Advertisement

ಮಕ್ಕಳಲ್ಲಿ ಕಂಡುಬರುವ ಹೃದಯದ ಕಾಯಿಲೆಗಳು

11:25 AM Sep 25, 2022 | Team Udayavani |

 

  1. ಮಕ್ಕಳಲ್ಲಿ ಕಂಡುಬರುವ ಹೃದಯದ ಕಾಯಿಲೆಗಳೆಂದರೇನು (Congenital Heart Disease & CHD)? ಅಂಕಿ-ಅಂಶಗಳನ್ನು ಪರಿಗಣಿಸಿದಾಗ ಮಕ್ಕಳಲ್ಲಿ ಕಂಡುಬರುವ ಹೃದಯದ ಕಾಯಿಲೆಗಳು 1,000 ಮಕ್ಕಳ ಜನನವಾದರೆ 6 ರಿಂದ 8 ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದು 30 ಪ್ರತಿಶತ ನವಜಾತ ಶಿಶುಗಳ ಮರಣಕ್ಕೆ ಕಾರಣವಾಗಿದೆ ಮತ್ತು 10 ಪ್ರತಿಶತ ಶಿಶುಗಳ ಮರಣ ಇದರಿಂದ ಆಗುತ್ತದೆ. ಆದ್ದರಿಂದ ಜನ್ಮಜಾತವಾಗಿ (ಹುಟ್ಟಿನಿಂದ) ಬರುವಂತಹ ಹೃದಯದ ಕಾಯಿಲೆಗಳು ಒಂದು ಪ್ರಮುಖವಾದ ಕಾಯಿಲೆ. ಹೇಗೆ ಸಾಮಾನ್ಯ ಜನರು ಕ್ಯಾನ್ಸರ್‌ ಎಂದರೆ ಭಯಪಡುತ್ತಾರೋ ಅದೇ ರೀತಿ ಮಗುವಿಗೆ ಹೃದಯದ ಕಾಯಿಲೆ ಇದೆ ಅಂದರೆ ಭಯಪಡುತ್ತಾರೆ. ಆದರೆ ಎಲ್ಲ ಹೃದಯದ ಕಾಯಿಲೆಗಳು ಅಪಾಯಕಾರಿಯಲ್ಲ. ಅಲ್ಲದೆ ಅಪಾಯಕಾರಿ ಆಗಿರುವಂತಹ ಹೃದಯದ ಕಾಯಿಲೆಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಬಹುದು ಮತ್ತು ತಡೆಗಟ್ಟಬಹುದು.
  2. ಹೃದಯದ ಕಾಯಿಲೆಗಳೆಂದರೇನು? ನಾವು ಹದಿಹರಯರಲ್ಲಿ ಮತ್ತು ವಯಸ್ಕರಲ್ಲಿ ನೋಡಿದಾಗ ಹೃದಯದ ಕಾಯಿಲೆಗಳು ಎಂದರೆ ತತ್‌ಕ್ಷಣ ನೆನಪಿಗೆ ಬರುವುದು ಹೈ ಬಿಪಿ, ಹಾರ್ಟ್‌ ಅಟ್ಯಾಕ್‌, ಕೊಲೆಸ್ಟ್ರಾಲ್‌. ಆದರೆ ಮಕ್ಕಳಲ್ಲಿ ತುಂಬಾ ಸರಳವಾದವುಗಳಿಂದ ಹಿಡಿದು ಅತ್ಯಂತ ಕಠಿನವಾದ (ಸಂಕೀರ್ಣವಾದ) ತೊಂದರೆಗಳು ವಿವಿಧ ರೀತಿಗಳಲ್ಲಿ ಕಂಡುಬರುತ್ತವೆ. ಆದರೆ ಆಗಲೇ ಹೇಳಿದಂತೆ ಎಲ್ಲ ಹೃದಯದ ಕಾಯಿಲೆಗಳು ಅಪಾಯಕಾರಿಯಲ್ಲ ಮತ್ತು ಎಲ್ಲ ಹೃದಯದ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಬೇಕಾಗಿಲ್ಲ. ಸಾಮಾನ್ಯವಾಗಿ ಹೃದಯದಲ್ಲಿ hole ಅಥವಾ ರಂಧ್ರ ಇದೆ ಎಂದಾದರೆ ಆಪರೇಷನ್‌ ಇಲ್ಲದೆಯೇ ಡಿವೈಸ್‌ ಎಂಬ ಸಾಧನದಿಂದ ಮುಚ್ಚಬಹುದು. ಇದರಿಂದ ಜೀವ ಅಪಾಯ ಮತ್ತು ವೆಚ್ಚ ಕೂಡ ಕಡಿಮೆಯಾಗುತ್ತದೆ. ಇನ್ನು ಕೆಲವು ರಂಧ್ರಗಳು ಮಗು ಬೆಳೆದ ಹಾಗೆ ತಾವಾಗಿಯೇ ಮುಚ್ಚಿಕೊಳ್ಳುತ್ತವೆ.
