Advertisement
ಈ ಬಾರಿಯ ಬರಹವು ಮುತ್ತುಗಳ ಬಗ್ಗೆ. ಕೇವಲ ನುಡಿಮುತ್ತುಗಳ ಬಗ್ಗೆ ಮಾತ್ರ. ನುಡಿಮುತ್ತುಗಳನ್ನು ಸುಮ್ಮನೆ ಹಂಚಲಾಗದು. ಹಾಗಾಗಿ ಕಿವಿಯಲ್ಲೇ ಹೇಳುತ್ತೇನೆ. ಕಿವಿಯಲ್ಲಿ ಎಂದರೆ ಇವು ನುಡಿಮುತ್ತುಗಳೋ? ಅಥವಾ ಕಿವಿಮಾತುಗಳೋ?
Related Articles
Advertisement
ಕೆಲವೊಮ್ಮೆ podcast, ಹಲವೊಮ್ಮೆ ಮೀಟಿಂಗ್ಸ್, ಇನ್ನು ಕೆಲವೊಮ್ಮೆ Online trainings ಇತ್ಯಾದಿ ಸನ್ನಿವೇಶಗಳಲ್ಲೂ Earphone ಅಥವಾ Headphoneಗಳನ್ನೂ ಬಳಸಲಾಗುತ್ತದೆ. ಹಾಡು ಅಥವಾ ಮಾತುಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲೂ Earphone ಅನ್ನು ಬಳಸಲಾಗುತ್ತದೆ. ಒಂದಷ್ಟು ಸನ್ನಿವೇಶಗಳ ಬಗೆಗಿನ ಕಿವಿಮಾತುಗಳನ್ನು ಎರಡೂ ಕಿವಿಗಳಿಂದ ಸಾಗಿ ಬಹುಷಃ ಸೀದಾ ಮೇಲೇರಿ ಬುದ್ಧಿಯಲ್ಲಿ ಸೇರುವ ಅಥವಾ ಕಿವಿಗಳಿಂದ ಕೊಂಚ ಕೆಳಕ್ಕಿಳಿದು ನೇರವಾಗಿ ಹೃದಯದೊಳಗೆ ಇಳಿಸುವ ಯತ್ನ ಮಾಡುವಾ. ಹಾಗಾಗಿ ಕೇಳ್ರಪ್ಪೋ ಕೇಳ್ರೀ, ಇಯರ್ ಫೋನ್ ಅಥವಾ ಹೆಡ್ ಫೋನ್ ನುಡಿ ಮಾತುಗಳನ್ನ ಕೇಳ್ರೀ !!
1. ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವಾಗ ಕನಿಷ್ಟ ಪಕ್ಷ ಎರಡು ಘಂಟೆಗೊಮ್ಮೆ ಎದ್ದು ಕಾಲುಗಳ ಝಾಡಿಸಿ. ಗೆದ್ದಲು ಹಿಡಿದಿದ್ದರೆ ಉದುರೀತು. ಜೇಡ ತನ್ನ ಬಲೆ ಕಟ್ಟಿದ್ರೆ ಬೇರೆಡೆ ಹೊರಟೀತು. ವೆಬ್ ನೋಡ್ತಾ ಕೂತಿರುವ ಜನರಿಗೆ ಜೇಡ ವೆಬ್ ಕಟ್ಟಿದ್ರೂ ಗೊತ್ತಾಗೋಲ್ಲ !ಅಂತರಾತ್ಮದ ಮಾತು ಏನಪ್ಪಾ ಅಂದ್ರೆ ಕಾಲು ಝಾಡಿಸುವಾಗ ರಕ್ತಸಂಚಾರ ಉಂಟಾಗಿ ಜೋಮು ಹಿಡಿಯುವ ಸಂಭವನೀಯತೆ ಕಡಿಮೆಯಾಗುತ್ತದೆ. ಸಂಚಾರ ನಿಂತಾಗಲೇ ಬೇಡದ್ದು ಗೂಡು ಕಟ್ಟೋದು. ಜೋಮು ಬೇಡದ್ದು. ಒಲ್ಲದ್ದನ್ನು ಝಾಡಿಸಿ ತೆಗೆಯುವುದು ಉತ್ತಮ. ಕಚೇರಿಗಳಲ್ಲಿ, ನೀವು ಒಪ್ಪವಾಗಿದ್ದರೂ ಅನ್ನದಾತರಿಗೆ ನೀವು ಒಲ್ಲದವರಾದರೆ ಅವರೇ ಝಾಡಿಸುತ್ತಾರೆ! ನೀವಾಗ ಉದುರಲೇಬೇಕು. ಗೆದ್ದಲು ಹಿಡಿಯುವುದು ಯಾವಾಗ ಎಂದರೆ ಬಳಕೆಯಾಗದ ಸ್ಥಳದಲ್ಲಿ. ತಲೆಯು ಬೇಡದ ಗೂಡಾಗದಿರಲಿ. ಅಲ್ಲಿ ಕಟ್ಟುವ ಗೂಡಿನಲ್ಲಿ ಒಳಿತು ಬಂದು ಕೂರದು. ಜೇಡ ಬಲೆ ಕಟ್ಟಿದರೆ ಅಲ್ಲಿ ಸೇರೋದು ಬರೀ ಕೀಟಗಳೇ ತಾನೇ? ಹಾಗೆಯೇ ಇದೂ ಸಹ. 2. ತಗ್ಗಿ ಬಗ್ಗಿ ನೆಡೆದರೂ ಹುಷಾರಾಗಿ ನೆಡೀಬೇಕು. ದೇವನ ಮುಂದೆ ಬಾಗದ ತಲೆ ಕ್ಷೌರಿಕನಿಗೆ ಬಾಗುತ್ತೆ. ಕ್ಷೌರಕ್ಕೂ ಬಾಗದ ತಲೆ ಹೆಂಡತಿಗೆ ಬಾಗುತ್ತೆ. ಹೀಗೂ ಬಾಗದ ತಲೆ, ಸ್ಮಾರ್ಟ್ ಫೋನ್ ಮುಂದೆ ಖಂಡಿತ ಬಾಗಿಯೇ ಬಾಗುತ್ತೆ !
