Advertisement
ಅದಕ್ಕೆ ಕಾರಣವೂ ಇದೆ. ಧನಂಜಯ್ ಲಾಂಚ್ ಆಗಿದ್ದು, ಗುರುಪ್ರಸಾದ್ ಅವರ “ಡೈರೆಕ್ಟರ್ ಸ್ಪೆಷಲ್’ ಚಿತ್ರದಿಂದ. ಆ ನಂತರ ಗುರುಪ್ರಸಾದ್ ಅವರ “ಎರಡನೇ ಸಲ’ ಚಿತ್ರದ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಗುರುಪ್ರಸಾದ್, ಧನಂಜಯ್ ಅವರನ್ನು “ಗುರುದ್ರೋಹಿ’ ಎಂದು ಕರೆದಿದ್ದು, ಅದಕ್ಕೆ ಧನಂಜಯ್ ಕೂಡಾ ಪ್ರತ್ಯುತ್ತರ ಕೊಟ್ಟಿದ್ದು ನಿಮಗೆ ನೆನಪಿರಬಹುದು.
Related Articles
Advertisement
ಹೀರೋ ಹನಿಮೂನ್ ಮುಗಿದ ಬಳಿಕ ಚಿತ್ರೀಕರಣ: ನಿರ್ದೇಶಕ ಗುರುಪ್ರಸಾದ್ “ಅದೇಮಾ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಈ ಸಿನಿಮಾವನ್ನು ಡಿಸೆಂಬರ್ ಒಳಗೆ ಮುಗಿಸುವುದಾಗಿ ಹೇಳಿಕೊಂಡಿದ್ದರು. ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರ ತಡವಾಗುವುದಿಲ್ಲ ಎಂಬ ಭರವಸೆಯನ್ನೂ ಕೊಟ್ಟಿದ್ದರು. ಆದರೆ, ಡಿಸೆಂಬರ್ ಹೋಗಿ ಈಗ ಮಾರ್ಚ್ ಬಂದಿದೆ.
ಈ ಕುರಿತು ಮಾತನಾಡುವ ಅವರು, “ಚಿತ್ರೀಕರಣ ಆರಂಭವಾಗಿದ್ದು, ಶೇ 30 ರಷ್ಟು ಮುಗಿದಿದೆ. ನಾನು ಡಿಸೆಂಬರ್‌ನಲ್ಲಿ ಸಿನಿಮಾ ಮುಗಿಸಬೇಕೆಂದುಕೊಂಡಿದ್ದು ನಿಜ. ಆದರೆ, ಬರವಣಿಗೆ ಸೇರಿದಂತೆ ಇತರ ಅಂಶಗಳಿಂದ ತಡವಾಯಿತು. ಈಗ ನಮ್ಮ ಹೀರೋ ಮದುವೆಯಾಗಿದ್ದಾರೆ. ಅವರು ಹನಿಮೂನ್ ಮುಗಿಸಿಕೊಂಡು ಬಂದು ಈ ತಿಂಗಳ ಕೊನೆಯಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಆರಂಭದಲ್ಲಿ ಚಿತ್ರದ ಕಲಾವಿದರ ಆಯ್ಕೆಯಲ್ಲೂ ಸ್ವಲ್ಪ ಸಮಯ ಹಿಡಿಯಿತು. ಈಗ ಚಿತ್ರಕ್ಕೆ ಚೈತ್ರಾ ಎಂಬಾಕೆ ನಾಯಕಿಯಾಗಿದ್ದಾಳೆ. ಇನ್ನು, ಜನವರಿಯಲ್ಲಿ ನನ್ನ ತಂದೆ ತೀರಿಕೊಂಡರು. ಹಾಗಾಗಿ, ಒಂದೂವರೆ ತಿಂಗಳು ಚಿತ್ರೀಕರಣ ಮಾಡಲು ಸಾಧ್ಯವಾಗಲಿಲ್ಲ. ರಾತ್ರಿ ವೇಳೆ ಚಿತ್ರೀಕರಣ ಹೆಚ್ಚಿರುವುದರಿಂದಲೂ ಸಿನಿಮಾ ತಡವಾಗುತ್ತಿದೆ’ ಎನ್ನುತ್ತಾರೆ ಗುರುಪ್ರಸಾದ್.
“ಡೈರೆಕ್ಟರ್ ಸ್ಪೆಷಲ್’ ಸಿನಿಮಾದ ಕಥೆ ಇದಾಗಬೇಕಿತ್ತು: ಸಾಮಾನ್ಯವಾಗಿ ಗುರುಪ್ರಸಾದ್ ಸಿನಿಮಾ ಒಂದು ಮನೆಯೊಳಗೆ ನಡೆಯುತ್ತದೆ. ಔಟ್‌ಡೋರ್ ಚಿತ್ರೀಕರಣದಿಂದ ದೂರವೇ ಇದ್ದ ಗುರುಪ್ರಸಾದ್ ಈ ಬಾರಿ “ಅದೇಮಾ’ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಔಟ್‌ಡೋರ್‌ನಲ್ಲಿ ಮಾಡುತ್ತಿದ್ದಾರೆ. ಅದರಲ್ಲೂ ಸ್ಮಶಾನದಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.
