Advertisement

ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ತಾಪಮಾನ ದಾಖಲು

11:47 PM Mar 08, 2023 | Team Udayavani |

ಮಂಗಳೂರು/ಬೆಂಗಳೂರು: ಮಂಗಳೂರಿನಲ್ಲಿ ಮತ್ತೂಮ್ಮೆ ದೇಶದಲ್ಲಿಯೇ ಗರಿಷ್ಠ ತಾಪಮಾನ 38.8 ಡಿ.ಸೆ. ದಾಖಲಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಗಣನೀಯವಾಗಿ ಏರಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದರ ನಡುವೆಯೇ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಬುಧವಾರ ಮಂಗಳೂರಿನಲ್ಲಿ ದಾಖಲಾದ ಈ ತಾಪಮಾನ ಮಾರ್ಚ್‌ ತಿಂಗಳಿನಲ್ಲಿ 2010ರಿಂದೀಚೆಗಿನ ದಾಖಲೆಯ ಉಷ್ಣತೆಯಾಗಿದೆ. ಇದುವರೆಗೆ 2017ರಲ್ಲಿ 37.9 ಡಿ.ಸೆ. ದಾಖಲಾಗಿದ್ದು ದಾಖಲೆಯಾಗಿತ್ತು. ಆರು ದಿನಗಳ ಹಿಂದೆ ಅಂದರೆ, ಮಾ. 2ರಂದು ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ಎನಿಸಿದ್ದ 37.9 ಡಿ.ಸೆ. ದಾಖಲಾಗಿತ್ತು. ಒಂದು ವಾರದ ಅಂತರದಲ್ಲಿ ತಾಪಮಾನದಲ್ಲಿ ಭಾರೀ ಏರಿಕೆ ಕಂಡಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 5.4 ಡಿ.ಸೆ. ಹೆಚ್ಚಾಗಿದೆ. ಕಾರವಾರದಲ್ಲಿ ಬುಧವಾರ 38.6 ಡಿ.ಸೆ. ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 6 ಡಿ.ಸೆ. ಹೆಚ್ಚು.

ಇನ್ನೂ ಏರಿಕೆ ಸಂಭವ
ಈ ಬಾರಿ ಬೇಸಗೆಯು ವಾಡಿಕೆಗಿಂತ ಮೊದಲೇ ಪ್ರಾರಂಭವಾಗಿದೆ. ಇದು ಪ್ರಾರಂಭವಷ್ಟೇ. ಮಾರ್ಚ್‌ ಎರಡನೇ ವಾರದಿಂದ ಬಿಸಿಲ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತದೆ ಹವಾಮಾನ ಇಲಾಖೆ. ರಾಜ್ಯದ ಕೆಲವು ಕಡೆ ಸಾಮಾನ್ಯಕ್ಕಿಂತ 3 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ಉಷ್ಣಾಂಶವು ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ 2-3 ಡಿ.ಸೆ. ಏರಿಕೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಮಳೆ ಯಾವಾಗ?
ಈಗಿನ ಮಾಹಿತಿಯ ಪ್ರಕಾರ ಮಾರ್ಚ್‌ 14ರ ಬಳಿಕ ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. 14ರಂದು ಕರಾವಳಿಯಲ್ಲಿ ಮತ್ತು 15ರಂದು ರಾಜ್ಯದ ಹೆಚ್ಚಿನ ಕಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣಾಂಶ ಹೆಚ್ಚಲು ಕಾರಣವೇನು ?
ಒಣಹವೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತಿರುವ ಗಾಳಿಯಿಂದ ರಾಜ್ಯದಲ್ಲಿ ತಾಪಮಾನ ಈ ಪರಿ ಹೆಚ್ಚಳವಾಗುತ್ತಿದೆ. ತೇವಾಂಶ ಕಡಿಮೆಯಾಗಿ ಮೋಡದ ವಾತಾವರಣ ಇಲ್ಲದಿರುವ ಪರಿಣಾಮ ಸುಡು ಬಿಸಿಲಿನ ಅನುಭವ ವಾಗುತ್ತಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾಗಿ ತೇವಾಂಶ ಕಡಿಮೆಯಾಗುತ್ತಿದೆ.

Advertisement

ಎಪ್ರಿಲ್‌ನಲ್ಲಿ ತಾಪಮಾನ ಇನ್ನಷ್ಟು ಹೆಚ್ಚಳ
ಎಪ್ರಿಲ್‌ನಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಸೇರಿ ಕೆಲವು ಜಿಲ್ಲೆಗಳಲ್ಲಿ ಸರಾಸರಿ ಉಷ್ಣಾಂಶದಲ್ಲಿ 6 ಡಿ.ಸೆ. ಹೆಚ್ಚಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಬಿಸಿಲಿನ ಪ್ರಮಾಣ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ ?
ಬುಧವಾರ ಮಂಗಳೂರಿನಲ್ಲಿ 38.8, ಕಾರವಾರ 38.6, ಬೆಂಗಳೂರು 31.8, ಬಳ್ಳಾರಿ 34.3, ಶಿವಮೊಗ್ಗ 34.6, ಧಾರವಾಡ, ವಿಜಯಪುರ ತಲಾ 32, ದಾವಣಗೆರೆ 33.8, ರಾಯಚೂರು 33.4, ಕಲಬುರಗಿ 33.4, ಹಾವೇರಿ, ರಾಯಚೂರು ತಲಾ 33.4, ಹಾಸನ 32.4 ಡಿ. ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next