ಅಂತರಾತ್ಮದ ಮಾತು ಏನಂದ್ರೆ, ತಲೆ ಬಾಗುವುದು ತಪ್ಪೇನಿಲ್ಲ. ತಲೆ ಬಾಗಿಸದೇ ಇದ್ದಲ್ಲಿ ತಲೆ ಹಾಗೇ ಗಟ್ಟಿಯಾಗಿ ನಿಂತುಬಿಡಬಹುದು. ಕುತ್ತಿಗೆಯ ನರ ಸೆಟೆದು ನಿಂತೀತು. ಇದೇ ಸನ್ನಿವೇಶವು ಕೆಲಸವನ್ನೇ ಮಾಡದ ಕೈಕಾಲುಗಳಿಗೂ ಅನ್ವಯ. ಓಡದ ಬುದ್ಧಿಗೂ ಇದು ಅನ್ವಯಿಸಬಹುದು. ಪುಸ್ತಕ ಓದುವಾಗ, ದಿನಪತ್ರಿಕೆ ಓದುವಾಗ, ವಾರಪತ್ರಿಕೆಗಳನ್ನು ಓದುವಾಗ ಹೀಗೆ ಎಲ್ಲ ಸಂದರ್ಭಗಳಲ್ಲೂ ತಾಳೆ ಬಾಗಿಸುವುದೇ ಆಗಿರುವಾಗ ಮೊಬೈಲ್ ಮುಂದೆ ತಲೆ ಬಾಗುವುದು ಎಂದ ಕೂಡಲೇ ತಪ್ಪು ಎಂದೇಕೆ ಅನ್ನುತ್ತಾರೋ? ತಲೆಬಾಗಿಸುವುದು ಶರಣಾಗತಿಗೂ ಆಗಬಹುದು, ಭಕ್ತಿಪೂರ್ವಕವಾಗಿಯೂ ಇರಬಹುದು, ಗೌರವ ಸೂಚಕವೂ ಆಗಬಹುದು. ತಲೆ ಬಾಗಿಸುವುದೇ ಆಗಿದ್ದಲ್ಲಿ ಸೂಕ್ತ ಆಯ್ಕೆ ಮಾಡಿ. 3. ಬಾಗಿದರೆ ಬೆನ್ನು ತುಳೀತಾರೆ, ಬಿದ್ದರೆ ಹೊಸಕಿ ಹಾಕುತ್ತಾರೆ.
