Advertisement

ಆರೋಗ್ಯ ಕಾಳಜಿ ವಹಿಸುವುದು ಅಗತ್ಯ

07:34 AM Feb 17, 2019 | |

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್‌ ಆರೋಗ್ಯ ಮೇಳದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆಗೊಳಗಾಗಿ ಉಚಿತ ಔಷಧ ಹಾಗೂ ವೈದ್ಯಕೀಯ ನೆರವು ಪಡೆದುಕೊಂಡರು. ಆರೋಗ್ಯ ತಪಾಸಣೆಗೊಳಗಾದವರಿಗೆ ಉಚಿತವಾಗಿ 4 ಕೋಟಿ ರೂ. ಔಷಧ ವಿತರಿಸಲಾಯಿತು. 

Advertisement

ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಚ್‌.ಡಿ. ರೇವಣ್ಣ ಅವರ ಆಶಯದಂತೆ ಹಮ್ಮಿಕೊಂಡಿದ್ದ ಆರೋಗ್ಯ ಮೇಳದಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳ ವೈದ್ಯರ ಜೊತೆಗೆ ಬೆಂಗಳೂರು ಮತ್ತು ಮೈಸೂರಿನ ವಿವಿಧ ವೈದ್ಯಕೀಯ ಸಂಸ್ಥೆಗಳ 600 ತಜ್ಞ ವೈದ್ಯರು, ವೈದ್ಯರು, 2 ಸಾವಿರ ಪ್ಯಾರಾಮೆಡಿಕಲ್‌ ಸಿಬ್ಬಂದಿ ಪಾಲ್ಗೊಂಡು ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು. 

ಜಿಲ್ಲಾ ಹಾಕಿ ಕ್ರೀಡಾಂಗಣ, ವಾಲಿಬಾಲ್‌ ಕ್ರೀಡಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ರೋಗಳ ತಪಾಸಣೆಗೆ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿತ್ತು 12ಕ್ಕೂ ಹೆಚ್ಚು ಮಳಿಗೆಗಳಲ್ಲಿ ವೈದ್ಯರು ತಪಾಸಣೆ ನಡೆಸಿ ಬರೆದುಕೊಟ್ಟ ಚೀಟಿಗೆ ಸರ್ಕಾರಿ ಕಾನೂಕು ಕಾಲೇಜು ಪಕ್ಕದ ಮೈದಾನದಲ್ಲಿ ಔಷಧ ವಿತರಣೆ ಮಾಡಲಾಯಿತು. ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಹಾಜರಿದ್ದು ಔಷಧ ವಿತರಣೆಗೆ ಫಾರ್ಮಾಸಿಸ್ಟ್‌ಗಳಿಗೆ ಸಹಕರಿಸಿದರು. 

ಆರೋಗ್ಯ ಮೇಳ ಉದ್ಘಾಟನೆ: ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಆರೋಗ್ಯ ಮೇಳವನ್ನು ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ. ರೇವಣ್ಣ ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ರವಿಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ, ಉಪಕಾರ್ಯದರ್ಶಿ ನಾಗರಾಜ್‌ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಬೆಂಗಳೂರಿನ ನಿಮಾನ್ಸ್‌, ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಗ್ರಂಥಿ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಬೆಂಗಳೂರು ದಂತ ಚಿಕಿತ್ಸಾಲಯ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಹಾಸನ ನಗರದ ಹಲವು ಖಾಸಗಿ ಆಸ್ಪತ್ರೆಗಳ ವೈದ್ಯರು ಆರೋಗ್ಯ ಮೇಳದಲ್ಲಿ ಪಾಲ್ಗೊಂಡು ವೈದ್ಯಕೀಯ ಸೇವೆ ಒದಗಿಸಿದರು. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಿಂದ ಕ್ಯಾನ್ಸರ್‌ ತಪಾಸಣೆಗಾಗಿ ವಿಶೇಷ ಸಾಧನಗಳನ್ನು ಅಳವಡಿಸಿದ್ದ ಬಸ್‌ ಕೂಡ ಆರೋಗ್ಯ ಮೇಳಕ್ಕೆ ಆಗಮಿಸಿತ್ತು. 

Advertisement

20 ಸಾವಿರಕ್ಕೂ ಅಧಿಕ ಮಂದಿ ಅಧಿಕೃತ ನೋಂದಣಿ ಮಾಡಿಸಿ ಆರೋಗ್ಯ ತಪಾಸಣೆಗೆ ಒಳಪಟ್ಟರು. ಸಾವಿರಾರು ಮಂದಿ ಸಾಮಾನ್ಯ ತಪಾಸಣೆಗೆ ಒಳಪಟ್ಟರು. 2 ಸಾವಿರ ಮಂದಿಗೆ ಇಸಿಜಿ, 500 ಮಂದಿಗೆ ಹೃದ್ರೋಗ ತಪಾಸಣೆ, 550 ಮಂದಿಗೆ ಟಿಎಂಟಿ ತಪಾಸಣೆ 8ಸಾವಿರ  ಮಂದಿಗೆ ಮಧುಮೇಹ ತಪಾಸಣೆ ಮಾಡಲಾಗಿದೆ. ಶಂಕಿತ 50 ಪ್ರಕರಣಗಳಲ್ಲಿ ಕ್ಯಾನ್ಸರ್‌ ಸ್ಕ್ರೀನಿಂಗ್‌ ನಡೆಸಲಾಗಿದೆ.

1,350 ಮಂದಿ ಆಯುಷ್‌ ಚಿಕಿತ್ಸೆ ಹಾಗೂ 4ಸಾವಿರ  ಮಂದಿ ದಂತ ತಪಾಸಣೆ ಹಾಗೂ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ದಾಸ್ತಾನು ಜೊತೆಗೆ ಖಾಸಗಿ ಔಷಧ ಸರಬರಾಜುದಾರರ ಮೂಲಕ ಕೊಡುಗೆ ರೂಪದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದ ಔಷಧ ಪೂರೈಕೆಯಾಗಿದ್ದು, ವೈದ್ಯರ ತಪಾಸಣೆ ಚೀಟಿಯಾನುಸಾರ ಅವುಗಳನ್ನು ಸಾರ್ವಜನಿಕರಿಗೆ ತರಿಸಲಾಯಿತು.

ವಾರ್ತಾ ಇಲಾಖೆ ಮಳಿಗೆ: ಆರೋಗ್ಯ ಮೇಳದ ಮಳಿಗೆಗಳ ಜೊತೆಯಲ್ಲಿಯೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಿದ್ದ ರಾಜ್ಯ ಸರ್ಕಾರದ ಯೋಜನೆಗಳ ಹಾಗೂ ಸಾಧನೆಗಳನ್ನು ಬಿಂಬಿಸುವ ಮಾಹಿತಿ ಮಳಿಗೆಯಲ್ಲಿ ಸಾರ್ವಜನಿಕರಿಗೆ ಕಿರುಪುಸ್ತಿಕೆ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.

ಸಚಿವ ರೇವಣ್ಣ ಕೃತಜ್ಞತೆ: ಆರೋಗ್ಯ ತಪಾಸಣಾ ಶಿಬಿರದ ಮುಕ್ತಾಯದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ. ರೇವಣ್ಣ ಅವರು ಯಶಸ್ಸಿಗೆ ಸಹಕರಿಸಿದ ಮತ್ತು ಶ್ರಮಿಸಿದ ಎಲ್ಲಾ ವೈದ್ಯಾಧಿಕಾರಿಗಳಿಗೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಔಷಧ ಪೂರೈಸಿದ ಸಂಸ್ಥೆಗಳ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next