ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದ ಹೈದರಾಬಾದ್ ನಗರದ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚರಿಸದಂತಾಗಿದೆ.
ಹೈದರಾಬಾದ್ ನ ಕೆಲವು ಪ್ರದೇಶಗಳಲ್ಲಿ ಶನಿವಾರ ಸಂಜೆ 150 ಮಿ.ಮೀ ಗೂ ಹೆಚ್ಚಿನ ಮಳೆಯಾಗಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿ ಶನಿವಾರ ಇಬ್ಬರು ಸಾವನ್ನಪ್ಪಿದ್ದಾರೆ.
ನಗರದ ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಪೂಲ್ಬಾಗ್, ಓಮರ್ ಕಾಲೋನಿ, ಇಂದಿರಾನಗರ, ಶಿವಾಜಿನಗರ, ರಾಜೀವ್ ನಗರ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿರುವುದರಿಂದ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ.
ಇದನ್ನೂ ಓದಿ:ಕಲಬುರಗಿ: ಭೀಮಾ ನದಿ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಭಾರತೀಯ ಯೋಧರ ತಂಡ
ನಗರದ ರಸ್ತೆಗಳಲ್ಲಿ ಶನಿವಾರ ಸಂಜೆ 2 ಅಡಿಯವರೆಗೂ ನೀರು ತುಂಬಿದ್ದು, ವಾಹನಗಳು ನೀರಿನಲ್ಲಿ ಮುಳುಗಿದೆ. ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿದೆ. ಈ ಕೃತಕ ಪ್ರವಾಹದಲ್ಲಿ ಆಟೋ ರಿಕ್ಷಾವೊಂದು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಕ್ಷಣಾ ಸಿಬ್ಬಂದಿ ಮತ್ತು ಪಾಲಿಕೆ ಸಿಬ್ಬಂದಿ ರಸ್ತೆಗಳಲ್ಲಿ ತುಂಬಿರುವ ನೀರನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದ್ದಾರೆ. ನಗರದಲ್ಲಿ ರವಿವಾರವೂ ಗುಡುಗು, ಮಿಂಚು ಸಹಿತ ಮಳೆ ಮತ್ತು ಚಂಡಮಾರುತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.