“ಅದೇಮಾ ಒಂದು ಬ್ಯೂಟಿಫುಲ್ ಕಾನ್ಸೆಪ್ಟ್ ಸಿನಿಮಾ. ಸುಮಾರು ವರ್ಷಗಳಿಂದ ಈ ಕಥೆ ನನ್ನ ತಲೆಯಲ್ಲಿ ಓಡಾಡುತ್ತಿತ್ತು. ನಿಜ ಹೇಳಬೇಕೆಂದರೆ “ಡೈರೆಕ್ಟರ್ ಸ್ಪೆಷಲ್’ ಸಿನಿಮಾದ ಕಥೆ ಇದಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗ ಮಾಡಲಾಗಲಿಲ್ಲ. ಈ ಚಿತ್ರದ ಯಾವುದೇ ದೃಶ್ಯವನ್ನು ಊಹಿಸಿಕೊಳ್ಳಲಾಗುವುದಿಲ್ಲ. ಆ ತರಹದ ಒಂದು ಕಥೆ’ ಎಂದು “ಅದೇಮಾ’ ಬಗ್ಗೆ ಹೇಳುತ್ತಾರೆ.
ಬರವಣಿಗೆಗೆ ಸಮಯ ಹಿಡಿಯುತ್ತೆ: ಗುರುಪ್ರಸಾದ್ ಸಿನಿಮಾ ಆರಂಭಿಸಿ, ಆ ನಂತರ ರಿಯಾಲಿಟಿ ಶೋಗೆ ಹೋಗುತ್ತಾರೆ, ಸಿನಿಮಾ ಬೇಗ ಮುಗಿಸಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಅದಕ್ಕೂ ಗುರುಪ್ರಸಾದ್ ಉತ್ತರಿಸುತ್ತಾರೆ. “ರಿಯಾಲಿಟಿ ಶೋನಿಂದ ನನ್ನ ಸಿನಿಮಾಗಳಿಗೆ ಸಮಸ್ಯೆಯಾಗಿಲ್ಲ. ಅದು ವಾರದಲ್ಲಿ ಒಂದು ದಿನ ಇರುತ್ತದೆ. ವಾಹಿನಿಯವರು ನಮ್ಮ ಸಿನಿಮಾದ ಸ್ಯಾಟ್‌ಲೆಟ್ ತಗೋತ್ತಾರೆ.
ಅವರು ವರ್ಷಕ್ಕೊಂದು ರಿಯಾಲಿಟಿ ಶೋಗೆ ಕರೆದಾಗ ಇಲ್ಲ ಎನ್ನಲಾಗುವುದಿಲ್ಲ. ನನಗೆ ಸಮಯ ಹಿಡಿಯೋದು ಬರವಣಿಗೆಗೆ. ಬರವಣಿಗೆ ಪಕ್ಕಾ ಆಗದೇ ನಾನು ಸಿನಿಮಾ ಮಾಡೋದಿಲ್ಲ. ಬೇರೆಯವರ ಕೈಯಲ್ಲಿ ಬರೆಸಿದರೆ ನನ್ನ ಶೈಲಿ ಬರಲ್ಲ. ಆದರೂ, ಒಂದಷ್ಟು ಬೇಗ ಸಿನಿಮಾ ಮಾಡಬೇಕು, ನಾನೂ ಸ್ಪೀಡ್ ಆಗಬೇಕೆಂದು ನನ್ನ ಹುಡುಗರಿಗೆ ಕಥೆ ಹೇಳಿ ಸೀನ್ ಮಾಡಿಕೊಡುವಂತೆ ಹೇಳಿದೆ.
ಆದರೆ, ಅವರು ಮಾಡಿದ್ದು ತುಂಬಾ ಪೇಲವವಾಗಿ ಕಾಣಿಸಿತು. ಹಾಗೆ ಸಿನಿಮಾ ಮಾಡಿದರೆ ವರ್ಷದ ಕೊನೆಗೆ ಪ್ರೇಕ್ಷಕ ನನ್ನನ್ನು ಮರೆತು ಬಿಡುತ್ತಾನೆ. ರೀಮೇಕ್ ಸಿನಿಮಾವಾದರೆ ವರ್ಷಕ್ಕೆ ಮೂರು ಸಿನಿಮಾ ಮಾಡಿಕೊಡಬಲ್ಲೆ. ಆದರೆ, ನಾನು ರೀಮೇಕ್ ಮಾಡಲ್ಲ. ನನಗೆ ತೃಪ್ತಿಯಾಗುವವರೆಗೆ ಬರೆದು ಆ ನಂತರವೇ ನಾನು ಸಿನಿಮಾ ಮಾಡೋದು’ ಎಂದು ಸಿನಿಮಾ ತಡವಾಗುವ ಬಗ್ಗೆ ಮಾತನಾಡುತ್ತಾರೆ ಗುರುಪ್ರಸಾದ್.