Advertisement

ಶ್ರವಣದೋಷಕ್ಕೆ ಹಿಯರಿಂಗ್‌ ಡಿವೈಸ್‌

10:17 PM Aug 26, 2019 | mahesh |

ಮನುಷ್ಯನಿಗೆ ಮಾತು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕೇಳುವ ಶಕ್ತಿ. ಒಂದು ವೇಳೆ ಬೇರೆ ಶಬ್ದಗಳನ್ನು ಕೇಳುವ ಶಕ್ತಿಯೇ ಇಲ್ಲದಿದ್ದರೆ ಆತನಿಗೆ ಮಾತಿನ ಶಕ್ತಿ ಕೂಡ ಕುಂಠಿತವಾಗುತ್ತದೆ. ಭಾರತದ ಜನಸಂಖ್ಯೆಯಲ್ಲಿ ಶೇ. 6.3 ರಷ್ಟು (ಸರಿಸುಮಾರು 63 ಮಿಲಿಯನ್‌ ಜನರು) ಕೆಲವು ಹಂತದ ಕ್ರಿಯಾತ್ಮಕ ಶ್ರವಣ ಸಮಸ್ಯೆಯನ್ನು ಹೊಂದಿ ದ್ದಾರೆ. ತಂತ್ರಜ್ಞಾನದಿಂದಾಗಿ ಶ್ರವಣದೋಷಕ್ಕೆ ಹಿಯರಿಂಗ್‌ ಡಿವೈಸ್‌ಗಳು ಬಂದಿವೆ.

Advertisement

ಭಾರತದಲ್ಲಿ ಅಸಮರ್ಥತೆಗೆ ಎರಡನೇ ಮುಖ್ಯ ಕಾರಣವೇ ಶ್ರವಣದೋಷ. ಹೆಚ್ಚುತ್ತಿರುವ ಶಬ್ದ ಮಾಲಿನ್ಯ, ಕೌಟುಂಬಿಕ ಹಿನ್ನೆಲೆ ಮುಂತಾದ ಕಾರಣಗಳಿಂದ ಈ ಶ್ರವಣದೋಷ ಇಂದು ಸಾಮಾನ್ಯ ಎಂಬಂತಾಗಿದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 63 ಮಿಲಿಯನ್‌ ಜನರು ಕಿವುಡುತನಕ್ಕೆ ಒಳಗಾಗಿದ್ದಾರೆ.

ದೇಹದ ಯಾವುದೇ ಅಂಗವು ಊನತೆಯಿಂದ ಕೂಡಿದ್ದರೆ, ಅದು ಆ ಮನುಷ್ಯನ ಇಡೀ ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಅಂಥದ್ದರಲ್ಲಿ ದೇಹದ ಪ್ರಮುಖ ಭಾಗವಾದ ಮತ್ತು ಆಲಿಸುವ ಶಕ್ತಿ ಹೊಂದಿರುವ ಕಿವಿಯೇ ಕೇಳಿಸದಂತಾದರೆ? ಜೀವನಾದ್ಯಂತ ಇದೊಂದು ಹಿಂಸೆಯಾಗಿ ಕಾಡುತ್ತದೆ.

