Advertisement

ಆರೋಗ್ಯ ಪೂರ್ಣ ಸೆಂಚುರಿಯನ್ಸ್‌

11:50 PM Oct 22, 2022 | Team Udayavani |

ಬಸ್‌ನಲ್ಲಿ ಶತಾಯುಷಿಯ ಏಕಾಂಗಿ ಪ್ರಯಾಣ
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹಿಂದುಳಿದ ಪ್ರದೇಶವೆಂದು ಗುರುತಿಸಲಾದ ಮುದ್ರಾಡಿಯಿಂದ ಶತಾಯುಷಿಯೊಬ್ಬರು ಹೆಬ್ರಿಯವರೆಗೆ ಒಬ್ಬರೇ ಬಸ್‌ ಹಿಡಿದು ಪ್ರಯಾಣ ಮಾಡುತ್ತಾರೆ. ಇಷ್ಟೇ ಅಲ್ಲ, ಹೆಬ್ರಿಯವರೆಗೆ ಒಂದು ಬಸ್‌ನಲ್ಲಿ ಬಂದು ಶಿವಮೊಗ್ಗದ ಮಿನಿ ಬಸ್‌ನಲ್ಲಿ ಸೋಮೇಶ್ವರ ದೇವಸ್ಥಾನದವರೆಗೆ ತೆರಳಿ ಮತ್ತೆ ಅದೇ

Advertisement

ಮಾರ್ಗದಲ್ಲಿ  ಹಿಂದಿರುಗುತ್ತಾರೆ. 20-10-1922ರಂದು ಜನಿಸಿದ ಇವರು 20-10-2022ರಂದು ಭರ್ತಿ ಸೆಂಚುರಿ ಬಾರಿಸಿದ್ದಾರೆ.

ಆರೋಗ್ಯವಂತ ಈ ವ್ಯಕ್ತಿ ಮಂಜುನಾಥ ಕಾಮತ್‌. ಹಿಂದೆ ಇವರು ಓದಲಿಕ್ಕಾಗಿ ಕನ್ನಡಕ ಧರಿಸುತ್ತಿದ್ದರು. ಸಮೀಪ ದೃಷ್ಟಿ ದೋಷ  ಒಂದು ವರ್ಷದಿಂದೀಚೆ ಕಂಡುಬಂದ ಕಾರಣ ಕನ್ನಡಕವನ್ನು ಧರಿಸುವುದಿಲ್ಲ, ಹೀಗಾಗಿ ಓದಲು ಆಗುವುದಿಲ್ಲ.  ಕನ್ನಡಕ ಧರಿಸದೆ ಇರುವುದರಿಂದ ಚಿಕ್ಕಪ್ರಾಯದಲ್ಲಿ ಹಾಕುತ್ತಿದ್ದ ಸಹಿ (ಕೆ.ಮಂಜುನಾಥ ಕಮಿ¤) ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು, ಇಲ್ಲವಾದರೆ ಒಂದು ವರ್ಷ ಹಿಂದಿನವರೆಗೂ ಅದೇ ಶೈಲಿಯ ಸಹಿ ಇರುತ್ತಿತ್ತು.  ದೂರದೃಷ್ಟಿ ದೋಷ ಇರದ ಕಾರಣ ಓಡಾಟ, ವ್ಯವಹಾರಗಳಿಗೆ ಯಾವುದೇ ತೊಡಕಿಲ್ಲ.

ಹೆಬ್ರಿಯಲ್ಲಿ ಹೊಟೇಲ್‌ ನಡೆಸುತ್ತಿದ್ದ ಮಂಜುನಾಥ ಕಾಮತ್‌ 1953ರಲ್ಲಿ ಮುದ್ರಾಡಿಗೆ ಬಂದರು. ಬರುವಾಗ ಬೈಸಿಕಲ್‌ ಒಂದನ್ನು ತಂದರು. ಆ ಕಾಲದಲ್ಲಿ ಇವರು ಮಾತ್ರ ಬೈಸಿಕಲ್‌ ಹೊಂದಿದ ವ್ಯಕ್ತಿಯಾಗಿದ್ದರು. ಹಲವರು ಬೈಸಿಕಲ್‌ ಕೇಳಲು ಆರಂಭಿಸಿದಾಗ ತಾನೇ ಏಕೆ ಬಾಡಿಗೆ ಸೈಕಲ್‌ ವ್ಯವಹಾರ ಮಾಡಬಾರದೆಂದು ತೋಚಿತು. ಆರಂಭದಲ್ಲಿ ಎರಡು ಸೈಕಲ್‌ಗಳನ್ನು ಇರಿಸಿದರು. ಈ ಸೈಕಲ್‌ಗಳನ್ನು ಮಂಗಳೂರಿನಿಂದ ತಾವೇ ಚಲಾಯಿಸಿಕೊಂಡು ಬಂದಿದ್ದರು. ಒಂದು ಹಂತದಲ್ಲಿ 20 ಸೈಕಲ್‌ಗಳನ್ನು ಬಾಡಿಗೆ ಇರಿಸಿಕೊಂಡಿದ್ದರು. 2000 ವರೆಗೂ ಬೈಸಿಕಲ್‌ ಅಂಗಡಿ ಇತ್ತು. ಏತನ್ಮಧ್ಯೆ ಹೊಟೇಲ್‌, ದಿನಸಿ ಅಂಗಡಿಯನ್ನು ನಡೆಸುತ್ತಿದ್ದರು. ಮೂರು ವರ್ಷ ಹಿಂದಿನವರೆಗೂ ಬೈಸಿಕಲ್‌ ತುಳಿಯುತ್ತಿದ್ದರು.

