Advertisement

ಗಡಿ ಗ್ರಾಮಗಳಿಗೆ ಆರೋಗ್ಯ ವಿಮೆ: ಕೇಂದ್ರದ ಮಧ್ಯಪ್ರವೇಶ ಅಗತ್ಯ

12:39 AM Mar 17, 2023 | Team Udayavani |

ಗಡಿ ವಿಚಾರದಲ್ಲಿ ಪದೇ ಪದೆ ಕರ್ನಾಟಕದೊಂದಿಗೆ ತಗಾದೆ ತೆಗೆಯುತ್ತಲೇ ಬಂದಿರುವ ಮಹಾರಾಷ್ಟ್ರ ಸರಕಾರ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಭಯ ರಾಜ್ಯಗಳ ಗಡಿಯಲ್ಲಿರುವ ಕರ್ನಾಟಕದ 865 ಹಳ್ಳಿಗಳ ಜನರಿಗೆ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವುದು ಹೊಸ ವಿವಾದವೊಂದನ್ನು ಸೃಷ್ಟಿಸಿದೆ.

Advertisement

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಬಿಕ್ಕಟ್ಟಿನ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಇದರ ನಡುವೆ ಮಹಾರಾಷ್ಟ್ರ ಸರಕಾರ ನಿರಂತರವಾಗಿ ಗಡಿ ಪ್ರದೇಶಗಳಲ್ಲಿ ಒಂದಲ್ಲ ಒಂದು ತಕರಾರನ್ನು ತೆಗೆದು ವಿವಾದವನ್ನು ಜೀವಂತವಾಗಿಡುವ ಪ್ರಯತ್ನ ನಡೆಸುತ್ತಲೇ ಬಂದಿದೆ. ಕಳೆದ ವರ್ಷದ ನವೆಂಬರ್‌-ಡಿಸೆಂಬರ್‌ ಅವಧಿಯಲ್ಲಿ ಬೆಳಗಾವಿ ಗಡಿ ಭಾಗದಲ್ಲಿ ಅನಗತ್ಯ ವಿವಾದ ಸೃಷ್ಟಿಸಿ ಉಭಯ ರಾಜ್ಯಗಳ ಜನರ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನ ಮಹಾರಾಷ್ಟ್ರ ಸರಕಾರ­ದಿಂದಾಗಿತ್ತು. ಇದರಿಂದಾಗಿ ಉಭಯ ರಾಜ್ಯಗಳ ನಡುವಣ ಸಾರಿಗೆ ಸಂಚಾರ, ವಾಣಿಜ್ಯ, ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡು ಭಾರೀ ನಷ್ಟ ಉಂಟಾಗಿತ್ತು. ಮಹಾರಾಷ್ಟ್ರ ಸರಕಾರದ ವಿರುದ್ಧ ಕರ್ನಾಟಕವು ಕೇಂದ್ರದ ಕದ ತಟ್ಟಿದ್ದರ ಪರಿಣಾಮ ಗೃಹ ಸಚಿವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಿ ಶಾಂತಿಮಂತ್ರವನ್ನು ಬೋಧಿಸಿದ್ದರು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳು­ವವರೆಗೆ ಉಭಯ ರಾಜ್ಯಗಳೂ ಗಡಿ ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದು­ಕೊಳ್ಳಬೇಕೆಂದು ಕಿವಿಮಾತು ಹೇಳಿದ್ದರು. ಈ ಸಲಹೆಗೆ ಎರಡೂ ರಾಜ್ಯಗಳೂ ಸಮ್ಮತಿಸಿದ್ದವು. ಆ ಬಳಿಕ ಗಡಿ ಭಾಗದ ಹಳ್ಳಿಗಳ ಮೇಲೆ ಹಕ್ಕು ಸ್ಥಾಪಿಸುವ ಪ್ರಯತ್ನವನ್ನು ಮಹಾರಾಷ್ಟ್ರ ನಿಲ್ಲಿಸಿತ್ತು. ಇನ್ನೇನು ಗಡಿ ಭಾಗದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು ಎನ್ನುವಷ್ಟರಲ್ಲಿ ಮಹಾರಾಷ್ಟ್ರ ಸರಕಾರ ಆರೋಗ್ಯ ವಿಮೆ ಯೋಜನೆಯ ಹೆಸರಿನಲ್ಲಿ ಹೊಸ ವರಾತ ಶುರುವಿಟ್ಟುಕೊಂಡಿದೆ.

