ರಾಯಚೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಜಾರಿಯಾಗಿರುವ ಸುವರ್ಣ ಕರ್ನಾಟಕ ಆರೋಗ್ಯ ಮತ್ತು ಆಯುಷ್ಮಾನ್ ಯೋಜನೆ ಜಿಲ್ಲೆಯ ಮಟ್ಟಿಗೆ
ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಒಂದೆಡೆ ಖಾಸಗಿ ಆಸ್ಪತ್ರೆಗಳು ಯೋಜನೆಗೆ ಒಳಪಡಲು ಹಿಂಜರಿಯುತ್ತಿದ್ದರೆ, ಮತ್ತೂಂದೆಡೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯ ಇನ್ನೂ ಆರಂಭವಾಗಿಲ್ಲ.
ಜಿಲ್ಲೆಯಲ್ಲಿ ಎಲ್ಲ ವರ್ಗದ 22 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ, ಕೇಂದ್ರ ಸರ್ಕಾರವೂ ಇದೇ ವೇಳೆ ಆಯುಷ್ಮಾನ್ ಯೋಜನೆ ಜಾರಿಗೊಳಿಸಿದ್ದರಿಂದ ಎರಡೂ ಯೋಜನೆಗೂ ಅನ್ವಯ ಆಗುವ ರೀತಿಯಲ್ಲಿ ಒಂದೇ ಸ್ಮಾರ್ಟ್ ಕಾರ್ಡ್ ವಿತರಣೆಗೆ ನಿರ್ಧರಿಸಲಾಗಿದೆ. ಸ್ಮಾರ್ಟ್ ಕಾರ್ಡ್ ವಿತರಿಸಲು ಕಚೇರಿ ಆರಂಭಿಸಲು, ಅಗತ್ಯ ಸಿಬ್ಬಂದಿ ನೇಮಿಸಲು ಈಗ ತಾನೆ ಟೆಂಡರ್ ಪ್ರಕ್ರಿಯೆ ಶುರು ಮಾಡಲಾಗಿದೆ. ಹೀಗಾಗಿ ಇದು ಪರಿಪೂರ್ಣವಾಗಿ ಜಾರಿಯಾಗಲು ಇನ್ನೂ ಎರಡು ತಿಂಗಳಾದರೂ ಬೇಕಾಗಬಹುದು ಎನ್ನಲಾಗುತ್ತಿದೆ.
ಸ್ಮಾರ್ಟ್ ಕಾರ್ಡ್ ವಿತರಣೆ ಆಗುವವರೆಗೂ ಯಾವುದಾದರೂ ಗುರುತಿನ ಚೀಟಿ ನೀಡಿದರೆ ಈ ಯೋಜನೆಯಡಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 1,712 ಜನ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 199 ಆಸ್ಪತ್ರೆಗಳನ್ನು ಗುರುತಿಸಿದ್ದು, ಕೆಲ ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಈಚೆಗೆ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಜತೆ ಸಭೆ ನಡೆಸಿ ಮಾತುಕತೆ ನಡೆಸಿದ್ದು, ತುರ್ತು ಸೇವೆಗಳನ್ನಾದರೂ ನೀಡಲೇಬೇಕು ಎಂದು ಆರೋಗ್ಯ ಇಲಾಖೆ ತಾಕೀತು ಮಾಡಿದೆ. ಜಿಲ್ಲೆಯಲ್ಲಿ 50 ಬೆಡ್‌ಗಳ 50 ಆಸ್ಪತ್ರೆಗಳಿವೆ. ಈಗ ಕೇವಲ ನಗರದಲ್ಲಿ ಎರಡು ಮತ್ತು ಸಿಂಧನೂರಿನಲ್ಲಿ ಒಂದು ಆಸ್ಪತ್ರೆ ಮಾತ್ರ ಸೇವೆ ನೀಡಲು ಮುಂದೆ ಬಂದಿವೆ.
ಒಟ್ಟು 1,614 ಮಾದರಿಯ ಚಿಕಿತ್ಸೆಗಳನ್ನು ಹಂತ ಹಂತವಾಗಿ ಯೋಜನೆಯಡಿ ನೀಡಲಾಗುತ್ತಿದೆ. ಇದಕ್ಕಾಗಿ ರಿಮ್ಸ್‌ನಲ್ಲಿ ಎರಡು, ಉಳಿದ ಆರು ತಾಲೂಕುಗಳಲ್ಲಿ ಒಂದೊಂದು ನೋಂದಣಿ ಕೇಂದ್ರ ಆರಂಭಿಸುವ ಚಿಂತನೆ ನಡೆಸಲಾಗಿದೆ. ಮುಂದೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಯೋಜನೆ ಜಾರಿಗೊಳಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು. ಯಶಸ್ವಿನಿ ಸೇರಿ ಇತರೆ ಆರೋಗ್ಯ ಯೋಜನೆಗಳಲ್ಲಿ ಚಿಕಿತ್ಸೆ ನೀಡಿದ ಸಂಸ್ಥೆಗಳ ಬದಲಿಗೆ ಫಲಾನುಭವಿಗೆ ಸರ್ಕಾರದಿಂದ ಹಣ ಸಂದಾಯವಾಗುತ್ತಿತ್ತು. ಈಗ ಚಿಕಿತ್ಸೆ ನೀಡಿದ ಸಂಸ್ಥೆಗೆ ಹಣ ಸಂದಾಯವಾಗಲಿದೆ.
ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಯೋಜನೆಗಳನ್ನು ಒಗ್ಗೂಡಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲು ಸೂಚನೆ ಬಂದಿದೆ. ನಮ್ಮಲ್ಲಿ ಈಗ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ನೋಂದಣಿ ಕೇಂದ್ರ ಆರಂಭಿಸಿ ಕಾರ್ಡ್ ವಿತರಿಸಲಾಗುವುದು. ಚಿಕಿತ್ಸೆಗೆ ಯಾವುದೇ ಅಡ್ಡಿಯಿಲ್ಲ. ಯಾವುದೇ ಗುರುತಿನ ಚೀಟಿ ನೀಡಿ ಚಿಕಿತ್ಸೆ ಪಡೆಯಬಹುದು. ಆದರೆ, ಯೋಜನೆ ವ್ಯಾಪ್ತಿಗೆ ಒಳಪಡಲು ಕೆಲ ಖಾಸಗಿ ಆಸ್ಪತ್ರೆಗಳು ಹಿಂಜರಿಯುತ್ತಿವೆ. ಲಾಭದ ದೃಷ್ಟಿಯಿಂದ ನೋಡದೇ ಯೋಜನೆ ಯಶಸ್ಸಿಗೆ ಸಹಕರಿಸುವಂತೆ ಆಡಳಿತ ಮಂಡಳಿಗಳ ಮನವೊಲಿಸಲಾಗುತ್ತಿದೆ.
ಡಾ| ನಂದಿತಾ, ಯೋಜನೆ ಉಸ್ತುವಾರಿ, ಜಿಲ್ಲಾ ಆರೋಗ್ಯ ಇಲಾಖೆ
ಸಿದ್ಧಯ್ಯಸ್ವಾಮಿ ಕುಕನೂರು