Advertisement
ಚಿತ್ತಾಪುರ ತಾಲೂಕಿನಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ವರುಣನಾರ್ಭಟಕ್ಕೆ ರೈತರು ಬೆಚ್ಚಿಬಿದ್ದಿದ್ದಾರೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆಟುಕುವ ಮೊದಲೇ ನೀರು ಪಾಲಾಗುತ್ತಿರುವುದನ್ನು ಕಂಡು ಮರುಗುತ್ತಿದ್ದಾರೆ. ಮೋಡ ಮುಗಿಲು ಆವರಿಸಿಕೊಂಡು ಕಗ್ಗತ್ತಲು ಆವರಿಸುತ್ತಿದ್ದಂತೆ ಭಾರಿ ಮಳೆಯ ಮುನ್ಸೂಚನೆ ಮೂಡಿ ಮಳೆಯ ಅಬ್ಬರ ಹೆಚ್ಚಿತ್ತು. ಒಂದೇ ನಿಮಿಷದಲ್ಲಿ ಹೊಲಗದ್ದೆಗಳು ನೀರಿನಿಂದ ಭರ್ತಿಯಾಗಿ ಬೆಳೆ ಮುಳುಗಿ ಜಲಪ್ರಳಯದ ದೃಶ್ಯ ಕಾಣಿಸಿತು.
Related Articles
Advertisement
ಹೆಸರು, ತೊಗರಿ, ಉದ್ದು, ಸೇಂಗಾ ಬೆಳೆಗಳೆಲ್ಲವೂ ನೀರುಪಾಲಾದ ಸ್ಥಿತಿಗೆ ಮರುಗಿದರು. ಅತಿವೃಷ್ಟಿಗೆ ಸಿಲುಕಿದ ಚಿತ್ತಾಪುರ ಮತಕ್ಷೇತ್ರದ ರೈತರ ಸಂಕಷ್ಟಕ್ಕೆ ನೆರವಾಗುವುದಾಗಿ ಭರವಸೆ ನೀಡಿದ ಪ್ರಿಯಾಂಕ್, ಬೆಳೆ ಸಮೀಕ್ಷೆಗೆ ಮುಂದಾಗುವಂತೆ ತಾಲೂಕಿನ ಅ ಧಿಕಾರಿಗಳಿಗೆ ಆದೇಶ ನೀಡಿದರು.
ಪರಿಹಾರಕ್ಕಾಗಿ ರೈತರ ಮನವಿ
ಮಳೆಯನ್ನೇ ನಂಬಿ ಮುಂಗಾರು ಬಿತ್ತನೆ ಮಾಡಿದ್ದ ನಾಲವಾರ ವಲಯದ ರೈತರು, ಮಳೆ ಹೊಡೆತದಿಂದಾಗಿ ಬೆಳೆ ನಷ್ಟ ಅನುಭವಿಸುವ ಮೂಲಕ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಕೃಷಿ ಚಟುವಟಿಕೆ ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ತತ್ತರಿಸಿದ್ದಾರೆ. ಆರಂಭದಲ್ಲಿ ಮಳೆ ಕೊರತೆ ಕಾಣಿಸಿತು. ಈಗ ಮಳೆ ಹೆಚ್ಚಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡಕ್ಕೂ ಸಿಲುಕಿ ಬೆಳೆ ಕೈಕೊಟ್ಟಿದೆ. ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದ್ದ ಹೆಸರು ಕೂಡ ಕೈಬಿಟ್ಟಿತು. ತೊಗರಿ ಮರು ಬಿತ್ತನೆ ಮಾಡಿದರೂ ಬದುಕುವ ಲಕ್ಷಣ ಕಾಣುತ್ತಿಲ್ಲ. ಈ ವರ್ಷ ಮತ್ತೆ ಬದುಕಿನ ಮೇಲೆ ಸಾಲದ ಹೊರೆ ಬಿದ್ದಿದೆ. ಸರ್ಕಾರದಿಂದ ಪರಿಹಾರ ಒದಗಿಸಿಕೊಡಬೇಕು ಎಂದು ರೈತರು ಶಾಸಕ ಖರ್ಗೆಗೆ ಮನವಿ ಮಾಡಿದ್ದಾರೆ.