ಹೊನ್ನಾವರ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯ ಲಾಭ ಪಡೆಯಲು ಉತ್ತರ ಕನ್ನಡ ಜನರಿಗೆ ಮತ್ತು ಬಹುಪಾಲು ಮಲೆನಾಡು ಜಿಲ್ಲೆಯವರಿಗೆ ರಾಜ್ಯ ಸರ್ಕಾರದ ಕಾನೂನು ಅಡ್ಡಗಾಲಾಗಿದೆ. ಇದರಿಂದ ತೊಂದರೆಗೊಳಗಾದ ಹಲವರು ಅಸಹಾಯಕರಾಗಿ ಮಾಧ್ಯಮಗಳ ಎದುರು ದೂರುತ್ತಿದ್ದಾರೆ.
ಕೇಂದ್ರದ ಕಾನೂನಿಗೆ ರಾಜ್ಯದ ಕಾನೂನು ಪೂರಕವಾಗಿರಬೇಕಿತ್ತು. ಬಿಜೆಪಿ ಸರ್ಕಾರ ಇದ್ದ ರಾಜ್ಯಗಳು ಕೇಂದ್ರದ ಆಯುಷ್ಮಾನ್ ಭಾರತದ ಕಾನೂನನ್ನು ಇದ್ದಕ್ಕಿದ್ದಂತೆ ಜಾರಿಗೆ ತಂದಿದೆ. ಕಾರ್ಡು ಕಿಸೆಯಲ್ಲಿಟ್ಟುಕೊಂಡವರು ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪ್ರಜೆಗಳು ತಮಗೆ ಇಷ್ಟವಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಕಾಲದಲ್ಲಿ ಉದ್ದೇಶ ಪೂರ್ವಕವಾಗಿ ಆರೋಗ್ಯ ಕರ್ನಾಟಕ ಎಂಬ ಕಾನೂನನ್ನು ಅನಗತ್ಯವಾಗಿ ಜಾರಿಗೆ ತಂದು ಆಯುಷ್ಮಾನ್ ಪ್ರಯೋಜನ ಪಡೆಯಲು ಆರೋಗ್ಯ ಕರ್ನಾಟಕದ ಯೋಜನೆಯ ತಾಲೂಕಾಸ್ಪತ್ರೆ, ಜಿಲ್ಲಾಸ್ಪತ್ರೆ, ಅಲ್ಲಿ ಆಗದಿದ್ದರೆ ನೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು, ಅಲ್ಲಿ ಸಾಧ್ಯವಾಗದಿದ್ದರೆ ಅಲ್ಲಿಂದ ಪತ್ರ ಪಡೆದು ಖಾಸಗಿ ದೊಡ್ಡ ಆಸ್ಪತ್ರೆಗೆ ಹೋಗಬಹುದು ಎನ್ನುತ್ತದೆ ಕಾನೂನು. ಬಹುಶಃ ಆಯುಷ್ಮಾನ್ ಭಾರತ ಯೋಜನೆಯ ಜನಪ್ರೀಯತೆ ತಗ್ಗಿಸಲು ಅಥವಾ ಕರ್ನಾಟಕದ ಜನತೆಗೆ ಅದನ್ನು ಮರೆಮಾಚಿ ತನ್ನ ಯೋಜನೆ ಹೇಳಲೋ ಅಮಾನವೀಯ ಕಾನೂನನ್ನು ಹೇರಿದೆ.
ಉತ್ತರ ಕನ್ನಡದಲ್ಲಿ ಜಟಿಲವಾದ ಹೆರಿಗೆ ಮಾಡಿಸಲು ಸಾಧ್ಯವಿಲ್ಲವಾದರೆ, ಸಿಜೇರಿಯನ್ ಮಾಡಿದರೂ ರಕ್ತಸ್ರಾವ, ರಕ್ತದೊತ್ತಡ ನಿಯಂತ್ರಿಸಲು ಸಾಧ್ಯವಿಲ್ಲವಾದರೆ ಅವರನ್ನು ನೆರೆ ಜಿಲ್ಲೆಯ ಆಸ್ಪತ್ರೆಗೆ ಕಳಿಸುತ್ತಾರೆ. ಅಲ್ಲಿ ತಕ್ಷಣ ಚಿಕಿತ್ಸೆ ದೊರೆತರೂ ಹಣ ಕಟ್ಟಬೇಕು. ಮಾಗೋಡ ಗ್ರಾಮದ ರೋಹಿಣಿ ಎಂಬ ಗೃಹಿಣಿಯ ಹೆರಿಗೆಯಲ್ಲಿ ಸಮಸ್ಯೆ ಉಂಟಾದಾಗ ಅವಳನ್ನು ನೆರೆ ಜಿಲ್ಲೆ ಆಸ್ಪತ್ರೆಗೆ ಕಳಿಸಲಾಯಿತು. ಕೂಡಲೇ ಚಿಕಿತ್ಸೆ ನೀಡುವುದರ ಜೊತೆ ತಾಲೂಕು ಮತ್ತು ಜಿಲ್ಲಾಸ್ಪತ್ರೆಯ ಪತ್ರ ತರಲು ಹೇಳಲಾಯಿತು. ತಾಲೂಕಾಸ್ಪತ್ರೆ ಪತ್ರ ಪಡೆದು ಜಿಲ್ಲಾಸ್ಪತ್ರೆಗೆ ಹೋಗುವಷ್ಟರಲ್ಲಿ ಅಲ್ಲಿ ವೈದ್ಯರಿರಲಿಲ್ಲ. ಮರುದಿನ ರವಿವಾರ ರಜೆ. ಸೋಮವಾರ ಪತ್ರಪಡೆದು ಒಯ್ದರೆ 24ತಾಸು ಮೀರಿದ ಕಾರಣ ಅರ್ಜಿಯನ್ನು ಆರೋಗ್ಯ ಕರ್ನಾಟಕ ಕಂಪ್ಯೂಟರ್ ತಿರಸ್ಕರಿಸಿತು. 2.60ಲಕ್ಷ ರೂ. ಕಟ್ಟುವ ಪರಿಸ್ಥಿತಿ ಬಂತು.