  3. ಹೃದಯದ ಕಾಯಿಲೆಗಳು ಕಾಣಿಸಿಕೊಳ್ಳಲು ಕಾರಣಗಳೇನು? ಹೃದಯದ ಕಾಯಿಲೆಗಳು ಕಾಣಿಸಿಕೊಳ್ಳಲು ವಿವಿಧ ಕಾರಣಗಳಿವೆ. ಮೊದಲನೆಯದಾಗಿ, ತಂದೆ-ತಾಯಿ ಅಥವಾ ಇದಕ್ಕೆ ಹಿಂದಿನ ಮಗುವಿನಲ್ಲಿ ಅಥವಾ ಹತ್ತಿರದ ರಕ್ತಸಂಬಂಧಿಗಳಲ್ಲಿ ಜನ್ಮಜಾತ ಹೃದಯದ ತೊಂದರೆ ಇದ್ದರೆ; ಎರಡನೆಯದಾಗಿ, ತಾಯಿಯಲ್ಲಿ ಬೇರೆ ಯಾವುದಾದರೂ ಕಾಯಿಲೆಗಳಿದ್ದರೆ; ಉದಾಹರಣೆಗೆ, ಮಧುಮೇಹ ರೋಗ ಅಥವಾ ಸ್ವಯಂ ನಿರೋಧಕ ಶಕ್ತಿಯನ್ನು ಅಸ್ತವ್ಯಸ್ತ ಮಾಡುವಂತಹ ಕಾಯಿಲೆ, SlE; ಅಥವಾ ಗರ್ಭಾವಸ್ಥೆಯಲ್ಲಿದ್ದಾಗ ಮೊದಲನೇ 3 ತಿಂಗಳುಗಳಲ್ಲಿ ತಾಯಿಗೆ ನಂಜಾದರೆ; ಅಥವಾ ಬೇರೆ ಕಾಯಿಲೆಗಳಿಗೆ ಗರ್ಭಿಣಿಯು ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ಮೂರ್ಛೆರೋಗ (fits) ಅಥವಾ ಕೆಲವೊಂದು ಮಾನಸಿಕ ರೋಗ ಇರಬಹುದು; ಭ್ರೂಣದಲ್ಲಿ ಬೇರೆ ಅಂಗಗಳಲ್ಲಿ ತೊಂದರೆ ಇದ್ದರೆ ಅಥವಾ ಆನುವಂಶಿಕ ತೊಂದರೆಗಳಿದ್ದರೆ; ಅವಳಿ ಗರ್ಭಾವಸ್ಥೆಯಾಗಿದ್ದರೆ; ಈ ಹಿಂದೆ ಗರ್ಭಪಾತವಾಗಿದ್ದರೆ; ಬಂಜೆತನಕ್ಕೆ ಚಿಕಿತ್ಸೆ ಪಡೆದಿದ್ದರೆ- ಇಂತಹ ಮಹಿಳೆಯರಲ್ಲಿ ಜನ್ಮಜಾತವಾಗಿ ಬರುವಂತಹ ಹೃದಯದ ಕಾಯಿಲೆಗಳ ಪ್ರಮಾಣವು ಸಾಮಾನ್ಯ ಜನರಿಗಿಂತ ಹೆಚ್ಚಾಗಿರುತ್ತದೆ.
  4. ಈ ಕಾಯಿಲೆಗಳ ಲಕ್ಷಣಗಳೇನು? ಇವುಗಳನ್ನು ಹೇಗೆ ಗುರುತಿಸುವುದು? ಈ ಕಾಯಿಲೆಗಳು ವಯಸ್ಸಿಗನುಸಾರವಾಗಿ, ಬೇರೆ ಬೇರೆ ಲಕ್ಷಣಗಳಿಂದ ಕಾಣಿಸಿಕೊಳ್ಳುತ್ತವೆ. ನವಜಾತ ಶಿಶುಗಳಲ್ಲಿ – ಇವುಗಳಿಂದಾಗಿ ಹಾಲುಣಿಸುವ ಸಮಸ್ಯೆಗಳು, ಅಂದರೆ ಮಗು ಬಿಟ್ಟು ಬಿಟ್ಟು ಹಾಲು ಕುಡಿಯುವುದು, ಹಾಲು ಕುಡಿಯುವಾಗ ಅತಿಯಾಗಿ ಬೆವರುವುದು, ಹಾಲು ಕುಡಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಮತ್ತು ತಾಯಿ ಮಗುವನ್ನು ಎತ್ತಿಕೊಂಡಾಗ ಅತಿಯಾಗಿ ಹೃದಯ ಬಡಿತದ ಅರಿವು ಆಗುವುದು ಮುಂತಾದವು.
Advertisement

