ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಅವರು ವಿಡಿಯೋ ಸಂವಾದ ನಡೆಸಿ ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿಯ ವಿವರ ಪಡೆದರು. ರೈತರಿಗೆ, ಬಡವರಿಗೆ ತೊಂದರೆ ಆಗದಂತೆ ಕೂಡಲೇ ಪರಿಹಾರ ವಿತರಿಸಿ ಎಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್‌ಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಎಡೆಬಿಡದೆ ಮಳೆ ಸುರಿದಿದೆ. ಆದರೆ ಕಾಳಜಿ ಕೇಂದ್ರ ತೆರೆಯುವ ಸನ್ನಿವೇಶ ನಿರ್ಮಾಣವಾಗಿಲ್ಲ. ಆದರೂ 336 ಗಂಜಿ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. 5272 ಜನರನ್ನು ಸ್ಥಳಾಂತರಿಸುವ ಸಾಮರ್ಥ್ಯ ನಮಗಿದೆ. 168 ಗ್ರಾಮಗಳು ನೆರೆಗೆ ತುತ್ತಾಗುತ್ತವೆ. ಈ ಸಂದರ್ಭದಲ್ಲಿ 185 ದೋಣಿ ಹಾಗೂ 21 ಉರಗ ತಜ್ಞರನ್ನು ಇಟ್ಟುಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಸಿಎಂಗೆ ವಿವರಿಸಿದರು.
ಕಾರವಾರ ನಗರ ಭಾಗದ 3 ಕಡೆ, ಹೊನ್ನಾವರ, ದಾಂಡೇಲಿ ಪಟ್ಟಣದ ತಲಾ 2 ಪ್ರದೇಶ ಮಳೆ ನೀರಿಗೆ ಮುಳುಗುವ ಪ್ರದೇಶ ಎಂದು ಗುರುತಿಸಲಾಗಿದೆ. ಇಲ್ಲಿ ತುರ್ತು ಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದೂ ವಿವರಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಐವರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ತಕ್ಷಣ ತಲಾ 5 ಲಕ್ಷದಂತೆ 25 ಲಕ್ಷ ರೂ. ವಿತರಿಸಲಾಗಿದೆ. ಭಟ್ಕಳ, ಕುಮಟಾ, ಮುಂಡಗೋಡ, ಶಿರಸಿ, ಯಲ್ಲಾಪುರದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದರು. ಮಳೆಯಿಂದ 110 ಮನೆಗಳಿಗೆ 4.174 ಲಕ್ಷ ವಿತರಿಸಲಾಗಿದೆ. 7 ಮನೆಗೆ ಸಂಪೂರ್ಣ ಹಾನಿಯಾಗಿವೆ. 37 ತೀವ್ರ ಹಾನಿಯಾಗಿವೆ. 437 ಭಾಗಶಃ ಹಾನಿಯಾಗಿವೆ. 11 ದನದ ಕೊಟ್ಟಿಗೆ ನಾಶವಾಗಿವೆ. 437 ಮನೆಗಳಿಗೆ ಭಾಗಶಃ ಹಾನಿ ಪೈಕಿ 141 ಪ್ರಕರಣ ತಿರಸ್ಕರಿಸಲಾಗಿದೆ. 316 ಮನೆಗಳಿಗೆ 45.41 ಲಕ್ಷ ಪರಿಹಾರವಾಗಿ ವಿತರಿಸಲಾಗಿದೆ. 35 ಪ್ರಕರಣ ಬಾಕಿ ಇವೆ. ಮನೆಗಳಿಗೆ ನೀರು ನುಗ್ಗಿ ಬಟ್ಟೆ, ಪಾತ್ರೆ, ಆಹಾರಧಾನ್ಯ ಹಾಳಾಗಿತ್ತು. 135 ದೋಣಿಗಳಿಗೆ ಹಾನಿಯಾಗಿದ್ದು, 3.51 ಲಕ್ಷ ಪರಿಹಾರ ವಿತರಿಸಲಾಗಿದೆ.
ತೋಟಗಾರಿಕಾ ಬೆಳೆಯ ಪೈಕಿ 129.36 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದಕ್ಕೆ ಪರಿಹಾರವಾಗಿ 24.76 ಲಕ್ಷ ವಿತರಿಸಲಾಗಿದೆ. ಸದಾ ಬೆಳೆಯ ಪೈಕಿ 48.40 ಹೆಕ್ಟೇರ್ ಹಾನಿಯಾಗಿದೆ. 6.10 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಜಿಲ್ಲೆಯಲ್ಲಿ 70041.0 ಹೆಕ್ಟೇರ್ ಭೂಮಿ ಬೆಳೆಯುವ ಭೂಮಿಯಾಗಿದ್ದು, ಈ ಪೈಕಿ 384720 ಹೆಕ್ಟೇರ್ ಭೂಮಿ ಬಿತ್ತನೆಯಾಗಿದೆ. ಶೇ.54.93 ರಷ್ಟು ಕೃಷಿ ಕಾರ್ಯ ಆಗಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಪರಿಹಾರಕ್ಕೆ 51.07 ಕೋಟಿ ರೂ. ಹಣವಿದೆ ಎಂದು ಡಿಸಿ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಸಿಇಒ ಪ್ರಿಯಂಕಾ, ಎಸ್ಪಿ ಶಿವಪ್ರಕಾಶ್ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.