ಹಿಯರಿಂಗ್‌ ಡಿವೈಸ್‌
ತಲೆಗೆ ಪೆಟ್ಟು ಬಿಧ್ದೋ, ಕಿವಿಗೆ ತಡೆದು ಕೊಳ್ಳಲಾಗದಷ್ಟು ದೊಡ್ಡದಾದ ಶಬ್ದದಿಂದ ಪೆಟ್ಟು ಬಿದ್ದಲ್ಲಿ, ಆನುವಂಶೀಯ ಅಥವಾ ಇತರ ಕಾರಣಗಳಿಂದಾಗಿ ಶ್ರವಣದೋಷ ಉಂಟಾಗುತ್ತದೆ. ಶ್ರವಣ ದೋಷವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಕೊಡಿಸಬೇಕು. ಮಕ್ಕಳು ಬೆಳೆಯುತ್ತಾ ಹೋದಂತೆ ಅವರಲ್ಲಿ ಕೇಳಿಸಿಕೊಳ್ಳುವ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಕೇಳಿಸಿಕೊಳ್ಳುವ ಶಕ್ತಿಯನ್ನು ಮರು ವಿಕಸಿಸಲು ಹಿಯರಿಂಗ್‌ ಡಿವೈಸ್‌ ನೆರವಿಗೆ ಬರುತ್ತದೆ. ಆದರೆ, ಕಿವುಡುತನ ತೊಂದರೆ ಶೇ. 80 ಮೇಲ್ಪಟ್ಟಾಗ ಈ ಹಿಯರಿಂಗ್‌ ಡಿವೈಸ್‌ ಕೂಡಾ ಪ್ರಯೋಜನಕ್ಕೆ ಬರದೇ ಇರುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆಗ ಕಾಂಕ್ಲಿಯರ್‌ ಇಂಪ್ಲಾಂಟ್‌ ಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ತಂತ್ರಜ್ಞಾನ ದಿಂದ ಪರಿಹಾರ
ಹಿಂದಿನ ಕಾಲದಲ್ಲಾದರೆ, ಶ್ರವಣದೋಷ ಎಂಬುದು ಜೀವನಪರ್ಯಂತ ಸರಿಪಡಿಸ ಲಾಗದ ಒಂದು ಸಮಸ್ಯೆಯಾಗಿ ಉಳಿಯುತ್ತಿತ್ತು. ಆದರೆ, ಪ್ರಸ್ತುತ ತಂತ್ರಜ್ಞಾನಗಳ ಬೆಳವಣಿಗೆಯು ಶ್ರವಣದೋಷ ಹೊಂದಿರುವ ವ್ಯಕ್ತಿಗೂ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡುವ ಸಾಹಸವನ್ನು ಮಾಡಿದೆ. ದೋಷವನ್ನು ದೇಹದ ಒಳಭಾಗದಿಂದ ಸರಿಪಡಿಸಲಾಗದಿದ್ದರೂ, ಆ ದೋಷಕ್ಕೆ ಪರಿಹಾರ ನೀಡಿ ವ್ಯಕ್ತಿ ದನಿಯನ್ನು ಆಲಿಸುವಂತೆ ಮಾಡುವಲ್ಲಿ ತಂತ್ರಜ್ಞಾನ ಕ್ಷೇತ್ರ ಸಫಲವಾಗಿದೆ. ಅದೆಂದರೆ ಹಿಯರಿಂಗ್‌ ಡಿವೈಸ್‌.

Advertisement

ಶಬ್ದ ಕೇಳಲು ನೆರವು
ಇದೊಂದು ಮಾದರಿಯ ಶ್ರವಣ ಸಾಧನ. ಕಿವುಡುತನ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಶಬ್ದ ಕೇಳಿಸಲು ಇದು ನೆರವಾಗುತ್ತದೆ. ಇತರರು ಮಾತನಾಡುವುದು, ಅಥವಾ ಬಾಹ್ಯ ಶಬ್ದಗಳನ್ನು ಗ್ರಹಿಸಲು ಈ ಶ್ರವಣ ಸಾಧನ ನೆರವಿಗೆ ಬರುತ್ತದೆ. ಶ್ರವಣ ಸಾಧನವು ಎಲೆಕ್ಟ್ರಾನಿಕ್‌ ಉಪಕರಣವಾಗಿದ್ದು, ಧ್ವನಿಯನ್ನು ವರ್ಧಿಸಿ ಕೇಳುವಂತೆ ಮಾಡುತ್ತದೆ.