ಚಿಕ್ಕ ಮಕ್ಕಳಲ್ಲಿ ಅಂದರೆ 5 ವರ್ಷದ ಕೆಳಗಿನ ಮಕ್ಕಳಲ್ಲಿ- ಪದೇಪದೆ ಶೀತ, ಕೆಮ್ಮು, ಜ್ವರ ಮುಂತಾದವು ಕಾಣಿಸಿಕೊಳ್ಳುವುದು. ನ್ಯುಮೋನಿಯಾದಿಂದ ಪದೇಪದೇ ಆಸ್ಪತ್ರೆಗೆ ದಾಖಲಾಗುವುದು. ಇದರಿಂದಾಗಿ ಮಗುವಿನ ತೂಕ ಮತ್ತು ಬೆಳವಣಿಗೆಯಲ್ಲಿ ತೊಂದರೆ ಕಾಣುವುದು.

ಶಾಲೆಗೆ ಹೋಗುವ ಮಕ್ಕಳಲ್ಲಿ – ಅವರು ಆಡುವಾಗ ಅತ್ಯಂತ ಸುಸ್ತು ಆಗುವುದು, ಉಸಿರಾಟಕ್ಕೆ ತೊಂದರೆಯಾಗುವುದು ಮುಂತಾದವು.

ಇನ್ನು ಕೆಲವು ಮಕ್ಕಳಲ್ಲಿ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದರೆ ಅಕಸ್ಮಾತಾಗಿ ಬೇರೆ ಯಾವುದೋ ಒಂದು ಕಾಯಿಲೆಗೆ ಆಪರೇಷನ್‌ ಆಗಬೇಕಾದರೆ, ಆಪರೇಷನ್‌ ಆಗುವ ಮುನ್ನ ಹೃದಯದ ಸ್ಕ್ಯಾನ್‌ ಮಾಡಿಸಿದಾಗ, ಹೃದಯದ ತೊಂದರೆ ಇದೆ ಎಂದು ಕಂಡುಬರಬಹುದು.

ಹೀಗೆ ಜನ್ಮಜಾತವಾಗಿ ಬರುವ ಹೃದಯದ ಕಾಯಿಲೆಗಳು ಬೇರೆಬೇರೆ ಲಕ್ಷಣಗಳಿಂದ ಕಾಣಿಸಿಕೊಳ್ಳುತ್ತವೆ.