ಈಗ ನಿತ್ಯ ಬೆಳಗ್ಗೆ 5.30ಕ್ಕೆ ಏಳುವ ಕಾಮತ್‌  ಮುಕ್ಕಾಲು ಕಿ.ಮೀ. ದೂರ ನಡೆದುಕೊಂಡು ಹೋಗಿ ವಾಪಸು ಬರುತ್ತಾರೆ. ಸಂಜೆಯೂ ಮುದ್ರಾಡಿ ವೃತ್ತದವರೆಗೆ ತೆರಳಿ ಸ್ನೇಹಿತರ ಜತೆ ಲೋಕಾಭಿರಾಮ ಮಾತನಾಡುತ್ತಾರೆ. ಅವರ ಬಟ್ಟೆಗಳನ್ನು ಅವರೇ ಒಗೆದುಕೊಳ್ಳುತ್ತಾರೆ. ಮೂರು ವರ್ಷಗಳ ಹಿಂದಷ್ಟೇ ಬಿ.ಪಿ., ಮಧುಮೇಹ ಬಂದಿದೆ. ಇದಕ್ಕೆ ಔಷಧಕ್ಕೂ ಹೆಬ್ರಿ ಸರಕಾರಿ ಆಸ್ಪತ್ರೆಗೆ ಬಸ್‌ನಲ್ಲಿ ಒಬ್ಬರೇ ಹೋಗಿ ಬರುತ್ತಾರೆ, ವಿನಾ ಖಾಸಗಿ ವೈದ್ಯರ ಬಳಿ ಹೋಗುವುದಿಲ್ಲ. ಹೋದ ವರ್ಷದವರೆಗೂ ಮನೆ ಸುತ್ತಲಿನ ಐದಾರು ತೆಂಗಿನ ಮರಗಳಿಗೆ ಕಟ್ಟೆ ಕಟ್ಟುತ್ತಿದ್ದರು. ಈಗಲೂ ಮಗ ನೋಡಿಕೊಳ್ಳುವ ದಿನಸಿ ಅಂಗಡಿಯಲ್ಲಿ ಈರುಳ್ಳಿಯನ್ನು ವ್ಯವಸ್ಥಿತಗೊಳಿಸುತ್ತಾರೆ.  ಕಾಮತ್‌ ಅವರಿಗೆ ನಾಲ್ವರು ಪುತ್ರರು, ಐವರು ಪುತ್ರಿಯರು ಇದ್ದು, ಇವರೆಲ್ಲ ಬೇರೆ ಬೇರೆ ಮನೆಗಳಲ್ಲಿ ವಾಸವಿದ್ದರೂ ನವರಾತ್ರಿ, ದೀಪಾವಳಿ, ಗಣೇಶ ಚತುರ್ಥಿ ಇತ್ಯಾದಿ ಹಬ್ಬಗಳಿಗೆ ಮುದ್ರಾಡಿಯ ಮೂಲಮನೆಯಲ್ಲಿಯೇ ಸೇರಿ ಆಚರಿಸುತ್ತಾರೆ.

Advertisement

ಸಸ್ಯಾಹಾರ ಮಿತಾಹಾರ…
ಆರೋಗ್ಯದ ಗುಟ್ಟೇನು ಎಂದು ಕೇಳಿದರೆ “ಒಂದು ವರ್ಷದ ಹಿಂದಿನವರೆಗೂ (ಈಗ ಕನ್ನಡಕ ಹಾಕಲು ಆಗುವುದಿಲ್ಲ) ನಿತ್ಯವೂ ಸಂಜೆ ಭಾಗವತ, ಗೀತೆ, ಮಹಾಭಾರತ ಗ್ರಂಥಗಳನ್ನು ಓದುತ್ತಿದ್ದೆ. ಬೆಳಗ್ಗೆ ಪ್ರತಿನಿತ್ಯ ವಾಯುವಿಹಾರ ನಡೆಸುತ್ತೇನೆ. ಸಸ್ಯಾಹಾರವನ್ನು ಮಿತವಾಗಿ ಸೇವಿಸುತ್ತೇನೆ’ ಎಂದು ಮಂಜುನಾಥ ಕಾಮತ್‌ ಹೇಳುತ್ತಾರೆ.