ರಾಜ್ಯ ಸರಕಾರವೊಂದು ಇನ್ನೊಂದು ರಾಜ್ಯದ ಜನರಿಗಾಗಿ ಯೋಜನೆಗಳನ್ನು ಸ್ವತಃ ಜಾರಿಗೊಳಿಸಲು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಅವಕಾಶವಿಲ್ಲ. ಗಡಿ ಭಾಗದ ಗ್ರಾಮಗಳು ಮತ್ತು ಪಟ್ಟಣಗಳ ಜನರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೆ ಮುಂದಾಗಿರುವುದು ಮಹಾರಾಷ್ಟ್ರ ಸರಕಾರದ ಮೂರ್ಖ ತನದ ಪರಮಾವಧಿಯೇ ಸರಿ. ರಾಜಕೀಯವಾಗಿ ತನ್ನ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಜನರನ್ನು ಮರುಳು ಮಾಡುವ ಪ್ರಯತ್ನಕ್ಕೆ ಮಹಾ ಸರಕಾರ ಕೈಹಾಕಿರುವುದನ್ನು ವಿಪರ್ಯಾಸ ಎನ್ನದೇ ವಿಧಿ ಇಲ್ಲ.

ಇದೀಗ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್‌ ಮಾತುಗಳಲ್ಲೇ ಮಹಾರಾಷ್ಟ್ರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನವನ್ನಂತೂ ಮಾಡಿದ್ದಾರೆ. ಒಂದಿಷ್ಟು ವಿವೇಚನೆಯಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಅಲ್ಲಿನ ಸರಕಾರಕ್ಕೆ ಕಿವಿಮಾತು ಕೂಡ ಹೇಳಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಗಡಿ ಭಾಗದಲ್ಲಿನ ಕರ್ನಾಟಕದ ಹಳ್ಳಿಗಳಲ್ಲಿ ತನ್ನ ಆರೋಗ್ಯ ವಿಮೆ ಯೋಜನೆ ಜಾರಿ ಸಂಬಂಧ ಹೊರಡಿಸಿರುವ ಆದೇಶವನ್ನು ತತ್‌ಕ್ಷಣ ಹಿಂಪಡೆಯದೇ ಹೋದಲ್ಲಿ ಈ ವಿಚಾರವನ್ನು ಕೇಂದ್ರ ಗೃಹ ಸಚಿವರ ಮುಂದೆ ಪ್ರಸ್ತಾವಿಸುವುದಾಗಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳು, ಹಿತಾಸಕ್ತಿಗಳೇನೇ ಇರಲಿ, ಒಕ್ಕೂಟ ವ್ಯವಸ್ಥೆಯಡಿ ರಾಜ್ಯಗಳು ತಮ್ಮ ಎಲ್ಲೆಯನ್ನು ಮೀರುವುದು ಅಕ್ಷಮ್ಯ ಅಪರಾಧ. ಗಡಿ ವಿವಾದದ ವಿಚಾರದಲ್ಲಿ ಮಹಾಜನ್‌ ವರದಿಯೇ ಅಂತಿಮ ಎಂದು ಕರ್ನಾಟಕ ತನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಇದರ ಹೊರತಾಗಿಯೂ ನೆರೆಯ ರಾಜ್ಯ ಗಡಿ ವಿವಾದದ ವಿಚಾರವಾಗಿ ನ್ಯಾಯಾಂಗ ಹೋರಾಟವನ್ನು ಮುಂದುವರಿಸಿದೆ. ಇಂಥ ಪರಿಸ್ಥಿತಿಯಲ್ಲಿ ಗಡಿ ಭಾಗದಲ್ಲಿ ಅನವಶ್ಯಕ ಕ್ಯಾತೆ ತೆಗೆದು ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಸುವ ಪ್ರಯತ್ನಗಳನ್ನು ನಡೆಸುವುದು ಸರಿಯಲ್ಲ. ಪ್ರತೀ ಬಾರಿ ವಿವಾದ ಸೃಷ್ಟಿಸಿ ಮುಖಭಂಗಕ್ಕೀಡಾಗುತ್ತಿದ್ದರೂ ಮಹಾರಾಷ್ಟ್ರ ಸರಕಾರ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ತನ್ನ ಅಧಿಕಾರವನ್ನು ಬಳಸಿಕೊಂಡು ಕಠಿನ ನಿರ್ದೇಶನಗಳನ್ನು ಮಹಾರಾಷ್ಟ್ರಕ್ಕೆ ನೀಡಬೇಕು. ಇಲ್ಲವಾದಲ್ಲಿ ಇತರ ರಾಜ್ಯಗಳಿಗೂ ಈ ಚಾಳಿ ವ್ಯಾಪಿಸುವ ಸಾಧ್ಯತೆ ಇದೆ. ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಕಾಪಾಡುವುದು ಪ್ರತಿಯೊಂದೂ ಸರಕಾರದ ಕರ್ತವ್ಯವಾಗಿದ್ದು ಇದನ್ನು ನಿಭಾಯಿಸುವಲ್ಲಿ ಯಾವುದೇ ಸರಕಾರ ಎಡವಿದ್ದೇ ಆದಲ್ಲಿ ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲೇಬೇಕು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next