Advertisement

ಆರೋಗ್ಯ ಕಾರ್ಡ್‌ ನೋಂದಣಿ ಚುರುಕು: ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

01:48 PM Dec 29, 2021 | Team Udayavani |

ದಾವಣಗೆರೆ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ವೈದ್ಯರ ಶಿಫಾರಸು ಪತ್ರದೊಂದಿಗೆ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ (ಎಬಿ-ಎಆರ್‌ಕೆ ) ಒಂದೇ ಸಾಕು ಎನ್ನುವ ರಾಜ್ಯ ಸರಕಾರದ ಇತ್ತೀಚಿನ ನಿಯಮದಿಂದ ರಾಜ್ಯದಲ್ಲಿ ಆರೋಗ್ಯ ಕಾರ್ಡ್‌ ನೋಂದಣಿ ಪ್ರಕ್ರಿಯೆ ಚುರುಕು ಪಡೆದಿದೆ.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಉಚಿತ ಚಿಕಿತ್ಸೆ ಪಡೆಯಲು ಎಬಿ-ಎಆರ್‌ಕೆ ಕಾರ್ಡ್‌ನೊಂದಿಗೆ ಬಿಪಿಎಲ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಸೇರಿ ಇನ್ನಿತರ ದಾಖಲೆಗಳನ್ನು ಕೇಳಲಾಗುತ್ತಿತ್ತು. ತುರ್ತು ಸಂದರ್ಭ ಈ ಎಲ್ಲ ದಾಖಲೆಗಳನ್ನು ನೀಡಲಾಗದು ಎನ್ನುವ ಕಾರಣಕ್ಕಾಗಿ ಅನೇಕರು ಎಬಿ-ಎಆರ್‌ಕೆ ಕಾರ್ಡ್‌ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಹೊಸ ನಿಯಮದಿಂದ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆ.

ಆರೋಗ್ಯ ಇಲಾಖೆ ಅಂಕಿ-ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಆಮೆಗತಿಯಲ್ಲಿ ಸಾಗಿದೆ. ಯೋಜನೆ (2018ರಿಂದ) ಆರಂಭವಾದಾಗಿನಿಂದ ಇಲ್ಲಿಯವರೆಗೆ ಕಾರ್ಡ್‌ ಮಾಡಿಸಿಕೊಂಡವರ ಸಂಖ್ಯೆ ಶೇ. 25ನ್ನೂ ದಾಟಿಲ್ಲ. ಸರಕಾರ ಈಗ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೀಡುವಾಗ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್‌ ಒಂದನ್ನೇ ಪರಿಗಣಿಸಬೇಕು, ಉಳಿದ ದಾಖಲೆಗಳಿಗಾಗಿ ಒತ್ತಡ ಹೇರಬಾರದೆಂಬ ಹೊಸ ನಿಯಮ ಮಾಡಿದ್ದರಿಂದ ಕಳೆದೆರಡು ವಾರಗಳಿಂದ ಕಾರ್ಡ್‌ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇತರ ಜಿಲ್ಲೆಗಳ ಪ್ರಗತಿ ಇಂತಿದೆ
ಉತ್ತರಕನ್ನಡ ಜಿಲ್ಲೆ ಶೇ. 42, ಮಂಡ್ಯ ಶೇ. 40, ಶಿವಮೊಗ್ಗ ಶೇ. 39, ದಕ್ಷಿಣ ಕನ್ನಡ ಶೇ. 37, ಹಾಸನ ಶೇ. 33, ರಾಮನಗರ ಶೇ. 33, ಬೆಂಗಳೂರು ಗ್ರಾಮಾಂತರ ಶೇ. 27, ಚಾಮರಾಜನಗರ ಶೇ.25, ಮೈಸೂರು ಶೇ.23, ಬೆಳಗಾವಿ ಶೇ. 20, ಚಿತ್ರದುರ್ಗ ಶೇ. 20, ತುಮಕೂರು ಶೇ. 20, ಧಾರವಾಡ ಶೇ. 19, ಬಾಗಲಕೋಟೆ ಶೇ. 18, ದಾವಣಗೆರೆ ಶೇ. 18, ಹಾವೇರಿ ಶೇ. 17, ಯಾದಗಿರಿ ಶೇ. 17, ಕೊಪ್ಪಳ ಶೇ. 17, ಚಿಕ್ಕಬಳ್ಳಾಪುರ ಶೇ. 17, ಬೀದರ್‌ ಶೇ. 17, ಗದಗ ಶೇ. 16, ವಿಜಯಪುರ ಶೇ. 16, ಕೋಲಾರ ಶೇ. 15, ಕಲಬುರಗಿ ಶೇ. 14, ಬಳ್ಳಾರಿ ಶೇ. 12, ಬೆಂಗಳೂರು ನಗರ ಶೇ. 12, ರಾಯಚೂರು ಶೇ. 10.

