Advertisement

ಸೇತುವೆ ಮುರಿದರೇನು? ರಸ್ತೆ ಬಿರಿದರೇನು? ನಿಂತೀತೇ ಲಾರಿಗಳ ಕಾಟ?

08:25 AM Aug 03, 2017 | Team Udayavani |

ಕೋಟ: ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಮುದ್ರದ ತಡೆಗೋಡೆ ನಿರ್ಮಾಣಕ್ಕೆ ಬಂಡೆಕಲ್ಲು ಸಾಗಾಟ ಮಾಡುವ ಲಾರಿಗಳು ಅಧಿಕ ಭಾರವನ್ನು ಹೊತ್ತು ಹಲವು ತಿಂಗಳಿಂದ ಸಂಚರಿಸುತ್ತಿದ್ದು ಇದರಿಂದಾಗಿ ಇಲ್ಲಿನ ಕಿರುಸೇತುವೆ, ರಸ್ತೆಗಳು ಕುಸಿದಿವೆ. ಈ ಕುರಿತು ಉದಯವಾಣಿ ಹಲವು ಬಾರಿ ವರದಿ ಪ್ರಕಟಿಸಿದ್ದು  ಸಂಬಂಧಪಟ್ಟ ಇಲಾಖೆ ಮಾತ್ರ ಈ ವಿಚಾರದಲ್ಲಿ  ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿದೆ.

Advertisement

ಸೇತುವೆ ಮುರಿದರೇನು? ರಸ್ತೆ ಬಿರಿದರೇನು?
ಈ ರಸ್ತೆಯಲ್ಲಿ  20ಮೆಟ್ರಿಕ್‌ ಟನ್‌ಗಿಂತ ಅಧಿಕ ಭಾರದ ವಾಹನಗಳ ಓಡಾಟವನ್ನು ಲೋಕೋಪಯೋಗಿ ಇಲಾಖೆ ನಿರ್ಬಂಧಿಸಿದೆ. ಆದರೆ ವಾಹನಗಳು ಈ ಆದೇಶವನ್ನು ಲೆಕ್ಕಿಸದೆ 40- 45 ಟನ್‌ಗಿಂತ ಹೆಚ್ಚು ಭಾರದ ಸರಕುಗಳನ್ನು ಸಾಗಾಟ ನಡೆಸುತ್ತದೆ. ಇದರಿಂದಾಗಿ ಜೂ. 8ರಂದು ಕೋಟ ಮೂರುಕೈ ಸಮೀಪ ಬೆಟ್ಲಕ್ಕಿ ಹಡೋಲಿನಲ್ಲಿ ಕಿರು ಸೇತುವೆಯೊಂದು ಕುಸಿದು ಎರಡು ದಿನ ಸಂಪರ್ಕ ಕಡಿತಗೊಂಡು ಜನತೆ ಪರದಾಟ ನಡೆಸಿದ್ದರು. ಅನಂತರ ತಾತ್ಕಾಲಿಕ ಮೋರಿ ಅಳವಡಿಸಿ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಯಿತು. ಜು.21ರಂದು ಉಪ್ಲಾಡಿಯಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಆಳವಾದ‌ ಕಂದಕ ಸೃಷ್ಟಿಯಾಗಿ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡಿತ್ತು.

ಅನಾಹುತ ನೋಡಲಾಗುತ್ತಿದೆಯೇ ?
ಈಗ ಇಲ್ಲಿನ ಮತ್ತಷ್ಟು ಕಡೆಗಳಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಕಿರು ಸೇತುವೆಗಳು ಕೂಡ ಅಪಾಯದಲ್ಲಿವೆ. ಈ ದಾರಿಯಲ್ಲಿ   ಸಂಚರಿಸುವ ಬಸ್ಸುಗಳಲ್ಲಿ ಒಮ್ಮೆಲೆ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇಂತಹ ಸಂದರ್ಭ ರಸ್ತೆ ಅಥವಾ ಕಿರುಸೇತುವೆಗಳು ಕುಸಿದಲ್ಲಿ ದೊಡ್ಡಮಟ್ಟದ ಅಪಾಯ ಖಂಡಿತ.