  1. ಮುಂಜಾಗ್ರತೆ ವಹಿಸಬಹುದೇ ಅಥವಾ ತಡೆಗಟ್ಟಬಹುದೇ? ಇದು ಕೂಡ ತುಂಬ ಮಹತ್ವದ ಅಂಶ. ಏಕೆಂದರೆ ಈ ವಿಷಯದ ಬಗ್ಗೆ ತುಂಬಾ ಜನರಿಗೆ ತಿಳಿದಿಲ್ಲ. ಮಗುವು ತಾಯಿಯ ಗರ್ಭಕೋಶದಲ್ಲಿ ಇರುವಾಗಲೇ (ಜನನವಾಗುವ ಮುನ್ನ) ಜನ್ಮಜಾತವಾಗಿ ಬರುವ ಹೃದಯದ ಕಾಯಿಲೆಗಳನ್ನು ಗುರುತಿಸಬಹುದು. ಇವುಗಳನ್ನು ಗುರುತಿಸಲು ಮಾಡುವ ಪರೀಕ್ಷೆಗೆ Fetal echo ಅಥವಾ ಭ್ರೂಣದ ಹೃದಯದ ಸ್ಕ್ಯಾನ್‌ ಎನ್ನುತ್ತೇವೆ. ಕೆಲವು ತೊಂದರೆಗಳಿಗೆ ಮಗು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಚಿಕಿತ್ಸೆ ನೀಡಬಹುದು. ಒಂದು ವೇಳೆ ಸಮಸ್ಯೆ ತುಂಬಾ ಸಂಕೀರ್ಣವಾಗಿ ಕಂಡುಬಂದರೆ ಅದನ್ನು ಸರಿಪಡಿಸಲು ಯಾವುದೇ ವೈದ್ಯಕೀಯ ಶಸ್ತ್ರಚಿಕಿತ್ಸೆಯ ಆಯ್ಕೆಗಳು ಲಭ್ಯವಿಲ್ಲದಿದ್ದರೆ, ಆ ಭ್ರೂಣವನ್ನು ಕಾನೂನುಬದ್ಧವಾಗಿ 20 ವಾರದ ಒಳಗೆ ತೆಗೆಸಬಹುದು. ಇದಕ್ಕೆ ನಾವು ಮೆಡಿಕಲ್‌ ಟರ್ಮಿನೇಶನ್‌ (MTP – Medical Termination of Pregnancy) ಎನ್ನುತ್ತೇವೆ.
  2. ಈ ಪರೀಕ್ಷೆಯನ್ನು ಎಲ್ಲ ಗರ್ಭಿಣಿಯರಿಗೂ ಮಾಡಿಸಬೇಕೇ? ಈ ಸ್ಕ್ಯಾನನ್ನು ಎಲ್ಲ ಗರ್ಭಿಣಿಯರಿಗೆ ಮಾಡಿಸುವುದು ಒಳ್ಳೆಯದು. ಆದರೆ ವಾಸ್ತವವಾಗಿ ಈ ಪರೀಕ್ಷೆಯನ್ನು ಮಾಡುವಂತಹ ವೈದ್ಯರು ಎಲ್ಲ ಕಡೆ ಲಭ್ಯವಿಲ್ಲ. ಆದ್ದರಿಂದ ಕನಿಷ್ಠ ಪಕ್ಷ ಹೆಚ್ಚಿನ ಅಪಾಯ ಇರುವ (High risk pregnancy) ಗರ್ಭಿಣಿಯರಿಗಾದರೂ ಇದನ್ನು ಮಾಡಿಸುವುದು ಅತ್ಯವಶ್ಯಕ. ಸಾಮಾನ್ಯವಾಗಿ ಸ್ತ್ರೀ ರೋಗ ತಜ್ಞರು ಅನಾಮಲಿ ಸ್ಕ್ಯಾನನ್ನು (Anomaly scan) ನ್ನು ಎಲ್ಲ ಗರ್ಭಿಣಿಯರಿಗೆ ಮಾಡುತ್ತಾರೆ. ಅವರಿಗೆ ಏನಾದರೂ ಅನುಮಾನ ಬಂದರೆ ಅವರು ಈ ಸ್ಕ್ಯಾನ್‌ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಈ ಪರೀಕ್ಷೆಯನ್ನು Pediatric Cardiologist ಅಥವಾ ಚಿಕ್ಕಮಕ್ಕಳ ಹೃದಯದ ತಜ್ಞರು ಮಾಡುತ್ತಾರೆ.
  3. ಈ ಸ್ಕ್ಯಾನನ್ನು ಯಾವಾಗ ಮಾಡಿಸಬೇಕು? ಈ ಸ್ಕ್ಯಾನನ್ನು ಸಾಮಾನ್ಯವಾಗಿ 16 ರಿಂದ 20 ವಾರಗಳ ನಡುವೆ ಮಾಡುತ್ತೇವೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಮಗುವಿನ ಹೃದಯದ ಬೆಳವಣಿಗೆ 3 ವಾರಕ್ಕೆ ಆರಂಭವಾಗಿ 7 ವಾರದಲ್ಲಿ ಪೂರ್ಣಗೊಳ್ಳುತ್ತದೆ. ನಾವು ಸ್ಕ್ಯಾನ್‌ನಲ್ಲಿ 6 ವಾರಗಳ ಅನಂತರ ಮಗುವಿನ ಹೃದಯ ಬಡಿತವನ್ನು ಗುರುತಿಸಬಹುದು. ಅದರ ಅನಂತರ ಮಗುವಿನ ಬೆಳವಣಿಗೆ ಆಗುತ್ತಿದ್ದಂತೆಯೇ ಹೃದಯದ ಗಾತ್ರವು ಹೆಚ್ಚುತ್ತದೆ. ಇದರಿಂದಾಗಿ 16 ರಿಂದ 20 ವಾರಗಳ ನಡುವೆ ಪರೀಕ್ಷೆ ಮಾಡುವುದರಿಂದ ನಾವು ಎಲ್ಲ ವಿವರಗಳನ್ನು ಸ್ಪಷ್ಟವಾಗಿ ನೋಡಬಹುದು.
Advertisement

