Advertisement

ಅತಿವೃಷ್ಟಿ;ಜಿಲ್ಲೆಯಲ್ಲಿ 355 ಕೋಟಿ ಹಾನಿ; ಕೃಷಿ ಕ್ಷೇತ್ರ ಅಲ್ಲೋಲ ಕಲ್ಲೋಲ

06:40 PM Sep 14, 2022 | Team Udayavani |

ಬೆಳಗಾವಿ:ಎರಡು ತಿಂಗಳಲ್ಲಿ ಮೂರು ಬಾರಿ ಪ್ರವಾಹ. ಇದು ಸಾಲದು ಎನ್ನುವಂತೆ ಸತತ ಮಳೆ. ಈ ಎರಡೂ ಅವಾಂತರಗಳಿಂದ ನಮ್ಮನ್ನು ಪಾರು ಮಾಡುವುದು ಸರಕಾರಕ್ಕೆ ಸಾಧ್ಯವೇ ಇಲ್ಲ. ಕೊನೆಗೆ ದೇವರೇ ನಮ್ಮನ್ನು ಕಾಪಾಡಬೇಕು. ಸರಕಾರ ನೀಡುವ ಅಲ್ಪಸ್ವಲ್ಪ ಪರಿಹಾರ ಸಮಾಧಾನಕ್ಕೂ ಸಾಲಲ್ಲ. ಇದು ಗಡಿ ಜಿಲ್ಲೆ ಬೆಳಗಾವಿಯ ರೈತ ಸಮುದಾಯದ ಈ ವರ್ಷದ ಸ್ಥಿತಿ.

Advertisement

ಪ್ರವಾಹಕ್ಕೆ ಒಂದು ರೀತಿಯಲ್ಲಿ ಒಗ್ಗಿಕೊಂಡಿರುವ ನದಿ ಪಾತ್ರದ ಜನರಿಗೆ ಈ ಬಾರಿ ಪ್ರವಾಹದ ಜತೆಗೆ ನಿರಂತರವಾಗಿ ಸುರಿದ ಮಳೆ ಕೃಷಿ ಚಟುವಟಿಕೆಗಳ ಮೇಲೆ ಬೇಸರ ಬರುವಂತೆ ಮಾಡಿದೆ. ಕೃಷಿಗೆ ಹಾಕಿದ ರೊಕ್ಕ ಯಥೇತ್ಛವಾಗಿ ಕೈಗೆ ಬರುತ್ತದೆ ಎಂಬ ವಿಶ್ವಾಸ ಹೊರಟು ಹೋಗಿದೆ.

ಕಳೆದ ಮೂರು ತಿಂಗಳಿಂದ ಕಾಡುತ್ತಿರುವ ಮಳೆ ಮತ್ತು ನದಿಗಳ ಪ್ರವಾಹ ಕೃಷಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಯಾವ ಬೆಳೆಯೂ ಸಮೃದ್ಧವಾಗಿ ಬರುವ ನಂಬಿಕೆ ಉಳಿದಿಲ್ಲ. ನಿರಂತರ ಮಳೆ ಹೊಲಗಳಿಗೆ ಹೋಗದಂತೆ ಮಾಡಿದೆ. ಮೊಳಕಾಲುದ್ದ ನಿಂತಿರುವ ನೀರು ಬೆಳೆಗಳು ಮೇಲೇಳದಂತೆ ಮಾಡಿದ್ದರೆ ಹಾನಿಯ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸಹ ಹೊಲಗಳಿಗೆ ಕಾಲಿಡದಂತೆ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಯ ಪ್ರವಾಹ ಸ್ಥಿತಿ ಮತ್ತು ಕೃಷಿ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ವಾಸ್ತವ ಸ್ಥಿತಿಯ ಅವಲೋಕನ ನಡೆಸಿದ್ದಾರೆ. ತ್ವರಿತಗತಿಯಲ್ಲಿ ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಕಂದಾಯ, ಕೃಷಿ ಮತ್ತುತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಬೆಳೆಹಾನಿ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ.

