ಬಂಗಾರಪೇಟೆ: ಬಡವರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಾ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿಯೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಅವರ ಸ್ಥಳದಲ್ಲೇ ಉತ್ತಮ ಚಿಕಿತ್ಸೆ ನೀಡಲು ಮುಂದಾಗಿದೆ. ಆದರೆ, ಕೆಲವು ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೂ, ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಬಾಗಿಲು ಮುಚ್ಚಿರುವುದು ಜನರ ಆರೋಗ್ಯದ ಜತೆ ಚೆಲ್ಲಾಟ ವಾಡುವಂತಾಗಿದೆ.
ರಾಜ್ಯದ ಗಡಿಭಾಗದಲ್ಲಿರುವ ತಾಲೂಕಿನ ಆಂಧ್ರಪ್ರದೇಶ ಹಾಗೂ ತಮಿಳು ನಾಡಿನ ಗಡಿಭಾಗಕ್ಕೆ ಅಂಟಿ ಕೊಂಡಿರುವ ದೋಣಿ ಮಡಗು ಗ್ರಾಮ ಪಂಚಾಯ್ತಿಯ ಮುಷ್ಟ್ರಹಳ್ಳಿ ಗ್ರಾಮದಲ್ಲಿ ದಶಕಗಳ ಹಿಂದೆ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ತೆರೆಯಲಾಗಿತ್ತು. ಕೆಲ ವರ್ಷ ಇಲ್ಲಿನ ಸಿಬ್ಬಂದಿ ಸಹ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಬಾಗಿಲು ಮುಚ್ಚಿದೆ. ಕೇಂದ್ರದ ಬಾಗಿಲು ಮುಚ್ಚಿರುವುದರಿಂದ ಗ್ರಾಮಸ್ಥರು ಕೇಂದ್ರದ ಮುಂದೆ ಕಸ ಎಸೆಯುತ್ತಿದ್ದಾರೆ. ಇದರಿಂದ ಆರೋಗ್ಯ ಕೇಂದ್ರದ ಸುತ್ತ ಅನಾರೋಗ್ಯದ ವಾತಾವರಣ ಸೃಷ್ಟಿಯಾಗಿದೆ. ಆರೋಗ್ಯ ಕೇಂದ್ರದ ಕಡೆ ಮುಖ ಹಾಕದ ವೈದ್ಯರು: ತಾಲೂಕಿನ ದೋಣಿಮಡಗು ಗ್ರಾಮ ಪಂಚಾಯ್ತಿಯ 20ಕ್ಕೂ ಹೆಚ್ಚಿನ ಗ್ರಾಮಗಳ ಗ್ರಾಮಸ್ಥರಿಗೆ ಆರೋಗ್ಯ ಕೆಟ್ಟರೆ ಪಕ್ಕದ ತೊಪ್ಪನಹಳ್ಳಿ ಗ್ರಾಮ ಪಂಚಾಯ್ತಿಯ ಕೇಂದ್ರ ಸ್ಥಾನದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಹೋಗ ಬೇಕಾ ಗಿದೆ. ಆದರೆ, ಅಲ್ಲಿಯೂ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಜನರು ತಮ್ಮ ಆರೋಗ್ಯ ರಕ್ಷಣೆಗಾಗಿ ಅಲೆ ಯುವಂತಾಗಿದೆ. ತೊಪ್ಪನಹಳ್ಳಿ ಕೇಂದ್ರದಲ್ಲಿ ವೈದ್ಯರಾಗಿದ್ದವರು. ತಾಲೂಕು ಆರೋಗ್ಯಾಧಿಕಾರಿ ಯಾಗಿ ಹೆಚ್ಚುವರಿ ಅಧಿಕಾರವಹಿಸಿ ಕೊಂಡ ಬಳಿಕ ತೊಪ್ಪನ ಹಳ್ಳಿ ಆರೋಗ್ಯ ಕೇಂದ್ರದ ಕಡೆ ಮುಖ ಮಾಡು ವುದನ್ನೇ ಮರೆತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ವೈದ್ಯರನ್ನು ನೇಮಿಸಲು ಆಗ್ರಹ: ಮುಷ್ಟ್ರಹಳ್ಳಿ ಮತ್ತು ತೊಪ್ಪನಹಳ್ಳಿ ಗ್ರಾಮಗಳಲ್ಲಿ ಸುಸಜ್ಜಿತವಾದ ಆರೋಗ್ಯ ಕೇಂದ್ರಗಳ ಕಟ್ಟಡ ಇದ್ದರೂ ಪ್ರಯೋಜನ ಆಗುತ್ತಿಲ್ಲ. ಮುಖ್ಯ ವಾಗಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಕಟ್ಟಡ ಗಳು ನಿರುಪಯುಕ್ತವಾಗುವಂತಾಗಿದೆ. ಆರೋಗ್ಯ ಇಲಾಖೆ ಇತ್ತ ಗಮನಹರಿಸಿ ಎರಡೂ ಗ್ರಾಮ ಪಂಚಾಯ್ತಿಗಳಲ್ಲಿ ಅಗತ್ಯ ವೈದ್ಯರನ್ನು ಹಾಗೂ ಸಿಬ್ಬಂದಿ ನೇಮಿಸಿ ಜನರ ಆರೋಗ್ಯ ರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
