ಹಾವೇರಿ: ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ- ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಏ.18ರಿಂದ 22ರವರೆಗೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ವ್ಯವಸ್ಥಿತ ಆಯೋಜನೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆರೋಗ್ಯ ಮೇಳದ ಆಯೋಜನೆ ಕುರಿತಂತೆ ವೈದ್ಯಾ ಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿ ಅವರು ಮಾತನಾಡಿದರು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಪಂ ಇಒಗಳು, ಕ್ಷೇತ್ರ ಶಿಕ್ಷಣಾ ಧಿಕಾರಿಗಳು, ತಾಲೂಕು
ವೈದ್ಯಾಧಿಕಾರಿಗಳು ಒಳಗೊಂಡಂತೆ ವಿವಿಧ ಅಧಿಕಾರಿಗಳನ್ನು ಆಹ್ವಾನಿಸಿ ಆರೋಗ್ಯ ಮೇಳದ ಕುರಿತು ಗ್ರಾಮ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಸ್ಥಾನಿಕ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಏ.18ರಂದು ಹಾನಗಲ್ಲ, ಏ.19ರಂದು ರಾಣಿಬೆನ್ನೂರು, ಏ.20ರಂದು ಹಿರೇಕೆರೂರು ಹಾಗೂ ಹಾವೇರಿ, ಏ.21ರಂದು ಶಿಗ್ಗಾವಿ ಹಾಗೂ ಸವಣೂರು, ಏ.22ರಂದು ಬ್ಯಾಡಗಿ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಒಂದು ದಿನದ ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮ ಆಯೋಜಿಸಲು ಸಮಯ ನಿಗದಿಪಡಿಸಿಕೊಂಡಿರುವ ಕುರಿತಂತೆ ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್.ಎಸ್. ರಾಘವೇಂದ್ರ ಮಾತನಾಡಿ, ತಾಲೂಕು ಆರೋಗ್ಯ ಮೇಳಕ್ಕೆ ಪ್ರತಿ ತಾಲೂಕಿಗೆ ಒಂದು ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅಗತ್ಯ ಔಷಧಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ತಜ್ಞವೈದ್ಯರ ನೆರವು ಒದಗಿಸಲಾಗುತ್ತದೆ. ತಪಾಸಣೆ, ಸ್ಕ್ಯಾನಿಂಗ್, ಅಗತ್ಯ ಔಷಧೋಪಚಾರ ಜೊತೆಗೆ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಕುರಿತಂತೆ ಮಾಹಿತಿ ಮಳಿಗೆ ತೆರೆದು ಜಾಗೃತಿ ಮೂಡಿಸಬೇಕು. ಐಎಂಎ ವಿವಿಧ ವೈದ್ಯಕೀಯ ಸಂಘಟನೆಗಳು, ವಿವಿಧ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ್ ರೋಷನ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಆರ್. ಹಾವನೂರ, ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಆರೋಗ್ಯ ಮೇಳದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೋವಿಡ್ ಲಸಿಕಾ ಕೌಂಟರ್, ಆಯುಷ್ಮಾನ್ ಭಾರತ ಕೌಂಟರ್, ಆಯುಷ್ ಇಲಾಖೆ ಕೌಂಟರ್, ಪೋಷಣ್ ಅಭಿಯಾನ ಕೌಂಟರ್ ಹಾಗೂ ಆರೋಗ್ಯ ಇಲಾಖೆ ಸರ್ಕಾರದ ಯೋಜನೆ, ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವ ಆರೋಗ್ಯ ಶಿಕ್ಷಣ ಕೌಂಟರ್ ತೆರೆದು ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು. –
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