Advertisement

ತುಮಕೂರಿನ ಘಟನೆ ಗಂಭೀರವಾಗಿ ಪರಿಗಣನೆ: ನಿರ್ಲಕ್ಷ್ಯ ಸಾಬೀತಾದರೆ ವಜಾ ಕ್ರಮ; ಸುಧಾಕರ್‌

09:56 PM Nov 03, 2022 | Team Udayavani |

ಬೆಂಗಳೂರು: ತುಮಕೂರಿನ ಘಟನೆಯ ಬಗ್ಗೆ ತುಂಬಾ ಗಂಭೀರವಾಗಿ ಪರಿಗಣಿಸಲಾಗಿದ್ದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

Advertisement

ನಿರ್ಲಕ್ಷ್ಯ ತೋರಿದ ವೈದ್ಯೆಯ ಅಮಾನತು ಮಾತ್ರವಲ್ಲದೇ ನಿರ್ಲಕ್ಷ್ಯ ಸಾಬೀತು ಆದಲ್ಲಿ ಸೇವೆಯಿಂದ ವಜಾ ಮಾಡಿ ಕ್ರಿಮಿನಲ್‌ ಮೊಕದ್ದಮೆ ಸಹ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಘಟನೆ ನನ್ನ ಮನಸ್ಸಿಗೆ ತೀವ್ರ ಆಘಾತ ಹಾಗೂ ನೋವು ತಂದಿದೆ. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಆದರೂ ಇಂತಹ ಒಂದೆರಡು ಘಟನೆ ಇಡೀ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುತ್ತದೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ಆರೋಗ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರಕರಣದ ತನಿಖೆಗೆ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಘಟನೆಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮೃತಪಟ್ಟಿರುವ ಮಹಿಳೆ ಕುಟುಂಬದಲ್ಲಿ ಪುತ್ರಿ ಇದ್ದು ಅವರ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಟ್ಟು ಸರ್ಕಾರಿ ವೆಚ್ಚದಲ್ಲಿ ಉಚಿತ ಶಿಕ್ಷಣ ಕೊಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಯಾರೇ ಬಂದರೂ ಯಾವುದೇ ದಾಖಲೆ ಕೇಳದೆ ತತ್‌ಕ್ಷಣ ಚಿಕಿತ್ಸೆ ನೀಡಲು ಆದೇಶ ಹೊರಡಿಸಲಾಗುವುದು. ಅಷ್ಟೇ ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಜತೆ ಅಮಾನುಷವಾಗಿ ಅಮಾನವೀಯವಾಗಿ ನಡೆದುಕೊಳ್ಳುವವರನ್ನು ವಜಾ ಮಾಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಸಂಬಂಧ ಮುಂದಿನ ಅಧಿವೇಶನದಲ್ಲಿ ವಿಧೇಯಕ ಸಹ ತರಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next