ದಾವಣಗೆರೆ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಏ. 7ರಂದು ಕುವೆಂಪು ಕನ್ನಡ ಭವನದಲ್ಲಿ ಬೌದ್ಧಿಕ ಸವಾಲುಗಳ ಎದುರಿಸುತ್ತಿರುವ ದಿವ್ಯಾಂಗ ಕ್ರೀಡಾಪಟುಗಳಿಗೆ ಉಚಿತವಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸ್ಪೆಷಲ್ ಒಲಂಪಿಕ್ಸ್ ಭಾರತ್ ದಾವಣಗೆರೆ ಸಮಿತಿ ಕಾರ್ಯದರ್ಶಿ ಸುರೇಂದ್ರನಾಥ್ ನಿಶಾನಿಮಠ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2023ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯುವ ಬೌದ್ಧಿಕ ಸವಾಲುಗಳ ಎದುರಿಸುತ್ತಿರುವ ದಿವ್ಯಾಂಗ ಕ್ರೀಡಾಪಟುಗಳ ಒಲಂಪಿಕ್ಸ್‌ನಲ್ಲಿ ಭಾಗವಹಿಸುವಂತಹವರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.
ಈ ಮೊದಲು ವಿಶೇಷ ಒಲಂಪಿಕ್ಸ್ ನಿಗದಿಯಾದ ನಂತರವೇ ಬೌದ್ಧಿಕ ಸವಾಲುಗಳ ಎದುರಿಸುತ್ತಿರುವ ದಿವ್ಯಾಂಗ ಕ್ರೀಡಾಪಟುಗಳ ಆಯ್ಕೆ, ತರಬೇತಿ ನಡೆಸಲಾಗುತ್ತಿತ್ತು. ಈಗ ಪ್ರಾರಂಭಿಕ ಹಂತದಿಂದಲೇ ಬೌದ್ಧಿಕ ಸವಾಲು ಎದುರಿಸುತ್ತಿರುವ ದಿವ್ಯಾಂಗ ಕ್ರೀಡಾಪಟುಗಳಿಗೆ ತರಬೇತಿಗೆ ಆಯ್ಕೆ ಮಾಡುವ ಮೊದಲ ಹೆಜ್ಜೆಯಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಶಿಬಿರದಲ್ಲಿ ದಂತ, ಕೀಲು ಮತ್ತು ಮೂಳೆ ತಜ್ಞರು, ಇತರೆ ವೈದ್ಯರು ದಿವ್ಯಾಂಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಯಾವ ಕ್ರೀಡೆಯಲ್ಲಿ ಭಾಗವಹಿಸಲು ಅರ್ಹರು, ಎದುರಿಸುತ್ತಿರುವ ಸಮಸ್ಯೆ ಮತ್ತು ಅದಕ್ಕೆ ಸೂಕ್ತ ಪರಿಹಾರದ ಬಗ್ಗೆ ನೀಡುವ ಸಂಪೂರ್ಣ ಮಾಹಿತಿ ಆಧಾರದಲ್ಲಿ ದಿವ್ಯಾಂಗರನ್ನು ವಿವಿಧ ಕ್ರೀಡೆಗಳ ತರಬೇತಿಗೆ ಆಯ್ಕೆ ಮಾಡಲಾಗುವುದು. ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ನೀಡಿದ ನಂತರ ಅಂತಾರಾಷ್ಟ್ರೀಯ, ಒಲಂಪಿಕ್ಸ್‌ಗೆ ಕಳುಹಿಸಿಕೊಡಲಾಗುವುದು ಎಂದರು.
ಗುರುವಾರ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಯ 800ಕ್ಕೂ ಹೆಚ್ಚು ದಿವ್ಯಾಂಗರ ಆರೋಗ್ಯ ತಪಾಸಣೆ ನಡೆಯಲಿದೆ. 42 ದಂತ ವೈದ್ಯರು, 20 ಇತರೆ ವಿಭಾಗದ ವೈದ್ಯರು, 100ಕ್ಕೂ ಹೆಚ್ಚು ಸ್ವಯಂ ಸೇವಕರು, ವೈದ್ಯಕಿಯೇತರ ಸಿಬ್ಬಂದಿ ಶಿಬಿರ ನಡೆಸಿಕೊಡುವರು. ಅಂದು ದೇಶದ್ಯಾಂತ ಏಕಕಾಲಕ್ಕೆ 75 ನಗರಗಳಲ್ಲಿ, 750 ಶಿಬಿರಗಳಲ್ಲಿ 75 ಸಾವಿರಕ್ಕೂ ಅಧಿಕ ದಿವ್ಯಾಂಗರ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಆಜಾದಿ ಅಮೃತ್ ಮಹೋತ್ಸವ ಅಂಗವಾಗಿ ಎಲ್ಲೆಡೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ, ಸಂವೇದ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏ. 7ರಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ದಿವ್ಯಾಂಗರ ಆರೋಗ್ಯ ತಪಾಸಣೆ ನಡೆಸಲಾಗುವುದು. ಈಚೆಗೆ ದಿವ್ಯಾಂಗರಲ್ಲಿ ಕೆಲವರು ತಂಬಾಕು ಉತ್ಪನ್ನಗಳ ಬಳಕೆ ಮಾಡುತ್ತಿರುವುದು ಸಹ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನ, ಮಾದಕ ವಸ್ತುಗಳ ಬಳಕೆ ಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉಪನ್ಯಾಸ, ಸಾಕ್ಷ್ಯ ಚಿತ್ರ ಪ್ರದರ್ಶನ ಇತರೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಸ್ಪೆಷಲ್ ಒಲಂಪಿಕ್ಸ್ ಭಾರತ್ ದಾವಣಗೆರೆ ಸಮಿತಿ ಅಧ್ಯಕ್ಷ ರವಿನಾರಾಯಣ್, ಸಹ ಸಂಚಾಲಕ ಎಸ್. ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.