ನಿಮ್ಮ ಮೊಬೈಲ್ ಕೆಳಗೇನಾದರೂ ಬಿದ್ದರೆ ಅದನ್ನೆತ್ತಿಕೊಳ್ಳುವ ಮುನ್ನ ಆಚೆ ಈಚೆ ಒಮ್ಮೆ ನೋಡಿ. ನಿಮ್ಮ ಡೇಟಾ ಅಥವಾ ಮೊಬೈಲಿನಲ್ಲಿ ಶೇಖರಣೆಯಾಗಿರುವ ಚಿತ್ರಗಳು ಚೆಲ್ಲಾ ಪಿಲ್ಲಿಯಾಗಿರಬಹುದು ಅಂತಲ್ಲಾ ಹೇಳಿದ್ದು. ಮೆಸೇಜ್ ಮಾಡಿಕೊಂಡೇ ನೆಡೆದಾಡೋ ಭೂತಗಳು, ಮೊಬೈಲಲ್ಲಿ ಮಾತನಾಡಿಕೊಂಡೇ ಓಡಾಡುವ ಚರಜೀವಿಗಳು ಇರುತ್ತಾರೆ. ಈ ಎರಡೂ ಪಂಗಡಕ್ಕೂ ಸುತ್ತಲ ಅರಿವಿರುವುದಿಲ್ಲ. ಫೋನೆತ್ತಿಕೊಳ್ಳಲು ಬಾಗಿದ ನಿಮ್ಮ ಬೆನ್ನನ್ನು ತುಳಿಯಬಹುದು ಅಥವಾ ಬಲಿಯನ್ನು ಪಾತಾಳಕ್ಕೆ ಒತ್ತಿದಂತೆ ನಿಮ್ಮ ತಲೆಯನ್ನೇ ಒತ್ತಿಬಿಡಬಹುದು. ಹೀಗೂ ಅಲ್ಲದೇ, ಕೆಳಕ್ಕೆ ಬಾಗಿದ ನಿಮ್ಮನ್ನು ಎಡವಿ ತಾವು ಬಿದ್ದು ತಮ್ಮ ಮೊಬೈಲ್ ಬೀಳಿಸಿಕೊಂಡದಲ್ಲಿ ನಿಮ್ಮನ್ನೇ ತದುಕಿದರೆ ಕಷ್ಟ. 4. ಟೆಕ್ಕಿ ಜನರೇ, ಕಷ್ಟಪಟ್ಟು ಕೆಲಸವನ್ನು, ಮಾಡಬೇಡಿ. ಇಷ್ಟಪಟ್ಟು, ಜಾಣ್ಮೆಯಿಂದ ಕೆಲಸ ಮಾಡಿ !
ನೀವೇನೂ ಬಾವಿ ತೆಗೆಯಲು ಮಣ್ಣು ಅಗೆಯುತ್ತಿಲ್ಲ, ಮೀನುಗಳ ಮಾರುಕಟ್ಟೆಯಲ್ಲಿ ಮಲಗಿಲ್ಲ. ಕೂತಿರೋದು ಎಸಿ ರೂಮಿನಲ್ಲಿ. ಇಪ್ಪತ್ತನಾಲ್ಕು ಘಂಟೆ ಸತತವಾಗಿ ದುಡಿದರೂ ಒಂದು ಹನಿ ಬೆವರು ಕಾಣಿಸೋಲ್ಲ. ಹೀಗಿದ್ದ ಮೇಲೆ ಕಷ್ಟ ಎಲ್ಲಿಂದ ಬಂತು? ದಿನ ಬೆಳಗಾದರೆ ಬರೋ ಸಂಕಟಗಳನ್ನ ಜಾಣ್ಮೆಯಿಂದ ಎದುರಿಸಿ. ಕೆಲಸವನ್ನು ಇಷ್ಟಪಟ್ಟು ಮಾಡಿ. 5. ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಸರ್ವಕಾಲಿಕ ಶ್ರೇಷ್ಠ ಮಾತು.
ನೀವು ಒಂದು ಕಟ್ಟಡದ Basementನಲ್ಲಿ ಕಾರು ಪಾರ್ಕ್ ಮಾಡಿ, ಲಿಫ್ಟ್ ನಲ್ಲಿ ಎಷ್ಟನೆಯದೋ ಮಹಡಿಯ ನಿಮ್ಮ ಕಚೇರಿಗೆ ತಲುಪಿದರೂ ಸಂಜೆಗೆ ಕೆಳಗೆ ಬರಲೇಬೇಕು. . Flightನಲ್ಲೇ ಪ್ರಾಣ ಹೋದರೂ ನೇರವಾಗಿ ಅಲ್ಲಿಂದಲೇ ಸ್ವರ್ಗಕ್ಕೆ ಹೋಗೋದಿಲ್ಲ. ಮೂರು ಮಹಡಿ ಮೇಲೆ ಕಾರು ನಿಲ್ಲಿಸಿದ್ದರೂ ಬೀದಿಗೆ ಬರೋ ಸಮಯ ಬಂದಾಗ ಕಾರು, ಕಾಲು ಎಲ್ಲ ಕೆಳಗೆ ಇಳಿದೇ ಇಳಿಯುತ್ತೆ. ಸದಾಕಾಲ ಮೇಲೇ ಇರಲು ಸಾಧ್ಯವಿಲ್ಲ ! ಇವು ನನ್ನ ಅಂತರಾತ್ಮದ ಪಿಸು ಮಾತುಗಳು ಅಷ್ಟೇ! ದಿನನಿತ್ಯದಲ್ಲಿ ಉತ್ತಮ ಜೀವನಕ್ಕಾಗಿ ಸೂತ್ರಗಳು ಎಂಬಂತೆ ಹರಿದಾಡುವ ನುಡಿಗಳಂತೆ ಈ ನುಡಿಗಳು ನನ್ನವು. ಸದ್ಯಕ್ಕೆ ಒಂದೈದು ಮಾತುಗಳನ್ನು ಇಟ್ಟುಕೊಂಡಿರಿ. ಇಷ್ಟವಾದಲ್ಲಿ ಮತ್ತಷ್ಟು ಕಿವಿಮಾತುಗಳನ್ನು ಮುಂದೆ ಹೇಳ್ತೀನಿ…