Advertisement

ಮಂಕಿಪಾಕ್ಸ್ : ಈ ಲಕ್ಷಣಗಳಿದ್ರೆ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಿ; ಸುಧಾಕರ್

07:25 PM Aug 02, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಂಕಿಪಾಕ್ಸ್ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ವಿಶೇಷ ತಾಂತ್ರಿಕ ಸಲಹಾ ಸಮಿತಿ ಸಭೆ ಮಂಗಳವಾರ ಕೃಷ್ಣಾದಲ್ಲಿ ನಡೆಯಿತು.

Advertisement

ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ರಾಜ್ಯದಲ್ಲಿ ಒಟ್ಟು ಮೂರು ಮಂಕಿಪಾಕ್ಸ್ ಶಂಕಿತ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿದ್ದ ಎರಡು ಪ್ರಕರಣಗಳ ವರದಿ ನೆಗೆಟಿವ್ ಬಂದಿದ್ದು, ಬೆಲ್ಜಿಯಂನಿಂದ ಆಗಮಿಸಿದ ಉತ್ತರ ಕನ್ನಡ ಮೂಲದ ಶಂಕಿ ವ್ಯಕ್ತಿಯ ವರದಿ ಬಾಕಿಯಿದೆ ಎಂದು ಹೇಳಿದರು.

ಸಭೆಯಲ್ಲಿ  ತಾಂತ್ರಿಕ ಸಲಹಾ ಸಮಿತಿ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ದೇಶದಲ್ಲಿ 6 ಪ್ರಕರಣಗಳಿದ್ದು, ಕೇರಳದಲ್ಲಿ 4, ಹೊಸದಿಲ್ಲಿ 2 ಪ್ರಕರಣ ದೃಢವಾಗಿದೆ. ಈ ಹಿನ್ನೆಲೆಯಲ್ಲಿ  ನೆರೆ ರಾಜ್ಯಗಳ ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.  ಬಂದರು ಹಾಗೂ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಶಂಕಿತರಿಗೆ ಬೆಂಗಳೂರಿನ ಇಡಿ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯನ್ನು ಐಸೋಲೇಶನ್‌ಗೊಳಿಸಲು ಕಾದಿರಿಸಲಾಗಿದೆ ಎಂದು ಹೇಳಿದರು.

ಸೋಂಕು ದೃಢಗೊಂಡವರಿಗೆ 21 ದಿನಗಳ ಕಾಲ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಶನ್‌ಗೊಳಿಸಿ, ಚಿಕಿತ್ಸೆ ನೀಡಲಾಗುತ್ತದೆ. ಪೂರ್ಣ ಗುಣಮುಖರಾದ ಬಳಿಕವಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ಮಂಕಿಪಾಕ್ಸ್  ಸೋಂಕಿತನೊಂದಿಗೆ  ದೀರ್ಘಕಾಲದವರೆಗಿನ ಸಂಪರ್ಕವನ್ನು ಇರಿಸಿಕೊಂಡಾಗ ಮಾತ್ರ ಸೋಂಕು ಹರಡುತ್ತದೆ. ಅಧ್ಯಯನ ಪ್ರಕಾರ ಈ ಸೋಂಕು ಹೆಚ್ಚಾಗಿ ಸಲಿಂಗಕಾಮಿಗಳಲ್ಲಿ ವರದಿಯಾಗುತ್ತದೆ ಎಂದರು.

ಮಂಕಿಪಾಕ್ಸ್ ಕೋವಿಡ್‌ನಷ್ಟು ವೇಗವಾಗಿ ಹರಡದಿದ್ದರೂ, ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅತ್ಯಂತ ಮುಖ್ಯವಾಗಿದೆ. ಜ್ವರ, ದದ್ದುಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಬೇಕು. ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಈಗಾಗಲೇ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಇನ್ನೂ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ  ಸ್ಕ್ರೀನಿಂಗ್ ವೇಳೆ ಲಕ್ಷಣಗಳಿದ್ದರೆ ಮಾತ್ರ ಐಸೋಲೇಶನ್ ಒಳಪಡಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next