ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದೆ. ಹಲವೆಡೆ ಗುಡ್ಡ ಕುಸಿತವಾಗಿ ರಸ್ತೆ ಸಂಚಾರಕ್ಕೆ ತೊಡಕಾಗಿದೆ.
ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಶೃಂಗೇರಿ ನದಿ ತಟದ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ನದಿ ಪ್ರವಾಹಕ್ಕೆ ಕಾರೊಂದು ಮುಳುಗಡೆಯಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ತುಂಗಾ ನದಿಯು ಉಕ್ಕಿ ಹರಿಯುತ್ತಿದ್ದು, ಶೃಂಗೇರಿ ಪಟ್ಟಣದ ಹಲವು ಮನೆಗಳು ಜಲಾವೃತವಾಗಿದೆ. ಇಲ್ಲಿನ ಗಾಂಧಿ ಮೈದಾನ ಜಲಾವೃತವಾಗಿದ್ದು, ಕಪ್ಪೆ ಶಂಕರ ದೇವಾಲಯ ಕೂಡ ಮುಳುಗಡೆಯಾಗಿದೆ.
ಮಂಗಳೂರು ಶೃಂಗೇರಿ ಹೆದ್ದಾರಿ ಬಂದ್: ತುಂಗಾ ನದಿ ಪ್ರವಾಹದ ಕಾರಣದಿಂದ ಮಂಗಳೂರು ಶೃಂಗೇರಿ ಹೆದ್ದಾರಿ ಬಂದ್ ಆಗಿದೆ. ರಸ್ತೆಯ ಮೇಲೆ ನೀರು ಉಕ್ಕಿ ಹರಿಯುತ್ತಿರುವ ಕಾರಣ ಸಂಚಾರ ಸ್ಥಗಿತವಾಗಿದೆ. ರಾತ್ರಿಯಿಂದಲೇ ಪ್ರಯಾಣಿಕರು ಪರದಾಟ ಪಡುವಂತಾಗಿದೆ.
ಇದನ್ನೂ ಓದಿ: ಚಾರ್ಮಾಡಿಯಲ್ಲಿ ಮತ್ತೆ ಕುಸಿಯುತ್ತಿರುವ ಗುಡ್ಡ: ಸಂಚಾರಕ್ಕೆ ತಡೆ
ಮಳೆಗೆ ಎರಡನೇ ಬಲಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ ಮಹಾಮಳೆಗೆ ಎರಡನೇ ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಅಂಡವಾನೆ ಗ್ರಾಮದಲ್ಲಿ ವ್ಯಕ್ತಿಯೋರ್ವ ಗದ್ದೆಯಲ್ಲಿ ಹೋಗುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಶಂಕರ (40 ವರ್ಷ) ಮೃತ ದುರ್ದೈವಿ. ಗದ್ದೆಗಳಿಗೆ ಭದ್ರಾ ಹಿನ್ನೀರು ನುಗ್ಗಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.