ಎರಡನೆಯದಾಗಿ, ಒಂದು ವೇಳೆ ತುಂಬಾ ಸಂಕೀರ್ಣವಾದ ತೊಂದರೆ ಕಂಡುಬಂದರೆ ಆ ಭ್ರೂಣವನ್ನು ನಾವು 20 ವಾರದ ಒಳಗೆ ಕಾನೂನುಬದ್ಧವಾಗಿ ತೆಗೆಸಬಹುದು.

ಇನ್ನು ಕೆಲವು ತೊಂದರೆಗಳಿಗೆ ಭ್ರೂಣದಲ್ಲಿರುವಾಗಲೇ ಚಿಕಿತ್ಸೆ ನೀಡಬಹುದು.

ಕೆಲವೊಂದು ತೊಂದರೆಗಳಿಗೆ ನಾವು ಪುನರಪಿ ಸ್ಕ್ಯಾನಿಂಗ್‌ ಮಾಡಬೇಕಾಗಿ ಬರಬಹುದು. ಇದರಿಂದಾಗಿ ಗರ್ಭಧಾರಣೆಯನ್ನು ಹೇಗೆ ಫಾಲೋ ಅಪ್‌ ಮಾಡಬೇಕು, ಹೆರಿಗೆ ಎಲ್ಲಿ ಮಾಡಿಸಬೇಕು ಮತ್ತು ಮಗು ಜನನವಾದ ಮೇಲೆ ಹೇಗೆ ಆರೈಕೆ ಮಾಡಬೇಕೆಂದು ಯೋಜನೆ ಮಾಡಬಹುದು.