ಪದ್ಮಶ್ರೀ ಪುರಸ್ಕೃತ ಜಗತ್ತಿನ ಅತೀ ಹಿರಿಯ
126 ವರ್ಷದ ಸ್ವಾಮಿ ಶಿವಾನಂದರು (ಜನನ 8-8-1896) ಪದ್ಮಶ್ರೀ ಪ್ರಶಸ್ತಿ ಪಡೆದ ಅತೀ ಹಿರಿಯ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಈಗಲೂ ಪಶ್ಚಿಮೋತ್ಥಾನಾಸನ, ಸರ್ವಾಂಗಾಸನ, ಪವನಮುಕ್ತಾಸನವೇ ಮೊದಲಾದ ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಾರೆ. 9ನೆಯ ವಯಸ್ಸಿನಲ್ಲಿ ಆರಂಭಗೊಂಡ ಯೋಗವನ್ನು ಇಂದಿಗೂ ಬಿಡದೆ ಪಾಲಿಸುತ್ತಾರೆ. ಬ್ರಹ್ಮಚರ್ಯದ ಜೀವನ, ಮಸಾಲೆ ಪದಾರ್ಥಗಳ ವಜ್ಯì, ಯೋಗಾಸನ ಪಾಲನೆಯೊಂದಿಗೆ ಆಸೆರಹಿತ ಬದುಕು ಇವರದು. ಇವರ ಜನ್ಮದಿನಾಂಕವನ್ನು ಪಾಸ್‌ಪೋರ್ಟ್‌ ಅಧಿಕಾರಿಗಳು ದೃಢೀಕರಿಸಿದ್ದಾರೆ. ಒಮ್ಮೆ ಮಧ್ಯಪ್ರಾಚ್ಯ ದೇಶದಲ್ಲಿ ಇವರ ದಾಖಲೆ ನೋಡಿ ಅಧಿಕಾರಿಗಳು ಅಚ್ಚರಿಗೊಂಡಿದ್ದರು.

ಇವರು ಜನಿಸಿದ್ದು ವಿಭಜನಪೂರ್ವ ಬಾಂಗ್ಲಾ ದೇಶದಲ್ಲಿ. ಇವರ ಗುರು ಓಂಕಾರಾನಂದ ಗೋಸ್ವಾಮಿ. ನೇತಾಜಿ ಸುಭಾಶ್ಚಂದ್ರ ಬೋಸರು ಇವರ ಬಾಲ್ಯಸ್ನೇಹಿತರು. ಬಡತನದ ಬೇಗೆಯಿಂದ ಅಲೆದಲೆದು ಈಗ ನೆಲೆಸಿರುವುದು ವಾರಾಣಸಿಯಲ್ಲಿ. ಇವರು ಸನ್ಯಾಸಿಯಾದರೂ ಖಾವಿ ಬಟ್ಟೆ ತೊಡುವುದಿಲ್ಲ. ಪುರಿಯಲ್ಲಿ ಕುಷ್ಠರೋಗಿಗಳ ಸೇವೆಯನ್ನು 50 ವರ್ಷಗಳಿಂದ ಮಾಡುತ್ತಿದ್ದಾರೆ. “ಜಗತ್ತೇ ನನ್ನ ಮನೆ, ಜನರೇ ನನ್ನ ತಂದೆ, ತಾಯಿಗಳು. ಇವರಿಗೆ ಸೇವೆ ಸಲ್ಲಿಸುವುದೇ ನನ್ನ ಧರ್ಮ’ ಇದು ಅವರ ಸೂತ್ರ.

