ಚಿತ್ರದುರ್ಗ: ಮನುಷ್ಯನ ಬದುಕು ಸಾಮರಸ್ಯದಿಂದ ಕೂಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಮುಖ್ ಈ. ಗಂಗಾಧರ ಹೇಳಿದರು.
ಡಾ| ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ತಮಟಗಲ್ ರಸ್ತೆಯಲ್ಲಿ ನೆಲೆಸಿರುವ ನಿರಾಶ್ರಿತರು ಹಾಗೂ ಅಲೆಮಾರಿ ಜನಾಂಗದ ಪ್ರದೇಶದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ| ಬಿ.ಆರ್. ಅಂಬೇಡ್ಕರ್ ನಮ್ಮ ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಆ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂಥವರ ಪರಿನಿರ್ವಾಣ ದಿನದಂದು ಬಡ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಉತ್ತಮ ಬೆಳೆವಣಿಗೆ. ಸಾರ್ವಜನಿಕರು ಇದರ ಪ್ರಯೋಜನಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಎಬಿವಿಪಿ ನಗರಾಧ್ಯಕ್ಷ ಅನಿಲ್‌ಕುಮಾರ್‌ಮಾತನಾಡಿ, ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಳೆದ ಹಲವು ದಿನಗಳಿಂದ ಅನೇಕ ಶಿಬಿರಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ ಅಂಬೇಡ್ಕರ್ ಅವರ ನಿರ್ವಾಣದ ದಿನವಾದ ಇಂದು ನಡೆಯುತ್ತಿರುವ ಶಿಬಿರ ವಿಶೇಷವಾಗಿದೆ. ನಮ್ಮ ದೇಶದಲ್ಲಿಅನೇಕ ಬಡವರು ಉತ್ತಮ ವೈದ್ಯಕೀಯ ಸೇವೆ ದೊರೆಯದೆ ವಂಚಿತರಾಗಿದ್ದಾರೆ. ಅಂತಹ ಜನರನ್ನು ಗುರುತಿಸಿ ಇಂದು ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿರುವುದು ಪುಣ್ಯದ ಕೆಲಸ. ಹಾಗಾಗಿ ಬಡವರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಲಾಗುತ್ತದೆ. ನಮ್ಮ ಈ ಕೆಲಸಗಳಿಗೆ ಅಂಬೇಡ್ಕರ್ ಸ್ಫೂರ್ತಿಯಾಗಿದ್ದಾರೆ ಎಂದರು.
ಎಬಿವಿಪಿ ನಗರ ಉಪಾಧ್ಯಕ್ಷ ವಿಕಾಸ್, ಜಿಲ್ಲಾ ಸಂಚಾಲಕ ಸುರೇಶ್, ನಗರ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ನಗರ ಕಾರ್ಯದರ್ಶಿ ಅವಿನಾಶ್, ಅಜಯ್, ಮನೋಜ್, ದೀಪಕ್, ಜಯಂತ್, ವಿದ್ಯಾರ್ಥಿನಿಪ್ರಮುಖ್ ಕೃತಿಕಾ, ಛಾಯಾ, ವಂದಿತಾ, ಚಂದ್ರಶೇಖರ್, ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು. ಜಿಜ್ಞಾಸ ಘಟಕದ ಜಿಲ್ಲಾ ಸಂಚಾಲಕ ರುಚಿತ್ ನೇತೃತ್ವದ ತಂಡ ಆರೋಗ್ಯ ಶಿಬಿರ ನಡೆಸಿಕೊಟ್ಟಿತು. ಸುಮಾರು 300ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಅಗತ್ಯ ಇರುವವರಿಗೆ ಉಚಿತ ಚಿಕಿತ್ಸೆ ನೀಡಿ ಔಷಧ ವಿತರಿಸಲಾಯಿತು.