ಕುಮಟಾ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲೂಕಿನ ಹಲವೆಡೆಗಳಲ್ಲಿ ನೀರು ತುಂಬಿದ್ದು,ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೂ ನೀರು ನುಗ್ಗಿ ಖಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ಬಂದೊದಗಿದೆ.
ನಿರಂತರವಾಗಿ ಸುರಿದ ಮಳೆಗೆ ತಾಲೂಕಿನ ಬರ್ಗಿ ಹಾಗೂ ಹಂದಿಗೋಣ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಹೊಳೆಗದ್ದೆಯ ರಾಮನಗಿಂಡಿಯಲ್ಲಿ ಗುಡ್ಡ ಕುಸಿದಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಿರೇಗುತ್ತಿಯಲ್ಲಿ ನಾಗಮ್ಮ ಹಳ್ಳೇರ್ ಎನ್ನುವವರ ಮನೆಯ ಗೋಡೆ ಕುಸಿದಿದೆ. ಬರ್ಗಿಯಲ್ಲಿ ಎರಡು ಮನೆಗಳಿಗೆ ನೀರು ನುಗ್ಗಿದ್ದು, ಹಂದಿಗೋಣ ಭಾಗದಲ್ಲಿ ಒಟ್ಟೂ 8 ಮನೆಗಳಿಗೆ ನೀರು ನುಗ್ಗಿದ್ದು, ಓರ್ವರ ಮನೆ ಭಾಗಶಃ ಮುಳುಗಡೆಯಾಗಿದೆ. ಹೀಗಾಗಿ ಓರ್ವರ ಕುಂಟುಂಬದ 6 ಮಂದಿ ಸದಸ್ಯರು ಹಂದಿಗೋಣ ಶಾಲೆಯಲ್ಲಿ ತೆರೆದ ಖಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಮುಂಜಾನೆ ನೀರು ಮನೆಗಳಿಗೆ ನುಗ್ಗುತ್ತಿದ್ದಂತೆ, ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಅಣ್ಣಯ್ಯ ಲಂಬಾಣಿ ಭೇಟಿ ನೀಡಿ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು. ಬಳಿಕ ತಹಶಿಲ್ದಾರ್ ಎಸ್.ಎಸ್ ನಾಯ್ಕಲ್ಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸಂತ್ರಸ್ತ ಗ್ರಾಮಸ್ಥರಾದ ನವೀನ್ ಪಟಗಾರ,ನಾಗೇಶ ಮುಕ್ರಿ, ವಿಷ್ಣು ಪಟಗಾರ ಮಾತನಾಡಿ ಹಿಂದೆ ಹಂದಿಗೋಣ ಭಾಗದಲ್ಲಿ ನೆರೆಯ ಪ್ರಮಾಣ ಅಷ್ಟಾಗಿ ಇದ್ದಿರಲಿಲ್ಲ.ಇಲ್ಲಿ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು, ನದಿಗಳನ್ನು ಸೇರಿಕೊಳ್ಳುತ್ತಿತ್ತು.ಆದರೆ ಇಲ್ಲಿನ ಖಾಸಗಿ ಜಮೀನುಗಳನ್ನು ಖರೀದಿಸಿದವರು ನೀರು ಹಾದು ಹೋಗುವ ಮಾರ್ಗಗಳನ್ನು ಮುಚ್ಚಿ ಮಣ್ಣು ತುಂಬಿದ್ದರ ಪರಿಣಾಮ ಮೊದಲ ಮಳೆಯಲ್ಲಿಯೇ ನೆರೆಯ ಪರಿಸ್ಥಿತಿ ಅನುಭವಿಸುವಂತಾಗಿದೆ. ಈ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲ ಸೇರಿ ಮನವಿ ನೀಡಿ, ನೀರು ಹೋಗುವ ದಾರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ ಜನರ ಮನವಿಗೆ ಸ್ಪಂದಿಸದ ಕಾರಣ ಈಗ ಸಮಸ್ಯೆ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಧಾರಾಕಾರ ಮಳೆ ಪ್ರವಾಹ ಭೀತಿ ಎದುರಿಸಲು ಜಿಲ್ಲಾಡಳಿತದ ಸೂಚನೆಯಂತೆ ತಾಲೂಕಾಡಳಿತದಿಂದ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ಭಾಗಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದ್ದು, ಸಾರ್ವಜನಿಕರು ಅಪಾಯದ ಮುನ್ಸೂಚನೆಯಲ್ಲಿ ಕಂಟ್ರೋಲ್ ರೂಮ್ ಸಂಖ್ಯೆ
08386-222054 ಗೆ ಕರೆಮಾಡಿ ತಿಳಿಸಬಹುದಾಗಿದೆ.
– ಎಸ್.ಎಸ್ ನಾಯ್ಕಲ್ಮಠ. ತಹಸಿಲ್ದಾರ್, ಕುಮಟಾ.
ಇದನ್ನೂ ಓದಿ: ಭಾರೀ ಮಳೆ ನಡುವೆ ನೋಡನೋಡುತ್ತಿದ್ದಂತೇ ಕುಸಿದು ಬಿದ್ದ ರಸ್ತೆ.. ಕಾರು ಚಾಲಕ ಪವಾಡಸದೃಶ ಪಾರು