“ನಾನು ಸರಳ ಮತ್ತು ಶಿಸ್ತುಬದ್ಧ ಜೀವನವನ್ನು ನಡೆಸುತ್ತೇನೆ. ಅನ್ನ, ಬೇಯಿಸಿದ ಬೇಳೆ (ಎಣ್ಣೆ, ಮಸಾಲೆ ಪದಾರ್ಥಗಳಿಲ್ಲದ)ನನ್ನ ಆಹಾರ. ನಾನು ಬದುಕಲಿಕ್ಕಾಗಿ ತಿನ್ನುತ್ತೇನೆ. ತಿನ್ನುವುದಕ್ಕಾಗಿ ಬದುಕುವುದಲ್ಲ. ಹಾಲು, ಹಣ್ಣು ಸ್ವೀಕರಿಸುವುದಿಲ್ಲ. ಏಕೆಂದರೆ ಅದು ಫ್ಯಾನ್ಸಿ ಫ‌ುಡ್‌. ಚಿಕ್ಕಪ್ರಾಯದಲ್ಲಿ ಖಾಲಿ ಹೊಟ್ಟೆಯಲ್ಲಿ ಆಹಾರಕ್ಕಾಗಿ ಮನೆಮನೆಗಳಲ್ಲಿ ಬೇಡಿದ್ದೇನೆ. ಈಗಲೂ ಬಡವರಿಗೆ ಹಾಲು, ಹಣ್ಣು ದೂರವೇ ಇದೆ’ ಎನ್ನುತ್ತಾರೆ ಶಿವಾನಂದರು. ಶಿವಾನಂದರು ಮಲಗುವುದು ನೆಲದ ಮೇಲೆ, ಮರದ ತುಂಡನ್ನು ತಲೆದಿಂಬಾಗಿ ಉಪಯೋಗಿಸುತ್ತಾರೆ. ಇವರಿಗೆ ಇದುವರೆಗೆ ಯಾವುದೇ ಆರೋಗ್ಯದ ಸಮಸ್ಯೆ ಕಂಡುಬಂದಿಲ್ಲ. ಏಕಾಂಗಿಯಾಗಿ ರೈಲಿನಲ್ಲಿ ಸಂಚಾರ ಮಾಡುತ್ತಾರೆ.  ಪರೀಕ್ಷಿಸಿದ ವೈದ್ಯರಿಗೂ ಇವರೊಂದು ಅಚ್ಚರಿಯಾಗಿ ಕಂಡಿದ್ದಾರೆ. ಶಿವಾನಂದರು ಬೆಳಗ್ಗೆ 3 ಗಂಟೆಗೆ ಏಳುತ್ತಾರೆ. ಸ್ನಾನಾನಂತರ ಒಂದು ಗಂಟೆ ವಾಯುವಿಹಾರ, ಯೋಗಾಸನ, ಪೂಜೆ, ಪ್ರಾರ್ಥನೆ ನಡೆಸಿ ಮಧ್ಯಾಹ್ನ ಗಂಟೆ 12ಕ್ಕೆ ಆಹಾರ ಸ್ವೀಕರಿಸುತ್ತಾರೆ. ಅನಂತರ ಎರಡು ಗಂಟೆ ವಿಶ್ರಾಂತಿ (ನಿದ್ರೆಯಲ್ಲ), ಬಳಿಕ ತನ್ನ ಸೇವಾ ಚಟುವಟಿಕೆಗಳಲ್ಲಿ ನಿರತರಾಗಿ ರಾತ್ರಿ 9 ಗಂಟೆಗೆ ಮಲಗುತ್ತಾರೆ.

ಹಿಂದಿನವರು ಸೀಮಿತ ವಸ್ತುಗಳಿಂದ ಸಂತೋಷದಿಂದ ಇರುತ್ತಿದ್ದರು. ಈಗ ಜನರಿಗೆ ಅತೃಪ್ತಿ, ಅನಾರೋಗ್ಯ ಬಾಧಿಸುತ್ತಿದೆ. ಜತೆಗೆ ಅಪ್ರಾಮಾಣಿಕರಾಗಿರುತ್ತಾರೆ. ಇದು ನನಗೆ ನೋವು ತರುತ್ತದೆ ಎಂಬ ಕೊರಗು ಶಿವಾನಂದರಿಗೆ ಇದೆ.

ಹಣ, ಆಸೆ, ಸಕ್ಕರೆ, ಉಪ್ಪು ಇಲ್ಲ….
ನಿಮ್ಮ ದೀರ್ಘ‌ ಕಾಲದ ಬದುಕಿನ ಗುಟ್ಟೇನು ಎಂದು ಕೇಳಿದರೆ “ಹಣವಿಲ್ಲ, ಆಸೆ ಇಲ್ಲ, ಸಕ್ಕರೆ ಇಲ್ಲ, ಹಾಲು ಇಲ್ಲ, ಉಪ್ಪು ಇಲ್ಲ, ಎಣ್ಣೆ ಇಲ್ಲ, ಹಗಲಲ್ಲಿ ನಿದ್ರೆ ಇಲ್ಲ. ಗುರುಕೃಪೆಯಿಂದ ಆರೋಗ್ಯದ ಜೀವನ ನಡೆಸುತ್ತಿದ್ದೇನೆ’ ಎಂಬ ಉತ್ತರ ಸಿಗುತ್ತದೆ.

 

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next