Advertisement

ಮಳೆ ಅಬ್ಬರ; ಹುಬ್ಬಳ್ಳಿ ಜನಜೀವನ ತತ್ತರ

08:33 AM Jun 24, 2019 | Suhan S |

ಹುಬ್ಬಳ್ಳಿ: ನಗರದಲ್ಲಿ ರವಿವಾರ ಮಧ್ಯಾಹ್ನ ರಭಸದ ಮಳೆ ಸುರಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯವಾಯಿತು.

Advertisement

ಮಧ್ಯಾಹ್ನ 1:45ರ ಸುಮಾರಿಗೆ ಆರಂಭಗೊಂಡ ಮಳೆ 3 ಗಂಟೆವರೆಗೆ ಜೋರಾಗಿ ಸುರಿಯಿತು. ನಂತರ ಸಂಜೆ 5 ಗಂಟೆವರೆಗೂ ತುಂತುರು ಮಳೆಯಾಯಿತು. ಗುಡಿಹಾಳ ರಸ್ತೆಯಲ್ಲಿ ಹಾಗೂ ಕೆ.ಬಿ. ನಗರದ 2ನೇ ಕ್ರಾಸ್‌ನಲ್ಲಿ 2 ಮರಗಳು ಮನೆಯ ಮೇಲೆ ಬಿದ್ದಿದ್ದು, ಮಳೆ ನಿಂತ ಮೇಲೆ ಅವನ್ನು ತೆರವುಗೊಳಿಲಾಯಿತು.

ನಗರದ ನ್ಯೂ ಕಾಟನ್‌ ಮಾರ್ಕೆಟ್ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ನೀರು ನುಗ್ಗಿ ತೊಂದರೆ ಉಂಟಾಯಿತು. ದಾಜಿಬಾನ ಪೇಟೆ, ಕೊಪ್ಪಿಕರ ರಸ್ತೆಯ ಕೆಲ ವಾಣಿಜ್ಯ ಮಳಿಗೆಗಳ ಅಂಡರ್‌ಗ್ರೌಂಡ್‌ ಮಳಿಗೆಯಲ್ಲಿ ಮಳೆ ನೀರು ನುಗ್ಗಿತ್ತು. ಅಂಗಡಿಕಾರರು ನೀರನ್ನು ಹೊರತೆಗೆಯಲು ಹರಸಾಹಸ ಮಾಡುತ್ತಿದ್ದುದು ಕಂಡುಬಂತು. ಪಂಪ್‌ಗ್ಳನ್ನು ಬಳಕೆ ಮಾಡಿಕೊಂಡು ನೀರು ಹೊರತೆಗೆಯಲಾಯಿತು. ಆದರೆ ಕೆಲವೆಡೆ ವಿದ್ಯುತ್‌ ಸಂಪರ್ಕ ಇಲ್ಲದ್ದರಿಂದ ಅಂಗಡಿಕಾರರು ಪರದಾಡಬೇಕಾಯಿತು.

ದಾಜಿಬಾನ ಪೇಟೆ ಹಾಗೂ ಕೊಪ್ಪಿಕರ ರಸ್ತೆಯಲ್ಲಿ ಮಳೆ ನೀರಿನ ರಭಸಕ್ಕೆ ರಸ್ತೆ ಪಕ್ಕ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಕೊಚ್ಚಿಕೊಂಡು ಸ್ವಲ್ಪ ದೂರ ಹೋಗಿರುವುದು ವರದಿಯಾಗಿದೆ. ರಸ್ತೆ ಪಕ್ಕದ ಸಣ್ಣ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳು ಸರಕುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಯತ್ನಿಸುತ್ತಿದ್ದುದು ಕಂಡುಬಂತು.

Advertisement

ಗಣೇಶ ನಗರ, ಸದರಸೋಫಾ, ಮದನಿ ಕಾಲೋನಿ, ಪಾಟೀಲ ಗಲ್ಲಿ, ಪಡದಯ್ಯನಹಕ್ಕಲ, ಬಮ್ಮಾಪುರ ಓಣಿ, ಎಸ್‌.ಎಂ. ಕೃಷ್ಣ ನಗರ, ನೇಕಾರ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಸರಂಜಾಮುಗಳನ್ನು ರಕ್ಷಿಸಿಕೊಳ್ಳುವಲ್ಲಿ ನಿರತರಾಗಿದ್ದರು. ರಾಜಕಾಲುವೆ ಪಕ್ಕದ ಕೊಳಚೆ ಪ್ರದೇಶಗಳಿಗೂ ಮಳೆ ನೀರು ನುಗ್ಗಿದ್ದು ವರದಿಯಾಗಿದೆ. ಅಲ್ಲದೇ ಜಗದೀಶ ನಗರದಲ್ಲಿ ವಿಮಾನ ನಿಲ್ದಾಣದ ಆವರಣ ಗೋಡೆ ಎರಡು ಕಡೆ ಕುಸಿದ ಘಟನೆಯೂ ನಡೆದಿದೆ.

ಹುಬ್ಬಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಮಳೆಯಾಗಿದ್ದು, ಮುಂಗಾರು ಬಿತ್ತನೆಗೆ ಹಿಂದೇಟು ಹಾಕಿದ್ದ ರೈತರಲ್ಲಿ ಈಗ ಆಶಾಭಾವನೆ ಮೂಡಿದೆ.