ಸಮಸ್ಯೆ 
ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲೂ ಕೂಡ ಇದೇ ರೀತಿಯ ಸಮಸ್ಯೆ ಇದೆ. ಇಲ್ಲಿ ರಾತ್ರಿ ವೇಳೆ ಟೋಲ್‌ ತಪ್ಪಿಸುವ ಸಲುವಾಗಿ ಕೆಲವೊಂದು ಅಧಿಕ ಭಾರದ ವಾಹನಗಳು ಓಡಾಟ ನಡೆಸುತ್ತವೆ. ಇದರಿಂದಾಗಿ ಇಲ್ಲಿನ ಸೇತುವೆಗಳು, ರಸ್ತೆ ಅಪಾಯದಲ್ಲಿವೆ.

ಈ ಮೌನವ ತಾಳೆನು…
ಈ ರೀತಿ ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳ ಮೇಲೆ ಕ್ರಮಕೈಗೊಳ್ಳುವಂತೆ  ಸಾರ್ವಜನಿಕರು ಆರ್‌.ಟಿ.ಒ.ಹಾಗೂ ಜಿಲ್ಲಾಡಳಿತಕ್ಕೆ  ಹಲವು ತಿಂಗಳ ಹಿಂದೆ  ಮನವಿ ಸಲ್ಲಿಸಿದ್ದರು. ಆದರೆ ಈ ಕುರಿತು ಇದುವರೆಗೆ ಸರಿಯಾದ ಕ್ರಮಕೈಗೊಂಡಿಲ್ಲ.  ಕಡೇ  ಪಕ್ಷ  ಪೊಲೀಸ್‌ ಇಲಾಖೆ ಇಂತಹ ವಾಹನಗಳನ್ನು ವಶಕ್ಕೆ ಪಡೆದು ಆರ್‌.ಟಿ.ಒ. ಮೂಲಕ ದಂಡ ವಿಧಿಸಿದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬರತಿತ್ತು. ಆದರೆ ಈ ಕುರಿತು ಗಂಭೀರ ಚಿಂತನೆಗಳಾಗಿಲ್ಲ. ಇಷ್ಟೊಂದು  ದೊಡ್ಡ ಮಟ್ಟದ ಸಮಸ್ಯೆ ಇದ್ದರು ಸಂಬಂಧಪಟ್ಟ ಇಲಾಖೆ ಯಾಕೆ ಮೌನವಹಿಸುತ್ತಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Advertisement

ಕ್ರಮ ಕೈಗೊಳ್ಳಿ
ಒಟ್ಟಾರೆ ಅಧಿಕ ಭಾರದ ಸರಕುಗಳನ್ನು ಸಾಗಾಟ ನಡೆಸುವ ವಾಹನಗಳಿಂದ ಅಪಾಯದಲ್ಲಿರುವ ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯನ್ನು ರಕ್ಷಿಸುವ ಸಲುವಾಗಿ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕಿದೆ.

ಎಚ್ಚರ ವಹಿಸುವಿರಾ!
ಪರಿಸ್ಥಿತಿ ಇದೇ ರೀತಿ  ಮುಂದುವರಿದಲ್ಲಿ  ಇನ್ನೂ ಕೆಲವು ಕಿರು ಸೇತುವೆಗಳು,  ರಸ್ತೆ ಕುಸಿತಗೊಳ್ಳುವುದು ನಿಶ್ಚಿತ ಹಾಗೂ ಸಾವಿರಾರು ವಿದ್ಯಾರ್ಥಿಗಳು ಬಸ್ಸಿನಲ್ಲಿ ಸಂಚರಿಸುವಾಗ ಅಪಾಯ ಎದುರಾದಲ್ಲಿ ದೊಡ್ಡಮಟ್ಟದ ಅನಾಹುತವಾಗಲಿದೆ. ಆದ್ದರಿಂದ ಇನ್ನಷ್ಟು ಅನಾಹುತಗಳು ನಡೆಯುವ ಮೊದಲು ಜಿಲ್ಲಾಡಳಿತ ಈ ಕುರಿತು ಕ್ರಮಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next