Advertisement

ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು: ಸುರಕ್ಷಿತ ಜಾಗಕ್ಕೆ ಜನರ ಸ್ಥಳಾಂತರಕ್ಕೆ ಕ್ರಮ

02:28 PM Aug 18, 2020 | keerthan |

ಬೆಳಗಾವಿ: ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಗಡಿ ಭಾಗದ ಕೃಷ್ಣಾ, ದೂಧಗಂಗಾ, ವೇಧಗಂಗಾ ಮತ್ತು ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿದೆ.

Advertisement

ಕೃಷ್ಣಾ ಹಾಗೂ ಉಪನದಿಗಳಿಂದ 1.82 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ರಾಜಾಪೂರ ಬ್ಯಾರೇಜ್ ದಿಂದ 1.52 ಲಕ್ಷ ಕ್ಯೂಸೆಕ್, ದೂಧಗಂಗಾ ಹಾಗೂ ವೇಧಗಂಗಾ ನದಿಗಳಿಂದ 31 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ.

ಇದರಿಂದ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಮಾಳಭಾಗ , ಯಡೂರವಾಡಿ ಗ್ರಾಮದ ಧೋಣಿತೋಟ ಮುಂತಾದ ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು ಅಲ್ಲಿಯ ಜನರನ್ನು ಸ್ಥಳಾಂತರಿಸಲು ತಾಲೂಕಾಡಳಿತ ಸಿದ್ಧತೆ ನಡೆಸಿದೆ.

ಕೃಷ್ಣಾ ಹಾಗೂ ಉಪನದಿಗಳಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಪರಿಣಾಮ ನದಿ ತೀರದ ಗ್ರಾಮಗಳಿಗೆ ಅಧಿಕಾರಿಗಳು ದೌಡಾಯಿಸಿ ಸರಕಾರ ಗುರುತಿಸುವ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಕೃಷ್ಣಾ ನದಿಗೆ 1.81 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸಂಜೆ ವೇಳೆಗೆ 2 ಲಕ್ಷ ಕ್ಯೂಸೆಕ್ಸ್ ದಾಟಬಹುದು. ಹೀಗಾಗಿ ನದಿ ತೀರದ ತೋಟಪಟ್ಟಿ ಜನರು ಮತ್ತು ತಗ್ಗು ಪ್ರದೇಶದ ಜನರು ಸ್ಥಳಾಂತರವಾಗಬೇಕು ಎಂದು ಚಿಕ್ಕೋಡಿ ಎಸಿ ರವೀಂದ್ರ ಕರಲಿಂಗನ್ನವರ ಮನವಿ ಮಾಡಿದ್ದಾರೆ.

ಇನ್ನು ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು ಇದರಿಂದ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ಅಧಿಕ ನೀರು ಬರುತ್ತಿದೆ. ಹಿಡಕಲ್ ಜಲಾಶಯ ಬಹುತೇಕ ಭರ್ತಿಯಾಗಿದ್ದು ಜಲಾಶಯಕ್ಕೆ ಈಗ 41 ಸಾವಿರ ಕ್ಯೂಸೆಕ್ಸ್ ನೀರು ಬರಲಾರಂಭಿಸಿದ್ದು 40 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.  ಅದರಂತೆ ಖಾನಾಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಮಲಪ್ರಭಾ ಜಲಾಶಯಕ್ಕೆ 30ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದೆ. ಜಲಾಶಯದಿಂದ 22 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next