Advertisement
ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಯಾವುದೇ ಅಕ್ರಮಗಳು, ಕರ್ತವ್ಯ ಲೋಪ, ಭ್ರಷ್ಟಾಚಾರ, ಮೇಲಧಿಕಾರಿಗಳಿಂದ ಕಿರುಕುಳ ಇತ್ಯಾದಿ ಇಲಾಖಾ ವಿಚಾರಣೆಯ ವ್ಯಾಪ್ತಿಗೊಳಪಡುವ ಪ್ರಕರಣಗಳ ವಿಚಾರಣೆಯ ಜವಾಬ್ದಾರಿ ನಿವೃತ್ತ ನ್ಯಾಯಾಧೀಶರ ಹೆಗಲಿಗೆ ಬೀಳಲಿದೆ. ಈ ಮೂಲಕ ಪೊಲೀಸ್ ಮೇಲಧಿಕಾರಿಗಳಿಗಿದ್ದ ಇಲಾಖಾ ವಿಚಾರಣೆಯ ಹೊರೆ ತಪ್ಪಿದಂತಾಗಿದೆ.
Related Articles
Advertisement
ಹೇಗಿರಲಿದೆ ಇಲಾಖಾ ವಿಚಾರಣೆ?ಪೊಲೀಸ್ ಇಲಾಖೆಯಲ್ಲಿ ಇದುವರೆಗೆ ಕಾನ್‌ಸ್ಟೆಬಲ್, ಎಎಸ್‌ಐ, ಪಿಎಸ್‌ಐ, ಇನ್‌ಸ್ಪೆಕ್ಟರ್‌ಗಳ ವಿರುದ್ಧ ಆರೋಪಗಳು ಕೇಳಿಬಂದರೆ ಎಸಿಪಿ ಮಟ್ಟದ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಪೊಲೀಸ್ ಆಯುಕ್ತರು ಅಥವಾ ಎಸ್.ಪಿ. ಹಂತದ ಅಧಿಕಾರಿಗಳಿಗೆ ವರದಿ ನೀಡುತ್ತಿದ್ದರು. ಇನ್ನು ಎಸ್.ಪಿ. ಮಟ್ಟದ ಐಪಿಎಸ್ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಐಜಿಪಿ, ಎಡಿಜಿಪಿ ಹಾಗೂ ಅದರಿಂದ ಮೇಲ್ಪಟ್ಟ ರ್‍ಯಾಂಕ್‌ನ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಅವರ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದರು. ಇದೀಗ ಪೊಲೀಸ್ ಇಲಾಖೆಯ ಎಲ್ಲ ಹಂತದ ಸಿಬಂದಿ ಅಥವಾ ಅಧಿಕಾರಿಗಳ ವಿರುದ್ಧದ ಪ್ರಕರಣಗಳ ಇಲಾಖಾ ವಿಚಾರಣೆಯನ್ನು ನಿಯೋಜಿತ ನಿವೃತ್ತ ನ್ಯಾಯಾಧೀಶರೇ ನಿರ್ವಹಿಸಲಿದ್ದಾರೆ. ವಿಚಾರಣಾಧಿಕಾರಿಗಳಾಗಿ ನಿವೃತ್ತ ನ್ಯಾಯಾಧೀಶರು ಪೊಲೀಸ್ ಆಧಿಕಾರಿ ಅಥವಾ ಸಿಬಂದಿಯ ಖುದ್ದು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ವರದಿ ತಯಾರಿಸಿ ಅವರ ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಇದರ ಆಧಾರದ ಮೇಲೆ ಆರೋಪಿತ ಪೊಲೀಸ್ ಸಿಬಂದಿಯ ಭವಿಷ್ಯ ನಿರ್ಧಾರವಾಗಲಿದೆ. ವರ್ಷದಲ್ಲಿ ನೂರಾರು ವಿಚಾರಣೆ
ಶಿಸ್ತಿನ ಇಲಾಖೆ ಎಂದು ಗುರುತಿಸಿಕೊಂಡಿರುವ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬಂದಿಗಳ ಮೇಲೆ ಭ್ರಷ್ಟಾಚಾರ, ಕರ್ತವ್ಯ ಲೋಪ, ದುರ್ನಡತೆಯ ಆರೋಪಗಳು ಹೆಚ್ಚಾಗುತ್ತಿದೆ. ಕಳೆದ 1 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 80ಕ್ಕೂ ಹೆಚ್ಚಿನ ಪೊಲೀಸ್ ಸಿಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆದಿರುವುದು ಮೇಲಿನ ಅಂಶಗಳಿಗೆ ಪುಷ್ಠಿ ನೀಡುತ್ತದೆ. ಈ ಪೈಕಿ ಕೆಲವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. “ಪೊಲೀಸ್ ಇಲಾಖೆಯಲ್ಲಿ ಇನ್ನು ಮುಂದೆ ನಿವೃತ್ತ ನ್ಯಾಯಾಧೀಶರು ವಿಚಾರಣಾಧಿಕಾರಿಯಾಗಿ ಇಲಾಖಾ ವಿಚಾರಣೆ ನಡೆಸಲಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಇತರ ಪ್ರಕರಣಗಳ ನಡುವೆ ಇಲಾಖಾ ವಿಚಾರಣೆ ನಡೆಸುವುದು ಹೊರೆಯಾಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.”
– ಕಲಾ ಕೃಷ್ಣಸ್ವಾಮಿ, ಎಐಜಿಪಿ (ಆಡಳಿತ), ರಾಜ್ಯ ಪೊಲೀಸ್ ಇಲಾಖೆ -ಅವಿನಾಶ್ ಮೂಡಂಬಿಕಾನ