ಇದನ್ನೂ ಓದಿ:ಝೊಮ್ಯಾಟೊದಲ್ಲಿ ಕೋಟಿ ಮೋಮೋಸ್‌ ಆರ್ಡರ್‌; ಭಾರತದಲ್ಲಿ ಬಿರಿಯಾನಿಗೇ ಫ‌ಸ್ಟ್‌ ಪ್ಲೇಸ್‌

Advertisement

ಆರೋಗ್ಯ ಇಲಾಖೆ ಅಂಕಿ-ಅಂಶದ ಪ್ರಕಾರ ರಾಜ್ಯದ ಒಟ್ಟು ಏಳು ಕೋಟಿಯಷ್ಟು (2020ಕ್ಕೆ ಆಧರಿಸಿ) ಜನಸಂಖ್ಯೆಯಲ್ಲಿ ಕೇವಲ ಒಂದೂವರೆ ಕೋಟಿಯಷ್ಟು ಜನ ಮಾತ್ರ ಆರೋಗ್ಯ ಕಾರ್ಡ್‌ ಪಡೆದಿದ್ದು, ಶೇ. 21ರಷ್ಟು ಮಾತ್ರ ಪ್ರಗತಿಯಾಗಿದೆ. ಆರೋಗ್ಯ ಇಲಾಖೆ ಒಟ್ಟು ಜನಸಂಖ್ಯೆಯನ್ನು ಆಧರಿಸಿ ಕಾರ್ಡ್‌ಗಳ ಪ್ರಗತಿ ಉಲ್ಲೇಖೀಸಿದ್ದು, ರಾಜ್ಯದ ಬಿಪಿಎಲ್‌ ಕುಟುಂಬದವರನ್ನಷ್ಟೇ ಪರಿಗಣಿಸಿ ಲೆಕ್ಕ ಹಾಕಿದರೆ ರಾಜ್ಯದಲ್ಲಿ ಎಬಿ-ಎಆರ್‌ಕೆ ಕಾರ್ಡ್‌ ಮಾಡಿಸಿಕೊಂಡವರ ಪ್ರಮಾಣ ಸರಾಸರಿ ಶೇ. 40 ಮೀರುವುದಿಲ್ಲ. ಆದರೆ ಈಗ ತುರ್ತು ಸಂದರ್ಭ ಯಾವುದೇ ವಿಳಂಬವಿಲ್ಲದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವಂತಾಗಲು ಸರಕಾರ, ಎಬಿ-ಎಆರ್‌ಕೆ ಕಾರ್ಡ್‌ ಒಂದನ್ನೇ ದಾಖಲೆಯಾಗಿ ಪಡೆಯಬೇಕು ಎಂಬ ನಿಯಮ ಮಾಡಿದ್ದರಿಂದ ಕಾರ್ಡ್‌ ನೋಂದಣಿಯಲ್ಲಿ ಚೇತರಿಕೆ ಕಂಡುಬಂದಿದೆ.

ಜಿಲ್ಲಾವಾರು ಪ್ರಗತಿ
ಆರೋಗ್ಯ ಇಲಾಖೆ (ಡಿಸೆಂಬರ್‌ 16ವರೆಗಿನ) ಮಾಹಿತಿ ಪ್ರಕಾರ ಎಬಿಎಆರ್‌ಕೆ ಕಾರ್ಡ್‌ ಮಾಡಿಸುವಲ್ಲಿ ಉಡುಪಿ ಜಿಲ್ಲೆ ಶೇ. 65ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೊಡಗು ಜಿಲ್ಲೆ ಶೇ. 58, ಚಿಕ್ಕಮಗಳೂರು ಜಿಲ್ಲೆ ಶೇ. 43ರಷ್ಟು ಜನ ಎಬಿಎಆರ್‌ಕೆ ಕಾರ್ಡ್‌ ಮಾಡಿಕೊಂಡಿದ್ದು, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ರಾಯಚೂರು, ಬೆಂಗಳೂರು ನಗರ ಹಾಗೂ ಬಳ್ಳಾರಿ ಜಿಲ್ಲೆಗಳು ಕಾರ್ಡ್‌ ನೋಂದಣಿಯಲ್ಲಿ ಕೊನೆಯ ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next