Advertisement

ಆರೋಗ್ಯ ಕರ್ನಾಟಕ ಗೊಂದಲ ಶೀಘ್ರ ಪರಿಹಾರ

06:00 AM Jun 16, 2018 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿವಿಧ ಆರೋಗ್ಯ ಸೇವೆಗಳನ್ನು ಒಟ್ಟು ಸೇರಿಸಿ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ನೀಡುವ ಆರೋಗ್ಯ ಕರ್ನಾಟಕ ಯೋಜನೆ ಜಾರಿ ಕುರಿತ ಗೊಂದಲಗಳಿಗೆ ಮೂರ್‍ನಾಲ್ಕು ದಿನಗಳಲ್ಲಿ ತೆರೆ ಎಳೆಯುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ  ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದಿನ ಸರಕಾರ ಕೈಗೊಂಡ ನಿರ್ಧಾರದಂತೆ ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲು ಈ ಸರಕಾರ ಬದ್ಧವಾಗಿದೆ. ಯೋಜನೆ ಜಾರಿಗೊಳಿಸುವ ಹಂತದಲ್ಲಿ ಚುನಾವಣೆ ಎದುರಾಗಿದ್ದರಿಂದ ವಿಳಂಬವಾಗಿದೆ. ಮುಂದಿನ ವಾರ ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಯೋಜನೆ ಜಾರಿ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಎಲ್ಲರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶ ದಿಂದ ಹಿಂದಿನ ಸರಕಾರ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ಯೋಜನೆ ರೂಪಿಸಿತ್ತು. ಈ ಸರಕಾರ ಅದನ್ನು ಮುಂದವರಿಸಲಿದ್ದು, ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಕೇಂದ್ರೀಕೃತ ನೋಂದಣಿ ಮತ್ತು ಬಿಲ್ಲಿಂಗ್‌ ವ್ಯವಸ್ಥೆ: ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಆಸ್ಪತ್ರೆಗಳಲ್ಲಿ ಕೇಂದ್ರೀಕೃತ ರೋಗಿಗಳ ನೋಂದಣಿ ಮತ್ತು ಬಿಲ್ಲಿಂಗ್‌ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದು, 75 ದಿನಗಳಲ್ಲಿ ಈ ಕೆಲಸ ಆಗಬೇಕು ಎಂದು ಸೂಚಿಸಿದ್ದೇನೆ. ರೋಗಿಗಳ ನೋಂದಣಿ ಪ್ರಕ್ರಿಯೆ ಮತ್ತು ಬಿಲ್ಲಿಂಗ್‌ ವ್ಯವಸ್ಥೆಯಲ್ಲಿ ಉಂಟಾಗುವ ಗೊಂದಲ ಇದರಿಂದ ಬಗೆಹರಿಯಲಿದೆ ಎಂದು ತಿಳಿಸಿದರು.

ವೈದ್ಯ ಸೀಟು: ಸೋಮವಾರ ಮುಂದಿನ ತೀರ್ಮಾನ
ರಾಜ್ಯದ 7 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1600 ವೈದ್ಯಕೀಯ ಸೀಟುಗಳು ರದ್ದಾಗಿರುವ ಬಗ್ಗೆ ಸೋಮವಾರ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವ ಕುಮಾರ್‌ ಹೇಳಿದ್ದಾರೆ.
ಕೊಪ್ಪಳ ಮೆಡಿಕಲ್‌ ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ 150 ವೈದ್ಯಕೀಯ ಸೀಟುಗಳನ್ನು ಭಾರ ತೀಯ ವೈದ್ಯಕೀಯ ಪರಿಷತ್‌ ರದ್ದು ಮಾಡಿದೆ. ಮೂಲಭೂತ ಸೌಕರ್ಯಗಳ ಕೊರತೆ ಸಹಿತ  ವಿವಿಧ ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ ಐಎಂಸಿ ಸೀಟು ರದ್ದುಪಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next