Advertisement

ವರ್ಷಧಾರೆಯಿಂದ ಕೃಷಿ ಕೆಲಸಕ್ಕೆ ಅಡ್ಡಿ

10:48 PM Oct 13, 2020 | mahesh |

ಬೆಳ್ತಂಗಡಿ: ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಹೆಚ್ಚಾಗಿದ್ದು, ಭತ್ತದ ಬೆಳೆ ಗಾಳಿ-ಮಳೆಗೆ ನೆಲಕಚ್ಚಿದೆ. ಏಣೆಲು ಭತ್ತ ಬೆಳೆ ಇನ್ನೆರಡು ದಿನ ಬಿಸಿಲು ಬಿದ್ದಿದ್ದರೆ ಕಟಾವಿಗೆ ಸಿದ್ಧವಾಗುತ್ತಿತ್ತು. ಆದರೆ ಪ್ರಸಕ್ತ ನಿರಂ ತರ ಮಳೆಯಾಗಿದ್ದುದರಿಂದ ಭತ್ತ ನೆಲ ಕಚ್ಚುತ್ತಿದೆ. ಯಂತ್ರೋಪಕರಣಗಳು ಸಾಗದ ಗ್ರಾಮೀಣ ಭಾಗಗಳಲ್ಲಿ ಕೆಲಸಗಾರರನ್ನು ಅವಲಂಬಿಸಿದ ಬೆಳೆಗಾರರಿಗೆ ಕಟಾವಿಗೆ ಸಮಸ್ಯೆ ಯಾಗತೊಡಗಿದೆ.

Advertisement

ಚಾರ್ಮಾಡಿ ಘಾಟಿ ಪ್ರದೇಶ ಹಾಗೂ ವನ್ಯಜೀವಿ ಅರಣ್ಯ ದಂಚಿ ನಲ್ಲಿರುವ ನೆರಿಯ, ಬರಯ ಕನ್ಯಾಡಿ, ಮಿತ್ತಬಾಗಿಲು, ಕಡಿರು ದ್ಯಾವರ, ಮಲವಂತಿಗೆ, ದಿಡುಪೆ ಸಹಿತ ಧರ್ಮಸ್ಥಳ, ಬೆಳ್ತಂಗಡಿ, ವೇಣೂರು, ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಂಗಳವಾರವೂ ಮುಂಜಾನೆಯಿಂದಲೇ ಮಳೆ ಅಧಿಕ ವಾಗಿದ್ದು, ಮಧ್ಯಾಹ್ನ ಬಳಿಕ ಇಬ್ಬನಿ ಮಳೆಯಾಗಿದೆ. ಪರಿಣಾಮ ಕೃಷಿ ಕೆಲಸಗಳಿಗೆ ಅಡ್ಡಿಯಾಗಿದೆ ಮತ್ತು ಹಾನಿ ಉಂಟಾಗಿದೆ. ಇದು ಏಣೆಲು ಭತ್ತದ ಕಟಾವಿನ ಸಮಯವಾಗಿದ್ದು, ಮಳೆ ಸುರಿಯುತ್ತಿರುವ ಕಾರಣ ಕಟಾವು, ಸಂಗ್ರಹ, ಒಣಗಿಸುವ ಕಾರ್ಯಗಳಿಗೆ ತೊಂದರೆ ಎದುರಾಗಿದೆ. ಮಳೆಯಿಂದ ಭತ್ತದ ಪೈರು ಅಡ್ಡಬಿದ್ದು ಬೆಳೆ ನಾಶವಾಗುತ್ತಿದೆ.

ನಾಟಿಯ ಬಳಿಕ ಮಂಗ, ಕಾಡು ಹಂದಿ, ನವಿಲು, ಕಡವೆ ಮೊದಲಾದ ವನ್ಯ ಜೀವಿಗಳಿಂದ ಬೆಳೆರಕ್ಷಣೆ ಸವಾಲಾಗಿದ್ದು, ಬೆಳೆ ಕಟಾವಿನ ಹಂತಕ್ಕೆ ಮಳೆಯಿಂದ ತೊಂದರೆ ಉಂಟಾಗಿರುವುದು ಕೃಷಿಕರಲ್ಲಿ ತೀವ್ರ ಆತಂಕ ತಂದೊಡ್ಡಿದೆ. ಅಡಿಕೆ ಗಿಡಗಳ ಬುಡ ಬಿಡಿಸಿ ಗೊಬ್ಬರ ನೀಡಲು, ಅಡಿಕೆ ಗಿಡ ನೆಡಲು ಇದು ಸಕಾಲವಾಗಿತ್ತು. ಗುಂಡಿಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಕೆಲಸ ಮುಂದುವರಿಸಲು ತೊಂದರೆ ಉಂಟಾಗಿದೆ. ರಬ್ಬರ್‌ ಬೆಳೆಗಾರರು ಕೂಡ ಮಳೆಗಾಲದಲ್ಲಿ ಟ್ಯಾಪಿಂಗ್‌ಗೆ ಹಾಕಿರುವ ಪ್ಲಾಸ್ಟಿಕ್‌ ಸೋರುವ ಕಾರಣ ಹಾಗೂ ಬೆಳಗ್ಗೆಯೆ ಮಳೆ ಸುರಿಯುವ ಕಾರಣ ಟ್ಯಾಪಿಂಗ್‌ ನಡೆಸಲು ತೊಂದರೆ ಎದುರಾಗಿದೆ.

ಭೂ ಸಮತಟ್ಟಿಗೆ ಅಡ್ಡಿ
ಬೆಳ್ತಂಗಡಿ ತಾಲೂಕಿನಾದ್ಯಂತ ಬಹುತೇಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಬೆಂಬಿಡದ ಮಳೆಯಿಂದಾಗಿ ಡಾಮರು ಹಾಕುವ ಮುನ್ನ ಭೂ ಸಮತಟ್ಟು ಮಾಡುವ ಕಾರ್ಯಕ್ಕೆ ಅಡ್ಡಿಯಾಗಿದೆ. ಕೆಲವೆಡೆ ಡಾಮರು ಕಾಮಗಾರಿಗೆ ನೆಲ ಅಗೆದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next