ಬೆಳಗ್ಗೆದ್ದರೆ ಮನೆಕೆಲಸ, ಮಕ್ಕಳ ಕಿರಿಕಿರಿ, ಗಂಡನ ಗಡಿಬಿಡಿ, ಆಫೀಸಿನಲ್ಲಿ ಬಾಸ್ ಕೊಡುವ ಟಾಸ್ಕ್ಗಳು. ಇವನ್ನೆಲ್ಲ ಮುಗಿಸಿ ಮತ್ತೆ ಸಂಜೆ ಬಂದಾಗ ಅದೇ ಮನೆಗೆಲಸ… ಔದ್ಯೋಗಿಕ ಮಹಿಳೆಯ ಒತ್ತಡದ ಬದುಕು ಅನೇಕ ಸಲ ತಲೆಚಿಟ್ಟು ಹಿಡಿಸುವಂತೆ ಮಾಡುತ್ತದೆ. ತಲೆನೋವನ್ನು ಸೃಷ್ಟಿಸುತ್ತದೆ. ಆಗಿಂದಾಗ್ಗೆ ಬರುವ ಈ ತಲೆನೋವನ್ನು ಸುಲಭದಲ್ಲಿ ಓಡಿಸುವುದು ಹೇಗೆ? ಹತ್ತೇ ನಿಮಿಷದಲ್ಲಿ ಮೊದಲಿನಂತಾಗುವುದು ಹೇಗೆ?
-ಮೂರ್ನಾಲ್ಕು ಹನಿ ಲವಂಗದ ಎಣ್ಣೆಗೆ, ಒಂದೂವರೆ ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿಕೊಂಡು, ಹಣೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಹತ್ತೇ ನಿಮಿಷದಲ್ಲಿ ತಲೆನೋವು ಓಡಿಹೋಗುತ್ತದೆ.
-ಅಡಿಕೆ-ವೀಳ್ಯದೆಲೆಯನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ, ಅದನ್ನು ಹಣೆಗೆ ಹಚ್ಚಿಕೊಂಡರೆ, ಆರಾಮದಾಯಕ ಅನುಭವವಾಗುತ್ತದೆ. ವಿಕ್ಸ್ , ಝಂಡೂಬಾಮ್‌ನಂತೆ ತಲೆನೋವನ್ನು ಹೀರಿಕೊಳ್ಳುವ ಶಕ್ತಿ ಈ ಪೇಸ್ಟ್‌ಗಿರುತ್ತದೆ.
-ಎರಡು ಹನಿ ಪುದೀನ ಎಣ್ಣೆಗೆ, ತುಸು ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ, ಹಣೆಗೆ ಚೆನ್ನಾಗಿ ಹಚ್ಚಿಕೊಂಡರೆ ರಿಲ್ಯಾಕ್ಸ್ ಸಿಗುತ್ತದೆ. ತಲೆ ಹಗುರವಾದಂತೆ ಅನ್ನಿಸುತ್ತದೆ.
-ತುಳಸಿ ಎಲೆಗಳನ್ನು ಚೆನ್ನಾಗಿ ಕುದಿಸಿ, ಆ ನೀರಿಗೆ ಜೇನುತುಪ್ಪ ಬೆರೆಸಿ, ಕುಡಿದರೆ ಮೆದುಳಿಗೆ ರಕ್ತಸಂಚಾರ ಸುಗಮಗೊಂಡು, ತಲೆನೋವು ನಿವಾರಣೆಯಾಗುತ್ತದೆ.
-ನಿಶ್ಶಬ್ದ ಜಾಗದಲ್ಲಿ ಕುಳಿತು, ಹತ್ತಿಪ್ಪತ್ತು ನಿಮಿಷ “ಕೋಳಿನಿದ್ರೆ’ ಮಾಡಿದರೂ ತಲೆನೋವು ನಿವಾರಣೆಯಾಗುತ್ತದೆ.