ಆದರೆ ಸರಕಾರಕ್ಕೆ ಸಲ್ಲಿಸಿರುವ ವರದಿ, ನಂತರ ಅದಕ್ಕೆ ನೀಡುವ ಪರಿಹಾರದ ಮೇಲೆ ರೈತ ಸಮುದಾಯಕ್ಕೆ ವಿಶ್ವಾಸ ಉಳಿದಿಲ್ಲ. ಲಕ್ಷಾಂತರ ಹಣ ಖರ್ಚು ಮಾಡಿದ ಬೆಳೆಗಳಿಗೆ ಸಾವಿರ ಲೆಕ್ಕದಲ್ಲಿ ಕೊಡುವ ಪರಿಹಾರ ಯಾವ ಮೂಲೆಗೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಜಿಲ್ಲಾಡಳಿತದ ಮಾಹಿತಿಯಂತೆ ಕೃಷಿ ಮತ್ತು ತೋಟಗಾರಿಕೆ ಬೆಳೆ, ರಸ್ತೆಗಳು, ಶಾಲಾ ಕೊಠಡಿಗಳು, ಅಂಗನವಾಡಿ, ವಿದ್ಯುತ್‌ ಕಂಬಗಳು ಮತ್ತು ಮಾರ್ಗಗಳು ಸೇರಿದಂತೆ ಒಟ್ಟು 355 ಕೋಟಿ
ರೂ. ಹಾನಿಯಾಗಿದೆ. ಆದರೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಇದರಲ್ಲಿ 79 ಕೋಟಿ ರೂ. ಮಾತ್ರ ಪರಿಹಾರಕ್ಕೆ ಅನ್ವಯವಾಗಲಿದೆ.

Advertisement

ಬೆಳೆ ನಷ್ಟಕ್ಕೆ ಸ್ಪಂದಿಸಿರುವ ಸರಕಾರ ತಕ್ಷಣಕ್ಕೆ 17 ಕೋಟಿ ರೂ. ಬಿಡುಗಡೆ ಮಾಡಿದೆ. ಜಂಟಿ ಸಮೀಕ್ಷೆ ಪ್ರಕಾರ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ನಷ್ಟ ಅನುಭವಿಸಿರುವ 11 ಸಾವಿರಕ್ಕೂ ಹೆಚ್ಚು ರೈತರಿಗೆ ಈ ಹಣ ಅವರ ಖಾತೆಗೆ ನೇರವಾಗಿ ಜಮಾ ಆಗಲಿದೆ.

ಈ ವರ್ಷ 7.52 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ಪ್ರತಿಶತ 98.81 ಅಂದರೆ 7,43,920 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ರಾಯಬಾಗ-ಬೈಲಹೊಂಗಲ ತಾಲೂಕುಗಳಲ್ಲಿ ಪ್ರತಿಶತ 100 ಬಿತ್ತನೆ ಮಾಡಲಾಗಿದ್ದರೆ ಉಳಿದ ತಾಲೂಕುಗಳಲ್ಲಿ ಶೇ. 99 ಬಿತ್ತನೆ ಕಾರ್ಯ ನಡೆದಿದೆ. ಪ್ರಮುಖವಾಗಿ 1.09 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಕ್ಕೆಜೋಳ, 62 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, 47 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, 1,11 ಲಕ್ಷ ಪ್ರದೇಶದಲ್ಲಿ ಸೋಯಾಬಿನ್‌, 22 ಸಾವಿರ ಹೆಕ್ಟೇರ್‌ ದಲ್ಲಿ ಶೇಂಗಾ, 3,17 ಲಕ್ಷ ಹೆಕ್ಟೇರ್‌ದಲ್ಲಿ ಕಬ್ಬು, 25 ಸಾವಿರ ಹೆಕ್ಟೇರ್‌ದಲ್ಲಿ ಹತ್ತಿ ಬೆಳೆ ಬೆಳೆಯಲಾಗಿದೆ.ಆದರೆ ಮಳೆಯ ಹೊಡೆತದಿಂದ ಕಬ್ಬು ಹೊರತುಪಡಿಸಿ ಬಹುತೇಕ ಬೆಳೆಗಳು ನೆಲಕಚ್ಚಿವೆ.

