Advertisement

ಕರಾವಳಿಯಲ್ಲಿ ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ

11:21 AM Jul 06, 2022 | Team Udayavani |

ಮಂಗಳೂರು/ ಉಡುಪಿ: ಮಹಾ ಮಳೆ ನಕ್ಷತ್ರಗಳಲ್ಲಿ ಎರಡನೆಯದಾದ ಪುನರ್ವಸು ಆರಂಭದ ಮುನ್ನಾದಿನ ಮಂಗಳವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಬೆಳಗ್ಗೆ ಆರಂಭವಾದ ಮಳೆ ದಿನಪೂರ್ತಿ ಬಿಡದೆ ಸುರಿದಿದೆ. ನದಿ, ಹೊಳೆಗಳು ಉಕ್ಕಿ ಹರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.

Advertisement

ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದ ಅಂಗಣಕ್ಕೆ ಮಧು ವಾಹಿನಿ ನದಿಯ ಪ್ರವಾಹ ಪ್ರವೇಶಿಸಿತ್ತು. ಉಡುಪಿ ಜಿಲ್ಲೆಯ ಮಾರಣಕಟ್ಟೆ, ಕಮಲಶಿಲೆ ದೇಗುಲಗಳೂ ಜಲಾವೃತಗೊಂಡಿದ್ದವು. ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಗೆ ಅಪಾಯ ಉಂಟಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಕಲ್ಲಡ್ಕ – ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯಲ್ಲಿಯೂ ಸಾರಡ್ಕ ಬಳಿ ಗುಡ್ಡ ಕುಸಿದು ಸಂಚಾರ ಸ್ವಲ್ಪ ಕಾಲ ಸ್ಥಗಿತಗೊಂಡಿತ್ತು.

ಉಡುಪಿ -ಶಿವಮೊಗ್ಗ ಸಂಪರ್ಕಿಸುವ ರಾ.ಹೆ. 169 ಎ ರಸ್ತೆಯ ಹೆಬ್ರಿ ಸೀತಾನದಿ ಬಳಿ ನೆರೆನೀರು ರಸ್ತೆಯ ಮೇಲೆ ಉಕ್ಕಿ ಹರಿದು ಒಂದು ತಾಸು ಕಾಲ ಸಂಚಾರ ಬಂದ್‌ ಆಗಿತ್ತು. ಭಾರೀ ಮಳೆಯಿಂದಾಗಿ ಆಗುಂಬೆ, ಬಾಳೆಬರೆ ಸಹಿತ ಘಾಟಿ ರಸ್ತೆಗಳು ಜರ್ಝರಿತಗೊಂಡಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಮನೆಗಳಿಗೆ ಪೂರ್ಣ ಹಾನಿ; 15 ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ ಮೆಸ್ಕಾಂಗೆ ಅಂದಾಜು 51 ಲಕ್ಷ ರೂ. ನಷ್ಟ ಉಂಟಾಗಿದೆ. ಮಂಗಳೂರಿನಲ್ಲಿ ಮೋರ್ಗನ್ಸ್‌ ಗೇಟ್‌ ಸಮೀಪ ತಡೆಗೋಡೆ ಮನೆ ಮೇಲೆ ಕುಸಿದು ಐವರಿಗೆ ಗಾಯಗಳಾಗಿವೆ.

ಕರಾವಳಿ ಪ್ರದರ್ಶನ ಮೈದಾನ ಮುಂಭಾಗ ಬೃಹತ್‌ ಮರ ಬಿದ್ದು ವಿದ್ಯುತ್‌ ಕಂಬ ಧರಾಶಾಯಿಯಾಗಿ, ಸ್ಕೂಟರ್‌ ಜಖಂಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ವಿದ್ಯುತ್‌ ಕಂಬಗಳು, ಟ್ರಾನ್ಸ್‌ ಫಾರ್ಮರ್‌, ತಂತಿ ಗಳಿಗೆ ಹಾನಿ ಉಂಟಾಗಿದ್ದು, 68.69 ಲ.ರೂ. ನಷ್ಟವಾಗಿದೆ. ಮೂಳೂರು ತೊಟ್ಟಂ, ಮರವಂತೆ, ಉಳ್ಳಾಲ ಪರಿಸರಗಳಲ್ಲಿ ಕಡಲ್ಕೊರೆತ ತೀವ್ರವಾಗಿತ್ತು. ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ತೊಂದರೆ ಅನುಭವಿಸಿದರು.

Advertisement

 ಮಧೂರು ದೇಗುಲ ಜಲಾವೃತ :

ಕಾಸರಗೋಡು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಮಧುವಾಹಿನಿ ನದಿಯ ಪ್ರವಾಹವು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣದಲ್ಲಿ ಉಕ್ಕಿ ಹರಿಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next