  1. ಈ ಸ್ಕ್ಯಾನ್‌ನಿಂದ ಮಕ್ಕಳಲ್ಲಿ ಕಂಡುಬರುವಂತಹ ಎಲ್ಲ ಹೃದಯದ ಕಾಯಿಲೆಗಳನ್ನು ಕಂಡುಹಿಡಿಯಬಹುದೇ? ಈ ಪರೀಕ್ಷೆಯಿಂದ ಶೇ. 90ಕ್ಕಿಂತ ಹೆಚ್ಚು ತೊಂದರೆಗಳನ್ನು ಕಂಡುಹಿಡಿಯಬಹುದು. ಈ ಸ್ಕ್ಯಾನ್‌ನ ಉದ್ದೇಶವೇನೆಂದರೆ ನಾವು ಅತಿ ಕಠಿನವಾದ ತೊಂದರೆಗಳನ್ನು ಮುಂಚಿತವಾಗಿ ಕಂಡುಹಿಡಿದು ಅದನ್ನು ತಡೆಗಟ್ಟುವುದು.
  2. ಕಂಡುಹಿಡಿದ ತತ್‌ಕ್ಷಣವೇ ಚಿಕಿತ್ಸೆ ಮಾಡಿಸಬೇಕೇ ಅಥವಾ ಕಾಯಬಹುದೇ? ಈ ಪ್ರಶ್ನೆಗೆ ಒಂದು ವಾಕ್ಯದಲ್ಲಿ ಉತ್ತರ ಹೇಳುವುದು ತುಂಬಾ ಕಠಿನ. ಏಕೆಂದರೆ ನಾವು ಚಿಕಿತ್ಸೆ ಮಾಡಿಸಬೇಕೇ ಅಥವಾ ಕಾಯಬಹುದೇ ಎಂಬುದು ಮಗುವಿಗೆ ಯಾವ ರೀತಿಯ ಹೃದಯದ ತೊಂದರೆ ಇದೆ ಎಂಬುದರ ಮೇಲೆ ನಿರ್ಧರಿತವಾಗಿದೆ. ಉದಾಹರಣೆಗೆ, ತುಂಬಾ ಸರಳವಾದ ತೊಂದರೆ ಇದ್ದರೆ ನಾವು ಕಾಯಬಹುದು ಅಥವಾ ತುಂಬಾ ಕಠಿನವಾದ ತೊಂದರೆ ಇದ್ದರೆ ತತ್‌ಕ್ಷಣವೇ ಶಸ್ತ್ರಚಿಕಿತ್ಸೆ ಬೇಕಾಗಬಹುದು. ಆದ್ದರಿಂದ ಇದು ವೈದ್ಯರು ಮಾಡುವ ತಪಾಸಣೆ ಮತ್ತು ಅವರ ಸಲಹೆಯ ಮೇಲೆ ಅವಲಂಬಿತವಾಗಿರುತ್ತದೆ.
  3. ಈ ಕಾಯಿಲೆಗಳಿಗೆ ಚಿಕಿತ್ಸೆಗಳೇನು? ಚಿಕಿತ್ಸೆ ಕೂಡ ಯಾವ ರೀತಿಯ ತೊಂದರೆ ಇದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ತುಂಬಾ ಸರಳವಾದ ಸಮಸ್ಯೆ ಇದ್ದರೆ; ಉದಾಹರಣೆಗೆ ಒಂದು ಚಿಕ್ಕ ರಂಧ್ರ ಇದ್ದರೆ ಅದಕ್ಕೆ ಚಿಕಿತ್ಸೆಯೇ ಬೇಡ. ಮಗು ಬೆಳೆದ ಹಾಗೆ ಅದು ತಾನಾಗಿ ಮುಚ್ಚಿಕೊಳ್ಳುತ್ತದೆ. ಹೆಚ್ಚಾಗಿ ಕಂಡುಬರುವಂತಹ ಹೃದಯದ ಕಾಯಿಲೆಗಳಿಗೆ ನಾವು ತೆರೆದ ಹೃದಯದ ಚಿಕಿತ್ಸೆ (Open Heart Surgery) ಇಲ್ಲದೇ ಅವುಗಳನ್ನು ಸರಿಪಡಿಸಬಹುದು. ಇದಕ್ಕೆ ನಾವು ಇಂಟರ್‌ವೆನ್ಶನ್‌ ಎನ್ನುತ್ತೇವೆ. ಹೀಗೆ ಮಾಡುವುದರಿಂದ ಎದೆಯ ಮೇಲೆ ಗಾಯ ಇರುವುದಿಲ್ಲ, ಅನಸ್ತೇಶಿಯಾ ಮತ್ತು ರಕ್ತ ಮರುಪೂರಣದ ಆವಶ್ಯಕತೆಯೂ ಇರುವುದಿಲ್ಲ. ಇದರಿಂದ ವೆಚ್ಚ ಮತ್ತು ಜೀವ ಅಪಾಯ ಕಡಿಮೆಯಾಗುತ್ತದೆ.ಆದರೆ ಸ್ವಲ್ಪ ಪ್ರಮಾಣದ ಕಠಿನವಾದ ಹೃದಯದ ತೊಂದರೆಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇರುತ್ತದೆ
  4. ಇಂಟರ್‌ವೆನ್ಶನ್‌ ಎಂದರೇನು? ಕಾಯಿಲೆ ಮತ್ತು ಮರಣದ ನಡುವೆ ಬಂದು, ಸಾವಿನ ದವಡೆಯಿಂದ ಮಗುವನ್ನು ಕಾಪಾಡುವುದು. ಮಗುವಿನ ತೊಡೆಯ ಭಾಗದಲ್ಲಿ ಒಂದು ಸಣ್ಣ ಇಂಜೆಕ್ಷನ್‌ ಮಾಡಿ ಅಲ್ಲಿಂದ ಒಂದು ಸಣ್ಣ ಕೊಳವೆಯ (catheter) ಮುಖಾಂತರ ಹೃದಯವನ್ನು ತಲುಪಿ, ಹೃದಯದಲ್ಲಿರುವ ರಂಧ್ರವನ್ನು ಡಿವೈಸ್‌ನಿಂದ ಮುಚ್ಚಬಹುದು. ಕೆಲವೊಂದು ಬಾರಿ ಕವಾಟ ಚಿಕ್ಕದಿದ್ದರೆ ಅದನ್ನು ಬಲೂನ್‌ ಹಾಕಿ ದೊಡ್ಡದು ಮಾಡಬಹುದು. ಇವೆಲ್ಲವೂ ಯಾವ ಆಪರೇಷನ್‌ ಇಲ್ಲದೇ ಕಡಿಮೆ ವೆಚ್ಚದಲ್ಲಿ ಜೀವ ಅಪಾಯವಿಲ್ಲದೆ ಮಾಡುವಂತಹವು.
