Advertisement

ಕರಾವಳಿಯಲ್ಲಿ ಮತ್ತೆ ಉಷ್ಣ ಅಲೆ ಎಚ್ಚರಿಕೆ!

02:41 AM Mar 10, 2023 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆಯ ಸಂದೇಶವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಮುನ್ಸೂಚನೆಯಂತೆ ಮಾ. 10ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಬೀಸಲಿದ್ದು, ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Advertisement

ಕಳೆದ ವಾರ ಮಾ. 4ರಂದು ಉಷ್ಣ ಅಲೆ ಮತ್ತು ಮಾ. 8ರಂದು ಕಡಲಿನ ಅಬ್ಬರದ ಎಚ್ಚರಿಕೆಯನ್ನು ಐಎಂಡಿ ನೀಡಿತ್ತು. ಅದರಂತೆ ಕರಾವಳಿಯ ಹಲವು ಕಡೆಗಳಲ್ಲಿ ಉರಿ ಸೆಕೆ ಮತ್ತು ಉಷ್ಣತೆಯಿಂದ ಕೂಡಿದ ಗಾಳಿ ಬೀಸಿತ್ತು. ಈಗ ಮತ್ತೆ ಎಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಅಗತ್ಯ ಇದೆ.

ಮಾರ್ಚ್‌ನಲ್ಲಿ ಅತ್ಯಧಿಕ ತಾಪಮಾನ
‌ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಪ್ರಸಾದ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ ಉಷ್ಣ ಅಲೆ ಬರುವುದಿಲ್ಲ. ಈ ವರ್ಷ ಉತ್ತರ ಭಾರತದ ಹಲವು ಕಡೆಗಳಲ್ಲಿ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ ಹೆಚ್ಚು ಇತ್ತು. ಉತ್ತರ ದಿಕ್ಕಿನಿಂದ ಸುಳಿಗಾಳಿ ಬೀಸುತ್ತಿದ್ದು, ಉಷ್ಣ ಅಲೆಯನ್ನು ತರುತ್ತಿದೆ. ಪರಿಣಾಮವಾಗಿ ಕರಾವಳಿಯಲ್ಲಿ ಈಗಿರುವ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ ಎಂದಿದ್ದಾರೆ.

ಮೋಡ; ಮೂರು ದಿನಗಳಲ್ಲಿ ಮಳೆ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆಯಿಂದಲೇ ಮೋಡದಿಂದ ಕೂಡಿದ ವಾತಾವರಣ ಇತ್ತು. ಮಹಾರಾಷ್ಟ್ರ ಕಡೆ ಟ್ರಫ್‌ ಇದ್ದು, ಪರಿಣಾಮವಾಗಿ ಮೋಡ ನೈಋತ್ಯದಿಂದ ಈಶಾನ್ಯ ದಿಕ್ಕಿಗೆ ಚಲಿಸುತ್ತದೆ. ಇದೇ ಕಾರಣಕ್ಕೆ ಮಾ. 12 ಮತ್ತು 13ರಂದು ಉಭಯ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

3ರಿಂದ 4 ಡಿ.ಸೆ. ಏರಿಕೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ ವಾಡಿಕೆಗಿಂತ 3ರಿಂದ 4 ಡಿ.ಸೆ. ಏರಿಕೆಯಾಗುವ ಸಾಧ್ಯತೆ ಇದೆ. ಬುಧವಾರ ರಾಷ್ಟ್ರದಲ್ಲೇ ಅತ್ಯಧಿಕ ತಾಪಮಾನ 38.8 ಡಿ.ಸೆ. ಮಂಗಳೂರಿನಲ್ಲಿ ದಾಖಲಾಗಿತ್ತು. ಇದು ಈವರೆಗೆ ಮಾರ್ಚ್‌ ತಿಂಗಳಿನಲ್ಲಿ ಮಂಗಳೂರಿನಲ್ಲಿ ದಾಖಲಾದ ದಾಖಲೆಯ ತಾಪಮಾನ. ಅಂಕಿ ಅಂಶದಂತೆ 2017ರಲ್ಲಿ ದಾಖಲಾದ 37.9 ಡಿ.ಸೆ. ಅತ್ಯಧಿಕ ತಾಪಮಾನವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next