ ಸುರಿದ ಮಳೆಯಿಂದ ಡೋಣಿ ಹಳ್ಳ ತುಂಬಿ ಹರಿಯುತ್ತಿದೆ. ಗ್ರಾಮದ ರೈತರು, ಕೂಲಿ ಕಾರ್ಮಿಕರು, ಹೊಲ-ಗದ್ದೆಗೆ ಹೋಗಿದ್ದವರು ರಾತ್ರಿ 8ರವರೆಗೂ ಹಳ್ಳ ಹರಿಯುವಿಕೆ ಕಡಿಮೆ ಆಗಲೆಂದು ಕಾಯ್ದಿದ್ದಾರೆ. ತೋಟದ ವಸತಿಯಲ್ಲಿನ ಹಗ್ಗ ತರಿಸಿ ಒಂದೆರೆಡು ಕಂಬ ಅಡ್ಡಲಾಗಿ ಹಾಕಿ ಮಹಿಳೆಯರು, ವೃದ್ಧರನ್ನು ಹಗ್ಗದ ಸಹಾಯದಿಂದ ಹಳ್ಳ ದಾಟಿಸಲಾಗಿದೆ.

ಹಳ್ಳ ದಾಟುವುದು ಅನಿವಾರ್ಯವಾಗಿದ್ದರೂ ಸ್ವಲ್ಪ ಕಾಲು ಜಾರಿದ್ದರೂ ನೀರು ಪಾಲಾಗುತ್ತಿದ್ದರು. ಹೀಗೆ ಜನ ತಮ್ಮನ್ನು ತಾವು ಅಪಾಯಕ್ಕೆ ದೂಡಿಕೊಂಡು ಹಳ್ಳ ದಾಟುತ್ತಿದ್ದ ದೃಶ್ಯ, ರಾತ್ರಿ ಹೊತ್ತು ಕೈಯ್ಯಲ್ಲಿ ಜೀವ ಹಿಡಿದು ಹಳ್ಳದಾಟಿ ಮನೆ ಸೇರಿದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಸುಸಜ್ಜಿತ ರಸ್ತೆ ನಿರ್ಮಿಸಬೇಕೆನ್ನುವುದು ಹಲವು ವರ್ಷದಿಂದ ಈ ಭಾಗದ ರೈತರ ಬೇಡಿಕೆಯಾಗಿದೆ. ಆದರೆ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಇತ್ತ ಗಮನಹರಿಸುತ್ತಿಲ್ಲ. ಹೀಗಾಗಿ ಸಮಸ್ಯೆ ಹಾಗೆಯೇ ಉಳಿದಿದೆ. ಮಳೆ ಬಂದು ಹಳ್ಳ ತುಂಬಿದಾಗಲೆಲ್ಲ ಇಲ್ಲಿಯ ಜನ ಅಂತಂತ್ರರಾಗುತ್ತಾರೆ. ಎರಡು ವರ್ಷದ ಹಿಂದೆ ಗ್ರಾಪಂ ವತಿಯಿಂದ ಸಿಮೆಂಟ್‌ ಪೈಪ್‌ ಹಾಕಿ ಗರಸು ಸುರಿಯಲಾಗಿತ್ತು. ಸದ್ಯ ಅದು ಕೂಡ ಈಗ ಪ್ರಯೋಜನಕ್ಕೆ ಬಾರದಂತಾಗಿದೆ.

ಸದ್ಯ ಈಗ ತಾತ್ಕಾಲಿಕ ಸೇತುವೆ ಕುಸಿದಿದ್ದರಿಂದ ಹೊಲಕ್ಕೆ ಟ್ರಾಕ್ಟರ್‌ ಸೇರಿ ಯಾವೊಂದು ವಾಹನವೂ ಓಡಾಡದಂತಾಗಿದೆ. ಗ್ರಾಮದಿಂದ 4 ಕಿ.ಮೀ.ಗಿಂತ ದೂರದ ಈ ಸೇತುವೆ ಇಲ್ಲಿಂದ ಆಚೆ ಇರುವ ವಸತಿಯ ಜನ ತಮ್ಮ ಮಕ್ಕಳನ್ನು ಶಾಲೆಗೆ ತಂದು ಕರೆದೊಯ್ಯಲು, ಬೀಜ-ಗೊಬ್ಬರ ತರಲು, ಕಿರಾಣಿ ಖರೀದಿಸಲು, ಗ್ರಾಮಕ್ಕೆ ತೆರಳಲು ವಾಹನವಿಲ್ಲದೇ ಅಡಚಣೆ ಆಗಿದ್ದು, ತುರ್ತಾಗಿ ವಾಹನಗಳು ಓಡಾಡುವಂತೆ ತಾತ್ಕಾಲಿಕವಾಗಿ ಆದರೂ ಸೇತುವೆ ನಿರ್ಮಿಸುವಂತೆ ರೈತರು ಒತ್ತಾಯಿಸಿದ್ದಾರೆ.

Advertisement

ಇಲ್ಲಿಯ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಜನರ ಸಂಚಾರಕ್ಕೆ ಬೇಕಿರುವ ತಾತ್ಕಾಲಿಕ ವ್ಯವಸ್ಥೆ ಗ್ರಾಪಂ ವತಿಯಿಂದ ಮಾಡಿಕೊಡಲಾಗುವುದು.
ಬೀರಪ್ಪ ಕಡಗಂಚಿ,
ಪಿಡಿಒ, ತೆಲಸಂಗ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next