Advertisement

ಆರೋಗ್ಯ ಇಲಾಖೆ ವಸತಿ ಗೃಹಗಳಿಗೇ ಅನಾರೋಗ್ಯ

03:18 PM Jul 25, 2022 | Team Udayavani |

ಹಿರೇಬಾಗೇವಾಡಿ: ಜನರ ಆರೋಗ್ಯ ರಕ್ಷಣೆಗೆ ದಿನರಾತ್ರಿ ಶ್ರಮಿಸುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅವುಗಳನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಗೆ 45 ಗ್ರಾಮಗಳು ಇದ್ದು, ಈ ಭಾಗದ ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಮಾರು 12 ವರ್ಷಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಾಗಿ 14 ವಸತಿಗೃಹಗಳು ಇದ್ದು, ಅದರಲ್ಲಿ 11 ವಸತಿ ಗೃಹಗಳು ನಿರ್ವಹಣೆಯ ಕೊರತೆಯಿಂದಾಗಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. 3 ಮಾತ್ರ ಉಪಯೋಗವಾಗುತ್ತಿವೆ. ಆದರೆ ಅವು ಸಹ ಶಿಥಿಲಗೊಂಡಿದ್ದು, ಅನಿವಾರ್ಯವಾಗಿ ಕೆಲವು ಸಿಬ್ಬಂದಿ ಈ ಕಟ್ಟಡಗಳಲ್ಲಿ ಆತಂಕದ ನಡುವೆ ವಾಸ ಮಾಡುತ್ತಿದ್ದಾರೆ.

ಈ ಕೇಂದ್ರಕ್ಕೆ ಮಂಜೂರಾದ ಹುದ್ದೆಗಳು 44. ಅಷ್ಟು ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲವಾದರೂ ಸದ್ಯ ಇರುವ ಸಿಬ್ಬಂದಿಗೂ ವಸತಿ ಗೃಹಗಳು ಇಲ್ಲದೆ ಇರುವುದರಿಂದ ಅನಿವಾರ್ಯವಾಗಿ ಸಿಬ್ಬಂದಿ ಬಾಡಿಗೆ ಮನೆ ಮಾಡುವಂತಾಗಿದೆ. ಆಸ್ಪತ್ರೆಯ ಆವರಣದಲ್ಲಿಯೇ ಇರುವ ವಸತಿ ಗೃಹಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರೆ ರೋಗಿಗಳಿಗೂ ಅನುಕೂಲ ಎನ್ನುವುದು ಜನರ ಅಭಿಪ್ರಾಯ.

ಮಳೆಗಾಲ ಬಂತೆಂದರೆ ಸಾಕು, ಇಲ್ಲಿನ ವಸತಿ ಗೃಹದಲ್ಲಿ ಇರುವವರ ಬದುಕು ಮೂರಾಬಟ್ಟೆ ಎಂದೇ ಅರ್ಥ. ಬಿರುಕು ಬಿಟ್ಟಿರುವ ಮೇಲ್ಚಾವಣಿಯಿಂದ ನಿರಂತರವಾಗಿ ಸೋರುವ ನೀರು, ವಸತಿ ಗೃಹದ ಸುತ್ತಮುತ್ತಲು ಕೆಸರಿನ ಹೊಂಡವೇ ಸೃಷ್ಟಿಯಾಗಿರುತ್ತದೆ. ಹಳೆಯ ವಿದ್ಯುತ್‌ ಜೋಡಣೆಯಿಂದಾಗಿ ಶಾಕ್‌ ತಗಲುವ ಭಯ ವಸತಿ ಗೃಹದಲ್ಲಿರುವ ಸಿಬ್ಬಂದಿ ಕುಟುಂಬಗಳಿಗೆ ಕಾಡುತ್ತದೆ.

Advertisement

ಆರೋಗ್ಯ ಇಲಾಖೆಯು ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಹಿತದೃಷ್ಟಿಯಿಂದ ಹಳೆಯ ಕಟ್ಟಡಗಳನ್ನು ಕೆಡವಿ ಜಿ+2 ಮಾದರಿಯ ಮನೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಈ ಭಾಗದ ಜನರ ಅನಿಸಿಕೆ. ಜನರು ಆಡಳಿತಕ್ಕೆ ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಹಿಂದೆ ಕೂಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಗಬೇಕಾದ ಅನುಕೂಲತೆಗಳ ಬಗ್ಗೆ ಡಿಎಚ್‌ಓ ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಲಾಗಿತ್ತು. ಅವರಿಂದ ಸಮಸ್ಯೆ ಪರಿಹಾರದ ಭರವಸೆ ಪಡೆದು ವರ್ಷಗಳೇ ಗತಿಸಿದ್ದರೂ ಸಹ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ. –ಮಂಜುನಾಥ ವಸ್ತ್ರದ, ಪ್ರಧಾನ ಕಾರ್ಯದರ್ಶಿ ಉ.ಕ. ಜನ ಸಂಗ್ರಾಮ ಪರಿಷತ್‌

ಮಾಧ್ಯಮ ಹಾಗೂ ಸಾರ್ವಜನಿಕರ ನಿರೀಕ್ಷೆಯಂತೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು. –ಶಿವಾನಂದ ಮಾಸ್ತಿಮರರ್ಡಿ, ತಾಲೂಕು ವೈದ್ಯಾಧಿಕಾರಿ, ಬೆಳಗಾವಿ.

ಆಸ್ಪತ್ರೆಗೆ ಎಲ್ಲ ಮೂಲಭೂತ ಸೌಕರ್ಯಗಳ ಕುರಿತಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ನೀಡಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. –ಡಾ| ನೀತಾ ಚವ್ಹಾಣ, ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ಹಿರೇಬಾಗೇವಾಡಿ.

-ಶಿವಾನಂದ ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next