  5. ಈ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದೇ? ಹೆಚ್ಚಿನ ಕಾಯಿಲೆಗಳನ್ನು ನಾವು ಸಂಪೂರ್ಣವಾಗಿ ಗುಣಪಡಿಸಬಹುದು ಮತ್ತು ಅತ್ಯಂತ ಕಠಿನವಾದ ಕಾಯಿಲೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಅತ್ಯಂತ ಕಠಿನವಾದ ತೊಂದರೆ ಇದ್ದರೆ ಚಿಕಿತ್ಸೆಯ ಅನಂತರ ಸಹಜತೆಗೆ ನಿಕಟವಾದ ಜೀವನ ಮಾಡಬಹುದು. ಹೇಗೆ ಒಂದು ಒಡೆದ ಕನ್ನಡಿಯನ್ನು ಜೋಡಿಸಿದರೆ ಅದು ಹಿಂದಿನಂತೆ ಆಗುವುದಿಲ್ಲವೋ ಅದೇ ರೀತಿ ನಾವು ಸರಿಪಡಿಸಿದ ಹೃದಯ, ಹೊಸ ಹೃದಯ ಆಗಲು ಸಾಧ್ಯವಿಲ್ಲ. ಆದರೆ ಆದಷ್ಟು ಸರಿಪಡಿಸಬಹುದು. ಈ ಕಾರಣದಿಂದಾಗಿಯೇ ಭ್ರೂಣದ ಎಕೋ ಸ್ಕ್ಯಾನ್‌ ಮಾಡಿಸಿಕೊಳ್ಳುವುದರಿಂದ ಈ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು.
  6. ಈ ಕಾಯಿಲೆಗಳಿಗೆ ಚಿಕಿತ್ಸೆ ಪಡೆದ ಮಕ್ಕಳು ಬೇರೆ ಮಕ್ಕಳ ತರಹ ಜೀವನ ನಡೆಸಬಹುದೇ? ಇವರ ಜೀವಾವಧಿಯಲ್ಲಿ ಏನಾದರೂ ಬದಲಾವಣೆ ಉಂಟಾಗುತ್ತದೆಯೇ? ಸಾಮಾನ್ಯವಾಗಿ ಚಿಕಿತ್ಸೆ ಪಡೆದ ಮಕ್ಕಳು ಬೇರೆ ಮಕ್ಕಳ ತರಹ ಜೀವನ ನಡೆಸಬಹುದು. ಅವರು ಕೂಡ ಆಟವಾಡಬಹುದು, ಓದಬಹುದು ಮತ್ತು ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಆದರೆ ಸ್ವಲ್ಪ ಪ್ರಮಾಣದ ಮಕ್ಕಳು, ಅಂದರೆ ಯಾರ ಹೃದಯದ ಕೆಲಸ ಕಡಿಮೆಯಾಗಿರುತ್ತದೆಯೋ ಅವರ ಜೀವನ ಮತ್ತು ಜೀವಾವಧಿಯಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಬಹುದು.
  7. ಒಂದು ಮಗುವಿಗೆ ಸಿಎಚ್‌ಡಿ ಇದ್ದರೆ ಅನಂತರ ಜನಿಸುವ ಮಗುವಿನಲ್ಲಿ ಕಾಣಿಸಿಕೊಳ್ಳುವ ಸಂಭವಗಳೆಷ್ಟು? ಒಂದು ಮಗುವಿಗೆ ಸಿಎಚ್‌ಡಿ ಇದ್ದರೆ, ಅನಂತರದ ಮಗುವಿನಲ್ಲಿ ಕಾಣಿಸಿಕೊಳ್ಳುವ ಸಂಭವ ಶೇ. 2-5ರಷ್ಟು ಇರುತ್ತದೆ. ಒಂದು ವೇಳೆ ಈ ಹಿಂದಿನ ಇಬ್ಬರು ಮಕ್ಕಳಿಗೆ ಸಿಎಚ್‌ಡಿ ಇದ್ದರೆ ಇದರ ಸಂಭವ ಶೇ. 5-10 ಆಗುತ್ತದೆ.
  8. ಮಾತ್ರೆಯಿಂದ ಈ ತೊಂದರೆ ಸರಿಹೋಗುತ್ತದೆಯೇ? ಮಾತ್ರೆಗಳು ಕೆಲವು ಸನ್ನಿವೇಶಗಳಲ್ಲಿ ಮಾತ್ರ ಉಪಯೋಗಕಾರಿಯಾಗಿವೆ. ಹೃದಯ ಬಡಿತ ಏರುಪೇರಾದಾಗ, ಹೃದಯಸ್ತಂಭನ (heart failure) ಆದಾಗ, ಶಸ್ತ್ರಚಿಕಿತ್ಸೆ ಅಥವಾ ಇಂಟರ್‌ವೆನ್ಶನ್‌ನ ಅನಂತರ ಸ್ವಲ್ಪ ಸಮಯದವರೆಗೆ.
  9. ಮದುವೆಯಾಗಬಹುದಾ ಅಥವಾ ಗರ್ಭಿಣಿಯಾಗಬಹುದಾ?  ಹೃದಯ ಕಾಯಿಲೆಯನ್ನು ಬೇಗ ಗುರುತಿಸಿ, ವೈದ್ಯರ ಸಲಹೆ ಪಡೆದು, ಅದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡ ಅನಂತರ ಅವರು ಮದುವೆಯಾಗಬಹುದು ಮತ್ತು ಬೇರೆಯವರ ತರಹ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಬಹುದು.