•ಜಲಪಾತ್ರೆಯಾದ ವಾಣಿಜ್ಯ ಸಂಕೀರ್ಣಗಳ ತಳ

•ಮುಂಗಾರು ಬಿತ್ತನೆಗೆ ಕಾದಿದ್ದ ರೈತರಲ್ಲಿ ಸಂತಸ

•ಹೊಳೆಯಂತಾದ ರಸ್ತೆ-ಕೊಚ್ಚಿ ಹೋದ ಬೈಕ್‌

•ಮನೆಗಳ ಮೇಲೆ ಎರಗಿದ ಮರಗಳು; ತೆರವು

•ನೂರಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

•ನೀರನ್ನು ಹೊರಹಾಕಲು ಜನರ ಹರಸಾಹಸ

ಸಂತ್ರಸ್ತರಿಗೆ ಇಂದಿರಾ ಊಟ: ರವಿವಾರ ‌ಹರಿದ ಮಳೆಗೆ ಎಸ್‌.ಎಂ. ಕೃಷ್ಣ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿ ಊಟಕ್ಕೆ ಪರದಾಡುತ್ತಿದ್ದ ಜನರಿಗೆ ಇಂದಿರಾ ಕ್ಯಾಂಟೀನ್‌ನಿಂದ ಉಚಿತ ಊಟ ವಿತರಿಸಲಾಗಿದೆ. ಮಧ್ಯಾಹ್ನದಿಂದ ಸುರಿದ ಮಳೆಗೆ ತಗ್ಗು ಪ್ರದೇಶಗದ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ಅಲ್ಲಿನ ಸ್ಥಿತಿ ನೋಡಿ ಇಂದಿರಾ ಕ್ಯಾಂಟೀನ್‌ದವರಿಗೆ ಊಟ ವಿತರಿಸುವಂತೆ ವಿನಂತಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಮನೆಗಳಿಗೆ ತೆರಳಿ ಊಟದ ಕೂಪನ್‌ ನೀಡಿ ಬಂದಿದ್ದಾರೆ. ನಂತರ ಇಂದಿರಾ ಕ್ಯಾಂಟೀನ್‌ಗೆ ಅಗಮಿಸಿ ಜನರು ಊಟ ಮಾಡಿದ್ದಾರೆ.
ಅರಳಿಕಟ್ಟಿ ಓಣಿಯಲ್ಲಿ ಪ್ರತಿಭಟನೆ:

ಮಂಟೂರು ರಸ್ತೆಯ ಅರಳಿಕಟ್ಟೆ ಓಣಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾಗಿದ್ದರಿಂದ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹಲವು ಬಾರಿ ಚರಂಡಿ ಅಗಲೀಕರಣ ಮಾಡುವಂತೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಪ್ರತಿ ಬಾರಿ ಜೋರಾಗಿ ಮಳೆ ಬಂದಾಗ ನೀರು ಮನೆಯೊಳಗೆ ಸೇರುತ್ತದೆ. ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಬ್ಬಯ್ಯ, ಮನೆಗಳ ಸ್ಥಿತಿ-ಗತಿ ವೀಕ್ಷಿಸಿದರು. ಮಳೆಯಿಂದ ನೀರು ಹರಿದು ಹೋಗಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಾಲಿಕೆಯಿಂದ ಗಂಜಿ ಕೇಂದ್ರ:

ಅರಳಿಕಟ್ಟಿ ಓಣಿಯ 150 ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಪಾಲಿಕೆಯ ವಿಪತ್ತು ನಿರ್ವಹಣಾ ತಂಡದಿಂದ ಮಳೆಯಿಂದ ಹಾನಿಗೊಳಗಾದ ಜನರನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಿ ಗಂಜಿ ಕೇಂದ್ರ ತೆರೆಯಲಾಗಿದೆ. ಎಸ್‌.ಎಂ. ಕೃಷ್ಣ ನಗರದಲ್ಲಿ ಮಳೆಯಿಂದಾಗಿ ಮೂರು ಮನೆಗಳ ಗೋಡೆಗಳು ಕುಸಿದಿವೆ. ಮೂರು ಮನೆಗಳ ನಿವಾಸಿಗಳು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕಸದಿಂದ ಕಟ್ಟಿದ ನಾಲಾಗಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಪ್ರಶಾಂತಕುಮಾರ ತಿಳಿಸಿದ್ದಾರೆ.
ಧಾರಾನಗರಿಯಲ್ಲಿ ಮಳೆ: ಧಾರಾನಗರಿಯಲ್ಲಿ ರವಿವಾರ ಮಧ್ಯಾಹ್ನ 3 ಗಂಟೆಯಿಂದ ಅರ್ಧ ತಾಸಿಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಟೋಲ್ನಾಕಾ ಸೇರಿದಂತೆ ವಿವಿಧೆಡೆ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತ ಆಗಿತ್ತು. ನಗರವಷ್ಟೆ ಅಲ್ಲದೇ ಗ್ರಾಮೀಣದಲ್ಲೂ ಉತ್ತಮ ಮಳೆ ಆಗಿದ್ದು, ಮಳೆಗಾಲದ ತಂಪಾದ ವಾತಾವರಣ ಮೂಡಿದೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ, ಯಾದವಾಡ, ದೇವರ ಹುಬ್ಬಳ್ಳಿ ಸೇರಿದಂತೆ ಕಲಘಟಗಿ ಭಾಗದ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ ಆಗಿದೆ. ದೇವರಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ 1 ತಾಸಿಗೂ ಹೆಚ್ಚು ಕಾಲ ಧಾರಾಕಾರ ಮಳೆ ಆಗಿದ್ದು, ವಿದ್ಯುತ್‌ ಸ್ಥಗಿತಗೊಂಡಿತ್ತು. ನಗರ ಹಾಗೂ ಗ್ರಾಮೀಣದಲ್ಲಿ ತಡರಾತ್ರಿವರೆಗೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದ ವರದಿಯಾಗಿಲ್ಲ.
Advertisement

Udayavani is now on Telegram. Click here to join our channel and stay updated with the latest news.

Next