ಮಂಗಳೂರು: ತಾಪಮಾನ ಏರುತ್ತಿರುವುದರಿಂದ ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಅಧೀನದ ಹಾಸ್ಟೆಲ್‌ಗಳ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ರವಿ ಕುಮಾರ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿ ರುವ ಜಿಲ್ಲಾಧಿಕಾರಿ, ಎಲ್ಲ ವಿದ್ಯಾರ್ಥಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಸೂಚಿಸ ಬೇಕು. ಹಾಸ್ಟೆಲ್‌ಗಳ ಅಡುಗೆ ಕೋಣೆ ಮತ್ತು ಅಡುಗೆಗೆ ಬಳಸುವ ಪಾತ್ರೆ, ಪರಿಕರಗಳನ್ನು ಸ್ವತ್ಛವಾಗಿಡುವಂತೆ ನಿರ್ದೇಶಿಸಿದ್ದಾರೆ.
ಅಡುಗೆ ತಯಾರಿಸುವವರು ಮತ್ತು ಆಹಾರ ಬಡಿಸುವವರು ಕೈಗಳ ಶುಚಿತ್ವ ಸೇರಿದಂತೆ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು. ಪ್ರತೀ ಆರು ತಿಂಗಳಿಗೊಮ್ಮೆ ಅಡುಗೆ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸುವ ಮತ್ತು ಆಹಾರ ತಯಾರಕರ ಆರೋಗ್ಯ ತಪಾಸಣೆ ನಡೆಸಬೇಕು. ವಿದ್ಯಾರ್ಥಿ ನಿಲಯಗಳಿಗೆ ವಿವಿಧ ಮೂಲಗಳಿಂದ ಸರಬರಾಜು ಆಗುವ ನೀರಿನ ಮಾದರಿಯನ್ನು ಪ್ರತೀ ತಿಂಗಳು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಬೇಕು. ವಿದ್ಯಾರ್ಥಿ ನಿಲಯಗಳ ಶೌಚಾಲಯ, ಸ್ನಾನದ ಕೋಣೆಯನ್ನು ಶುಚಿಯಾಗಿರಿಸಬೇಕು. ಬಿಸಿಯಾದ ಹಾಗೂ ಸುರಕ್ಷಿತ ಆಹಾರವನ್ನು ಒದಗಿಸಬೇಕು. ನಿರ್ಜಲೀ ಕರಣ ಆಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಶುದ್ಧ ನೀರು, ದ್ರವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಜಾಗ್ರತೆ ವಹಿಸಬೇಕು. ಅಡುಗೆ ಮನೆ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡಬೇಕು. ವಿದ್ಯಾರ್ಥಿಗಳಿಗೆ ಅನಾರೋಗ್ಯ ಕಂಡು ಬಂದಲ್ಲಿ ವೈದ್ಯಾಧಿಕಾರಿ/ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ಚಿಕಿತ್ಸೆ ಒದಗಿಸಬೇಕು ಎಂದು ತಿಳಿಸಿದ್ದಾರೆ.