ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜ್ಯದಲ್ಲಿನ ಮೂರೂ ರಾಜಕೀಯ ಪಕ್ಷಗಳು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳಾ ಮತದಾರರ ಮನವೊಲಿಕೆಗೆ ಮುಂದಾಗಿವೆ. ಹೀಗಾಗಿ ರಾಜ್ಯದ ವಿಧಾನ ಕದನ ಭರ್ಜರಿ ರಂಗು ಪಡೆ ದು ಕೊಂಡಿದೆ.
ಮಹಿಳಾ ಮತದಾರರ ಓಲೈಕೆಗೆ ಮೊದಲು ಮುಂದಾಗಿದ್ದು, ಜೆಡಿಎಸ್. ಪಂಚರತ್ನ ಯಾತ್ರೆ ನಡೆ ಸುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಅಧಿಕಾರಕ್ಕೆ ಬಂದರೆ, ಒಬ್ಬ ಮಹಿಳೆಯನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅದಷ್ಟೇ ಅಲ್ಲ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವು ದಾಗಿ ಅವರು ಘೋಷಿಸಿದ್ದಾರೆ. ಇನ್ನು ಬಿಜೆಪಿ ಕೂಡ ಸ್ತ್ರೀಶಕ್ತಿ ಯೋಜನೆ ಜಾರಿಗೆ ನಿರ್ಧರಿಸಿದೆ. ದುಡಿಯುವ ಮನೆಯೊಡತಿಗೆ ಆರ್ಥಿಕ ಶಕ್ತಿ ತುಂಬಲು ಈ ಯೋಜನೆ ಜಾರಿ ಮಾಡುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಕುಟುಂಬದ ಯಾಜಮಾನಿಗೆ 2 ಸಾವಿರ ರೂ. ನೀಡುವ “ಗೃಹ ಲಕ್ಷ್ಮೀ’ ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದೆ. ಈ ಮೂಲಕ ಮೂರು ರಾಜಕೀಯ ಪಕ್ಷಗಳಿಗೆ ವಿಧಾನಸಭೆ ಚುನಾವಣೆಯು “ಮಹಿಳಾ ಕೇಂದ್ರಿತ’ ಆಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
ಮಹಿಳಾ ಮತದಾರರನ್ನು ಓಲೈಸುವ ತಂತ್ರಗಾರಿಕೆ, ಘೋಷಣೆಗಳು ರಾಜಕೀಯ ಪಕ್ಷಗಳ ಪಾಲಿಗೆ ಹೊಸದೇನಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಮಹಿಳಾ ಮತದಾರರ ಕೊಡುಗೆ ಹೆಚ್ಚಿದೆ ಎಂದು ಹೇಳಲಾಗಿದೆ. ಅದಾದ ಅನಂತರ ನಡೆದ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷಗಳ ಗೆಲುವು- ಸೋಲಿನಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಕಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಯಲ್ಲಿ ಪ್ರಿಯಾಂಕಾ ಗಾಂಧಿ ಯವರು “ಮೈ ಲಡ್ಕಿ ಹೂ ಲಡ್ ಸಕ್ತಿಹೂ’ ಘೋಷಣೆ ಕೊಟ್ಟು ಮಹಿಳೆಯರು ಅದರಲ್ಲೂ ಯುವತಿಯರನ್ನು ಸೆಳೆಯಲು ಮುಂದಾಗಿದ್ದರು. ಆದರೆ ಆತಂತ್ರ ಫಲ ಕೊಡಲಿಲ್ಲ. ಅದೇ ರೀತಿ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ “ಹಿಮಾಚಲ್ ಕಿ ಬೇಟಿ’ ಎಂಬ ಘೋಷಣೆಯೊಂದಿಗೆ ಚುನಾವಣ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದರು. ಅಲ್ಲಿ ಈ ತಂತ್ರಗಾರಿಕೆ ಕೈ ಹಿಡಿದಿತ್ತು. ರಾಜ್ಯದ ಚುನಾವಣ ವಿದ್ಯಮಾನಗಳು ಅದೇ ಹಾದಿಯಲ್ಲಿ ಸಾಗುತ್ತಿವೆ.
ಇದಕ್ಕೆ ಕಾರಣವೂ ಇದೆ. ಹೇಗೆಂದರೆ ಅರ್ಧ ರಾಜ್ಯದಲ್ಲಿ ಮಹಿಳೆಯರೇ ನಿರ್ಣಾಯಕರಾಗಿದ್ದಾರೆ. 2013ರ ಅಂತಿಮ ಮತದಾರರ ಪಟ್ಟಿ ಪ್ರಕಾರ ಒಟ್ಟು ಮತದಾರರ ಸಂಖ್ಯೆ 6 ಕೋಟಿ ಅಸುಪಾಸಿನಲ್ಲಿದ್ದು ಅದರಲ್ಲಿ 2.54 ಕೋಟಿ ಮಹಿಳೆಯರಿದ್ದಾರೆ. ಉಡುಪಿ ದಕ್ಷಿಣ, ದಕ್ಷಿಣ ಕನ್ನಡ, ರಾಯಚೂರು, ರಾಮನಗರ, ಬಳ್ಳಾರಿ, ಕೊಡಗು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಪ್ಪಳ, ಬಾಗಲ ಕೋಟೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರರೇ ಹೆಚ್ಚಾಗಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ 2.49 ಕೋಟಿ ಪೈಕಿ 1.78 ಕೋಟಿ ಅಂದರೆ ಶೇ.71ರಷ್ಟು ಮಹಿಳೆಯರು ಮತ ಚಲಾಯಿಸಿದ್ದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳಿಂದ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ 220ಕ್ಕೂ ಹೆಚ್ಚು ಮಹಿಳೆಯರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೀಗಾಗಿಯೇ ಮಹಿಳಾ ಮತದಾರರನ್ನು ಓಲೈ ಸಿ ದರೆ ಅಧಿಕಾರಕ್ಕೇರುವುದು ಸುಲಭ ಎಂಬ ನಿಟ್ಟಿನಲ್ಲಿ ಈ ತಂತ್ರಗಾರಿಕೆಯ ಮೊರೆ ಹೋಗಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.