ವಿವಿಧ ವಿಧ
ಕಿವಿಯ ಹೊರ ಭಾಗದಿಂದ ಇಡುವ ಮಾದರಿಯ, ಒಳಭಾಗದಿಂದ ಸಂಪರ್ಕಿಸುವ, ನರಕ್ಕೆ ಸಂಪರ್ಕಿಸುವ ವಿವಿಧ ವಿಧಗಳ ಸಾಧನಗಳಿವೆ. ಹಳೆ ಮಾದರಿಯ ಪಾಕೆಟ್‌ನಲ್ಲಿ ಇಡುವ ಸಾಧನವೂ ಇದೆ. ಅದಕ್ಕೆ ವಯರ್‌ ವ್ಯವಸ್ಥೆಯಿರುತ್ತದೆ. ಯಾವುದೇ ವಿಧದ ಸಾಧನಗಳನ್ನೂ ಆನ್‌ಲೈನ್‌ನಲ್ಲಿ ಖರೀದಿ ಮಾಡುವುದು ಸರಿಯಲ್ಲ. ಏಕೆಂದರೆ, ಅದು ಸರ್ವೀಸ್‌ ಇಲ್ಲದಿರುವ ಸಾಧ್ಯತೆಯೂ ಹೆಚ್ಚಿರುತ್ತದೆ ಎನ್ನುತ್ತಾರೆ ವೈದ್ಯರು.

ಆಡಿಯಾಲಜಿಸ್ಟ್‌ ಸಲಹೆ ಅಗತ್ಯ
ಬೇಕಾಬಿಟ್ಟಿ ಶ್ರವಣಸಾಧನ ಖರೀದಿಸಿ ಕಿವಿಗೆ ಸಿಕ್ಕಿಸಿಕೊಂಡರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಶ್ರವಣಸಾಧನವನ್ನು ಪ್ರಥಮವಾಗಿ ಆಡಿ ಯಾಲಜಿಸ್ಟ್‌ಗೆ ತೋರಿಸಿ ಪರಿಶೀಲಿಸಿಕೊಳ್ಳಬೇಕು. ಆಡಿಯಾಲಜಿಸ್ಟ್‌ ಸಲಹೆ ಇಲ್ಲದೆ, ಬಳಸಿದರೆ ಅಪಾಯ ಉಂಟಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದೊಂಥರ ಪೆನ್‌ಡ್ರೈವ್‌ ಮಾದರಿಯಲ್ಲಿದ್ದು, ಕಿವಿಯ ಹಿಂಭಾಗದಲ್ಲಿ ಸಿಕ್ಕಿಸಿಕೊಳ್ಳುವುದರಿಂದ ಯಾವುದೇ ಅಡಚಣೆ ಇಲ್ಲ

ಸರಿಪಡಿಸಬಹುದು
ಯಾವುದೇ ಹಿಯರಿಂಗ್‌ ಡಿವೈಸ್‌ನ್ನು ಬಳಸುವ ಮುನ್ನ ಇಎನ್‌ಟಿ ವೈದ್ಯರಿಗೆ ತೋರಿಸಿಯೇ ಬಳಸಬೇಕು. ಶೇ. 80 ಶ್ರವಣದೋಷ ಇರುವವರಿಗೆ ಹಿಯರಿಂಗ್‌ ಡಿವೈಸ್‌ ನೆರವಿಗೆ ಬರುತ್ತದೆ. ಬಳಿಕ ಕಾಂಕ್ಲಿಯರ್‌ ಇಂಪ್ಲಾಂಟ್‌ನ್ನು ಶಸ್ತ್ರಚಿಕಿತ್ಸೆ ಮುಖಾಂತರ ಅಳವಡಿಸಿ ಶ್ರವಣದೋಷವನ್ನು ಸರಿಪಡಿಸಬಹುದು. ಹಿಯರಿಂಗ್‌ ಡಿವೈಸ್‌ನಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಇಲ್ಲ.
– ಡಾ| ವೈ. ಎಂ. ಹೆಗ್ಡೆ, ಇಎನ್‌ಟಿ ವೈದ್ಯರು

-  ಧನ್ಯಾ ಬಾಳಕಜೆ

Advertisement

Udayavani is now on Telegram. Click here to join our channel and stay updated with the latest news.

Next