Advertisement

43 ಮಂದಿ ಪೈಕಿ ಐವರಲ್ಲಿ ಡೆಂಗ್ಯೂ ದೃಢ

09:53 AM Jun 25, 2019 | keerthan |

ಮಂಗಳೂರು: ಶಂಕಿತ ಡೆಂಗ್ಯೂ ಪೀಡಿತ ಗೋರಕ್ಷ ದಂಡು ಮತ್ತು ಅರೆಕೆರೆಬೈಲು ಪ್ರದೇಶದ ಜ್ವರ ಪೀಡಿತ 43 ಜನರನ್ನು ಸೋಮವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 5 ಮಂದಿಗೆ ಡೆಂಗ್ಯೂ ಜ್ವರ ಇರುವುದು ದೃಢಫಟ್ಟಿದೆ.

Advertisement

ರವಿವಾರ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮತ್ತು ಜಿಲ್ಲಾ ಮತ್ತು ಮಂಗಳೂರು ಮನಪಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು ಮತ್ತು ಜ್ವರ ಕಾಣಿಸಿ ಕೊಂಡಿರುವ ಮನೆಗಳ ಸಮೀಕ್ಷೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸಿದ್ದರು. ಸೋಮವಾರ ನುರಿತ ವೈದ್ಯರ ತಂಡ ಆ ಪ್ರದೇಶದಲ್ಲಿ 43 ಮಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿತ್ತು. ಅದರಲ್ಲಿ 23 ಮಂದಿಗೆ ಡೆಂಗ್ಯೂ ಮಾದರಿಯ ಜ್ವರ ಕಾಣಿಸಿಕೊಂಡಿದೆ. 5 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದ್ದು, ಒಬ್ಬರಿಗೆ ನೆಗೆಟಿವ್‌ ಬಂದಿದೆ. ಉಳಿದವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಅವರನ್ನು ಪರಿವೀಕ್ಷಣೆಯಲ್ಲಿ ಇಡಲಾಗಿದೆ. ಕ್ಯಾಂಪ್‌ ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇವೆ. ನರ್ಸಿಂಗ್‌ ವಿದ್ಯಾರ್ಥಿಗಳು ಮತ್ತು ಮಂಗಳೂರು ತಾಲೂಕು ಪುರುಷ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಈಗ ಇರುವ ಪ್ರದೇಶದಿಂದ ಒಂದು ಕಿ.ಮೀ. ಹೆಚ್ಚುವರಿ ಭಾಗದಲ್ಲಿ ತಪಾಸಣೆ ಮಾಡಲಾಗುತ್ತದೆ. ಆ ಭಾಗದಿಂದ ಬೇರೆಡೆಗೆ ಜ್ವರ ಹರಡದಂತೆ ನಿಗಾ ವಹಿಸಲಾಗುತ್ತದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಡಿಸಿ ನೇತೃತ್ವದಲ್ಲಿ ಸಭೆ
ಸೋಮವಾರ ಡಿಸಿ ಜಿ.ಪಂ. ಸಿಇಒ, ಡಿಎಚ್‌ಒ ಡಾ| ರಾಮಕೃಷ್ಣ ರಾವ್‌ ನೇತೃತ್ವದಲ್ಲಿ ಸಭೆ ನಡೆಸಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಖಾಸಗಿ ಆಸ್ಪತ್ರೆಗೆ ಭೇಟಿ
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಶಂಕಿತ ಡೆಂಗ್ಯೂ ರೋಗಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ| ನವೀನ್‌ ಅವರು ಅಧಿಕಾರಿಗಳೊಂದಿಗೆ ಭೇಟಿಯಾಗಿ ಮಾಹಿತಿ ಕಲೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next