ಬೆಳೆ ವಿಮೆ ವಿಷಯದಲ್ಲಿ ರೈತರಿಗೆ ಸಮಾಧಾನಕ್ಕಿಂತ ಆಕ್ರೋಶವೇ ಹೆಚ್ಚಾಗಿ ಕಾಣುತ್ತಿದೆ. ಈ ಹಿಂದೆ ಬೆಳೆವಿಮೆ ಕಂತು ತುಂಬಿದ್ದರೂ ಅದಕ್ಕೆ ತಕ್ಕಂತೆ ಹಣ ಪಾವತಿಯಾಗಲೇ ಇಲ್ಲ ಎಂಬ ಅಸಮಾಧಾನ ರೈತರಲ್ಲಿದೆ. ಈ ವರ್ಷ ಆಗಸ್ಟ್‌ ಅಂತ್ಯದವರೆಗೆ 47 ಸಾವಿರ ರೈತರು ಬೆಳೆವಿಮೆಗೆ ನೋಂದಣಿ ಮಾಡಿದ್ದಾರೆ. ಆದರೆ ಇದುವರೆಗೆ ಯಾರಿಗೂ ಹಣ ಪಾವತಿಯಾಗಿಲ್ಲ. ಬದಲಾಗಿ ಇನ್ನೂ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ.

ಸರಕಾರ ಕೊಡುವ ಪರಿಹಾರ ನಮಗೆ ಎಳ್ಳಷ್ಟೂ ತೃಪ್ತಿ ಇಲ್ಲ. ಈ ಬಾರಿ ಅಪಾರ ನಷ್ಟವಾಗಿದೆ. ಇನ್ನೂ ಎರಡು ತಿಂಗಳಲ್ಲಿ ಆಗಿರುವ ಬೆಳೆಹಾನಿ ಸಮೀಕ್ಷೆ ಮುಗಿದಿಲ್ಲ. ಈಗ ಮತ್ತೆ ಮಳೆ ಆವರಿಸಿದೆ. ಹೀಗಾಗಿ ಬೆಳೆನಷ್ಟಕ್ಕೆ ಒಂದೆರಡು ಸಾವಿರ ಪರಿಹಾರ ಕೊಟ್ಟು ಕೈ ತೊಳೆದುಕೊಂಡರೆ ನಾವು ಸುಮ್ಮನಿರಲ್ಲ. ಸರಕಾರ ಈ ಅಲ್ಪ ಪರಿಹಾರ ವಿಚಾರ ಬಿಟ್ಟು ವಿಶೇಷ ಪ್ಯಾಕೇಜ್‌ ಪ್ರಕಟಿಸಲೇಬೇಕು. ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ಪರಿಹಾರ ಘೋಷಣೆ ಮಾಡಬೇಕು. ಈಗಿನ ಸ್ಥಿತಿಯಲ್ಲಿ ನಮ್ಮನ್ನು ಸರಕಾರ ಕಾಪಾಡುವ ವಿಶ್ವಾಸ ಇಲ್ಲ. ದೇವರೇ ನಮ್ಮ ನೆರವಿಗೆ ಬರಬೇಕು.

ಸಿದಗೌಡ ಮೋದಗಿ, ಭಾರತೀಯ ಕೃಷಿಕ
ಸಮಾಜದ ಅಧ್ಯಕ್ಷ

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಉಂಟಾದ ಅತಿವೃಷ್ಟಿಯಿಂದ 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಹಾನಿಯಾಗಿದೆ. ತಕ್ಷಣವೇ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಂತೆ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರಕಾರದ ಮಾರ್ಗಸೂಚಿ ಪ್ರಕಾರ 11234 ರೈತರಿಗೆ 17.01 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು ರೈತರ ಖಾತೆಗೆ ನೇರವಾಗಿ ಹಣ ಸೇರಲಿದೆ. ಇದಲ್ಲದೆ ಜಿಲ್ಲೆಯಲ್ಲಿ ಆಗಿರುವ ಒಟ್ಟು ಹಾನಿ ಕುರಿತು ಸರಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ.
ನಿತೇಶ ಪಾಟೀಲ, ಜಿಲ್ಲಾಧಿಕಾರಿ

ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next