ಸಮಾಪನ

„ ಜನ್ಮಜಾತವಾಗಿ (ಹುಟ್ಟಿನಿಂದ) ಬರುವಂತಹ ಎಲ್ಲ ಹೃದಯದ ಕಾಯಿಲೆಗಳು ಅಪಾಯಕಾರಿಯಲ್ಲ ಮತ್ತು ಎಲ್ಲ ಹೃದಯದ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಬೇಕಾಗಿಲ್ಲ.

„ ನಾವು ಮಗು ತಾಯಿಯ ಗರ್ಭಕೋಶದಲ್ಲಿ ಇರುವಾಗಲೇ (ಜನನವಾಗುವ ಮುನ್ನ) ಜನ್ಮಜಾತವಾಗಿ ಬರುವ ಹೃದಯದ ಕಾಯಿಲೆಗಳನ್ನು (CHDs) ಭ್ರೂಣದ ಎಕೋ ಸ್ಕ್ಯಾನ್‌ನ ಮುಖಾಂತರ ಗುರುತಿಸಬಹುದು ಮತ್ತು ತಡೆಗಟ್ಟಬಹುದು.

„ ನವಜಾತ ಸ್ಕ್ರೀನಿಂಗ್‌ ತಿಂಗಳ (ಸೆಪ್ಟೆಂಬರ್‌) ಸಂದರ್ಭದಲ್ಲಿ, ಸಾರ್ವತ್ರಿಕ ನವಜಾತ ಸ್ಕ್ರೀನಿಂಗ್‌ ಅನ್ನು ಭರವಸೆಯ ವಾಸ್ತವ ಮಾಡಲು ನಮ್ಮ ಪ್ರಾಯೋಗಿಕ, ರೋಗ ನಿರ್ಣಯ ಮತ್ತು ತರಬೇತಿ ಬೆಂಬಲವನ್ನು ವಿಸ್ತರಿಸಲು ನಾವು ಆಶಿಸುತ್ತೇವೆ.

ಡಾ| ಅಕ್ಕತೈ ಎಸ್‌. ತೇಲಿ ಫೀಟಲ್‌ ಆ್ಯಂಡ್‌ ಪೀಡಿಯಾಟ್ರಿಕ್‌ ಕಾರ್ಡಿಯಾಲಜಿಸ್ಟ್‌, ಅಸಿಸ್ಟೆಂಟ್‌ ಪ್ರೊಫೆಸರ್‌, ಕಾರ್ಡಿಯಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ಮತ್ತು ನಿಯೋನೇಟಲ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next