2 ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಆರೋಪ: ದೋಣಿಮಡಗು ಹಾಗೂ ತೊಪ್ಪನಹಳ್ಳಿ ಎರಡೂ ಗ್ರಾಮ ಪಂಚಾಯ್ತಿಗಳ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಜನರು ಪಕ್ಕದ ಆಂಧ್ರಪ್ರದೇಶ ಇಲ್ಲವೆ ತಮಿಳುನಾಡಿನತ್ತ ಅಲೆಯುವಂತಾಗಿದೆ. ಇಲ್ಲದಿದ್ದರೆ 40 ಕೀ.ಮೀ. ದೂರದ ತಾಲೂಕು ಕೇಂದ್ರಕ್ಕೆ ಬರಬೇಕು. ಇದರ ನಡುವೆ ರಸ್ತೆಗಳು ಬೇರೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅರ್ಧ ಗಂಟೆ ಸಂಚಾರಕ್ಕೆ ಎರಡು ಗಂಟೆ ಬೇಕಾಗಿದೆ. ರಸ್ತೆಗಳು ಹಾಳಾಗಿರುವುದರಿಂದ ಆರೋಗ್ಯ ಕೆಟ್ಟವರು ಈ ರಸ್ತೆಗಳಲ್ಲಿ ಸಂಚರಿಸಿದರೆ ಮತ್ತಷ್ಟು ಆರೋಗ್ಯ ಕೆಡಲಿದೆ ಎಂಬ ಆತಂಕದಿಂದ ಆಂಧ್ರಪ್ರದೇಶ ಹಾಗೂ ತಮಿಳುನಾಡನ್ನು ಆಶ್ರಯಿಸುವಂತಾಗಿದೆ.
ತೊಪ್ಪನಹಳ್ಳಿ ವೈದ್ಯರಾಗಿದ್ದ ನನ್ನನ್ನು ತಾಲೂಕು ಆರೋಗ್ಯಾಧಿಕಾರಿ ಯಾಗಿ ನಿಯೋಜನೆ ಮಾಡಿದ್ದು, ಡಾ.ಶುಕ್ಲ ಹಾಗೂ ಡಾ. ಜ್ಯೋತಿ ಎಂಬುವವರನ್ನು ತಾತ್ಕಾಲಿಕವಾಗಿ ಪ್ರಭಾರಿಯಾಗಿ ನಿಯೋಜನೆ ಮಾಡಲಾ ಗಿದೆ. ಮುಷ್ಟ್ರಹಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿದ್ದ ವೈದ್ಯರನ್ನು ಬಲಮಂದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿರುವು ದರಿಂದ ಈ ಸ್ಥಾನ ಖಾಲಿ ಇದೆ. ಇಲ್ಲಿಗೆ ವೈದ್ಯರನ್ನು ನಿಯೋಜನೆ ಮಾಡುವಂತೆ ಜಿಲ್ಲಾ ಆರೋಗ್ಯ ಸಮುದಾಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
● ಡಾ.ಪ್ರಿಯದರ್ಶಿನಿ, ತಾಲೂಕು ಆರೋಗ್ಯಾಧಿಕಾರಿ, ಬಂಗಾರಪೇಟೆ
ತಾಲೂಕಿನ ಮುಷ್ಟ್ರಹಳ್ಳಿ ಗ್ರಾಮವು ರಾಜ್ಯದ ಗಡಿಭಾಗದಲ್ಲಿದ್ದು, ತಾಲೂಕು ಆರೋಗ್ಯ ಇಲಾಖೆಗೆ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ತಾತ್ಸಾರ ಮನೋಭಾವನೆ ಇದೆ. ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ 6 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಅಕ್ಕಪಕ್ಕ ಇರುವ ಆರೋಗ್ಯ ಕೇಂದ್ರದಲ್ಲಿಯೂ ಸಹ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಮುಚ್ಚಲಾಗಿದ್ದು, ಬಡವರಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮಕೈಗೊಳ್ಳದೆ ಇರುವುದು ದುರ್ದೈವವಾಗಿದೆ.
● ರಾಜಪ್ಪ, ಮುಷ್ಟ†ಹಳ್ಳಿ ಗ್ರಾಪಂ ಸದಸ್ಯ
–ಎಂ.ಸಿ. ಮಂಜುನಾಥ್