ಕಾಳಗಿ: ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯ ಒತ್ತಡದಲ್ಲಿಯೇ ಜೀವನ ಕಳೆಯುತ್ತಿದ್ದಾನೆ. ಒತ್ತಡದ ಜೀವನ ಹಲವು ರೋಗಗಳಿಗೆ ಆಹ್ವಾನಿಸಿದಂತೆ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ಸಂಪತ್ತು ಕಾಪಾಡಿಕೊಂಡು ಒತ್ತಡ ಮುಕ್ತ ಜೀವನ ಮಾಡುವಂತೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಅಧಿಕಾರಿ ಪಾಂಡುರಂಗ ಪೂಜಾರಿ ಹೇಳಿದರು.
ಇಲ್ಲಿಯ ನಾಗರತ್ನಮ್ಮ ಶಿವಶರಣಪ್ಪ ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡಕ್ರಾಸ್ ಘಟಕದ ವತಿಯಿಂದ ನಡೆದ ದಂತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಸೇವೆ ಅತ್ಯಂತ ಪವಿತ್ರವಾದ ಸೇವೆಯಾಗಿದೆ. ವಿದ್ಯಾರ್ಥಿಗಳು ನಿರಂತರವಾಗಿ ಪ್ರಯತ್ನ ಮಾಡಿದರೆ ಪವಿತ್ರವಾದ ಸೇವೆ ಸಮಾಜಕ್ಕೆ ಕೊಡುಗೆಯಾಗಿ ನೀಡಬಹುದು ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ವೈಶಾಲಿ ಮಾತನಾಡಿ, ಪ್ರತಿಯೊಬ್ಬರೂ ಕನಿಷ್ಠ ಆರು ತಿಂಗಳಿಗೊಮ್ಮೆ ಹಲ್ಲು ತಪಾಸಣೆ ಮಾಡಿಕೊಳ್ಳಬೇಕು. ಹಲ್ಲು ನೋವು ಬಂದರೆ ತಕ್ಷಣ ಹಲ್ಲು ಕಿತ್ತಿಸಿಕೊಳ್ಳುವುದು ಸರಿಯಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಹಲ್ಲು ಕಿತ್ತಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಚಾಕಲೇಟ್, ತಂಬಾಕು, ಗುಟ್ಕಾ, ಸ್ಮೋಕಿಂಗ ಮಾಡುವುದರಿಂದ ಹಲ್ಲು ನೋವು ಬರುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಹಲು ಉಜ್ಜಿದರೆ ನೋವು ತಡೆಗಟ್ಟಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಆರ್. ಅಣ್ಣಾಸಾಗರ ಮಾತನಾಡಿದರು. ಚಿತ್ರಶೇಖರ ನಾಗೂರ, ಗೌಡಪ್ಪ ಪಾಟೀಲ, ಗುಪ್ತ ಲಾಲಪ್ಪ, ನಾಗಜ್ಯೋತಿ ಹಿರೇಮಠ ಮಂಝುಳಾ ಭದ್ರಶೆಟ್ಟಿ, ಮೊಹ್ಮದ್ ಯೂನೂಸ್, ಶ್ರೀನಾಥ ಬಟಗೇರಿ, ದೈಹಿಕ ಶಿಕ್ಷಣ ನಿರ್ದೇಶಕ ಅವಿನಾಶ ಕಂಟೀಕರ್ ಇದ್ದರು. ಅಂಬಿಕಾ ಪ್ರಾರ್ಥಿಸಿದರು. ಡಾ| ಜಗನ್ನಾಥ ಕುಕ್ಕಡಿ ಸ್ವಾಗತಿಸಿದರು. ಶಿವಶರಣಪ್ಪ ಮೋತಕಪಳ್ಳಿ ನಿರೂಪಿಸಿದರು. ಪ್ರೊ| ವಿಜಯಲಕ್ಷ್ಮೀ ವಂದಿಸಿದರು.