ನಗರದ ಗಣಪತಿ ಎಂಬವರು ಗಂಭೀರ ಸಮಸ್ಯೆಯಿಂದ ನೆರೆ ಜಿಲ್ಲೆ ಆಸ್ಪತ್ರೆಗೆ ದಾಖಲಾದರು. ತುರ್ತು ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಗೆ ಬರುವಾಗಲೇ ಆರೋಗ್ಯ ಕರ್ನಾಟಕದ ಪತ್ರ ತರದ ಕಾರಣ ಇವರ ಮನವಿಯನ್ನು ಆರೋಗ್ಯ ಕರ್ನಾಟಕದ ಕಂಪ್ಯೂಟರ್ ತಿರಸ್ಕರಿಸಿತು. 60ಸಾವಿರ ರೂ. ಹಣ ತೆರಬೇಕಾಗಿ ಬಂತು. 2ತಿಂಗಳ ಹಿಂದೆ ಸಿಜೇರಿಯನ್ ಮಾಡಿಸಿಕೊಂಡ ಮಹಿಳೆಯನ್ನು ಮಗುವಿನ ರಕ್ತದೊತ್ತಡ ಕಡಿಮೆಯಾದ ಕಾರಣ ತಕ್ಷಣ ನೆರೆ ಜಿಲ್ಲೆಗೆ ಕಳುಹಿಸಲಾಯಿತು. ಯಥಾ ಪ್ರಕಾರ ತಾಲೂಕು ಮತ್ತು ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯ ಪತ್ರ ತರಲು ಹೇಳಿದರು. ಶನಿವಾರ, ರವಿವಾರ ರಜೆ. ಪತ್ರ ಸಿಗಲಿಲ್ಲ. ನಿತ್ಯ ಎಂಬಂತೆ ಇಂತಹ ಸುದ್ದಿಗಳು ಬರುತ್ತಿವೆ. ಬಡವರಿಗೆ ಆಯುಷ್ಮಾನ್ ಭಾರತ ವರವಾಗಿತ್ತು. ಪಕ್ಷ ರಾಜಕಾರಣದಿಂದಾಗಿ ಹುಟ್ಟಿಕೊಂಡ ಆರೋಗ್ಯ ಕರ್ನಾಟಕ ಶಾಪವಾಗಿದೆ.
ದೇಶಕ್ಕೆ ಆಯುಷ್ಮಾನ್ ಭಾರತ ಒಂದೇ ಕಾನೂನು ಸಾಕು. ರಾಜ್ಯದ ಕಾನೂನು ರದ್ದಾಗಬೇಕು ಎಂದು ಈಗ ಸಭಾಪತಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಸಹಿತ ಎಲ್ಲ ಶಾಸಕರು ಅಭಿಪ್ರಾಯಪಟ್ಟಿದ್ದಾರೆ. ವಿಧಾನಸಭೆಯಲ್ಲಿ ಇದನ್ನು ಪ್ರಶ್ನಿಸಿ, ರದ್ದುಪಡಿಸಲು ಆಗ್ರಹಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆಗ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರು ಸೂಕ್ತ ಕ್ರಮಕ್ಕಾಗಿ ಅಂದಿನ ಆರೋಗ್ಯ ಮಂತ್ರಿಗಳಿಗೆ ಬರೆದಿದ್ದರು. ಈಗ ಬಿಜೆಪಿ ಸರ್ಕಾರ ಬಂದಿದೆ. ಎಲ್ಲರೂ ನೆರೆ ಗೊಂದಲದಲ್ಲಿ ಮುಳುಗಿದ್ದಾರೆ. ಮುಖ್ಯಮಂತ್ರಿಗಳನ್ನು ಕಂಡು ಏಕ ಕಾನೂನು ಆಯುಷ್ಮಾನ್ ಭಾರತ ಬರುವಂತೆ ಆದೇಶ ಮಾಡಿಸಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
•ಜೀಯು, ಹೊನ್ನಾವರ