ವಾಷಿಂಗ್ಟನ್: ಟ್ವಿಟರ್ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಶುಕ್ರವಾರ ವಜಾಗೊಳಿಸಿದ ಕಂಪನಿಯ ಶೇ.50ರಷ್ಟು ಉದ್ಯೋಗಿಗಳ ಪೈಕಿ 8 ತಿಂಗಳ ಗರ್ಭಿಣಿಯೊಬ್ಬರು ಸೇರಿದ್ದಾರೆ. ಉದ್ಯೋಗಿಗಳಿಗೆ ಬೇರೆ ಕಡೆ ಕೆಲಸ ಹುಡುಕಲು ಸಮಯವನ್ನೂ ಸಹ ಕೊಡಲಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ವರದಿಯ ಪ್ರಕಾರ, ಜ.4ರ ನಂತರವಷ್ಟೇ ವಜಾಗೊಂಡ ಉದ್ಯೋಗಿಗಳಿಗೆ ಕಂಪನಿಯು ಗುತ್ತಿಗೆ ವಜಾ ಪತ್ರ ನೀಡುತ್ತದೆ. ಇದು ಕಾರ್ಮಿಕರ ಕಾನೂನಿಗೆ ಒಳಪಡುತ್ತದೆ. ಆದರೆ ಅಲ್ಲಿಯವರೆಗೆ ದಾಖಲೆಗಳಲ್ಲಿ ಮಾತ್ರ ಇವರು ಉದ್ಯೋಗಿಗಳಾಗಿರುತ್ತಾರೆ. ಆದರೆ ಅವರು ಕಂಪನಿಯೊಂದಿಗೆ ಯಾವುದೇ ರೀತಿಯ ಸಂಪರ್ಕದಲ್ಲಿರುವುದಿಲ್ಲ ಮತ್ತು ಕೆಲಸವನ್ನೂ ಮಾಡುವುದಿಲ್ಲ ಎನ್ನಲಾಗಿದೆ.
ಮತ್ತೂಂದೆಡೆ, ಕಾರ್ಮಿಕರ ಕಾನೂನಿನ ಪ್ರಕಾರ, ಅವರ ಗುತ್ತಿಗೆ ಅವಧಿ ಮುಗಿಯುವವರೆಗೆ ಅವರಿಗೆ ತೆರಿಗೆ ಕಡಿತದೊಂದಿಗೆ ವೇತನ ಮತ್ತು ಇತರೆ ಸೌಲಭ್ಯಗಳು ದೊರೆಯಲಿದೆ ಎಂದು ಹೇಳಲಾಗಿದೆ.
ಸಮರ್ಥಿಸಿಕೊಂಡ ಮಸ್ಕ್:
“ಪ್ರತಿ ದಿನ ಕಂಪನಿಗೆ 4 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ. ಹಾಗಾಗಿ ಉದ್ಯೋಗಿಗಳ ಕಡಿತ ಅನಿವಾರ್ಯವಾಗಿದೆ. ಕಾನೂನಿನ ಪ್ರಕಾರ ಅವರಿಗೆ ಮೂರು ತಿಂಗಳ ವೇತನದ ಆಫರ್ ನೀಡಲಾಗಿದೆ,’ ಎಂದು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಸಮರ್ಥಿಸಿಕೊಂಡಿದ್ದಾರೆ. ಆದರೆ ಭಾರತದಲ್ಲಿರುವ ವಜಾಗೊಂಡ ಟ್ವಿಟರ್ ಉದ್ಯೋಗಿಗಳಿಗೆ ಮಾತ್ರ ಎರಡು ತಿಂಗಳ ವೇತನದ ಆಫರ್ ನೀಡಲಾಗಿದೆ. ಭಾರತದಲ್ಲಿ 200ಕ್ಕೂ ಹೆಚ್ಚು ಟ್ವಿಟರ್ ಉದ್ಯೋಗಿಗಳಿದ್ದಾರೆ. ಈ ಪೈಕಿ ಅನೇಕರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.
Related Articles
ಎಲಾನ್ ಮಸ್ಕ್ ಅವರು 44 ಮಿಲಿಯನ್ ಡಾಲರ್‌ಗೆ ಟ್ವಿಟರ್ ಕಂಪನಿಯನ್ನು ಖರೀದಿಸುವ ಮಾಹಿತಿ ತಿಳಿಯುತ್ತಿದ್ದಂತೆ ಅನೇಕ ಉದ್ಯೋಗಿಗಳು ಸ್ವತಃ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು. ಈಗ ಕಂಪನಿಯೇ ಶೇ.50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಎಂಟು ತಿಂಗಳ ಗರ್ಭಿಣಿಯೊಬ್ಬರನ್ನು ನಿದರ್ಯವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ. ಟ್ವಿಟರ್‌ನ ಕಂಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ರಾಚೆಲ್ ಬಾನ್ ಅವರನ್ನು ಉದ್ಯೋಗದಿಂದ ಕೈಬಿಡಲಾಗಿದೆ. ಅವರಿಗೆ 9 ತಿಂಗಳ ಮಗ ಕೂಡ ಇದ್ದಾನೆ.
ಜಾಹೀರಾತುಗಳ ಸಂಖ್ಯೆಯಲ್ಲಿ ಇಳಿಕೆ:
ಇನ್ನೊಂದೆಡೆ, ಟ್ವಿಟರ್‌ನ ದೃಢಪಡಿಸಿದ ಖಾತೆಗಳಿಗೆ ಬ್ಲೂಟಿಕ್ ಹೊಂದಲು ಮತ್ತು ಅದರ ಬಳಕೆಗಾಗಿ ಮಾಸಿಕ 8 ಡಾಲರ್ ಶುಲ್ಕ ವಿಧಿಸಿದ ನಂತರ ಅನೇಕ ಟ್ವಿಟರ್ ಬಳಕೆದಾರರು ಟ್ವಿಟರ್ ರೀತಿಯ ಬೇರೆ ಸಾಮಾಜಿಕ ಆ್ಯಪ್ ಬಳಕೆಗೆ ಮೊರೆ ಹೋಗುತ್ತಿದ್ದಾರೆ. ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವ ಅನೇಕ ಸೆಲೆಬ್ರಿಟಿಗಳು ಕೂಡ ಟ್ವಿಟರ್‌ನಿಂದ ದೂರ ಸರಿಯುತ್ತಿದ್ದಾರೆ. ಮತ್ತೂಂದೆಡೆ, ಟ್ವಿಟರ್‌ಗೆ ಹರಿದುಬರುತ್ತಿದ್ದ ಜಾಹೀರಾತುಗಳಲ್ಲಿ ಭಾರಿ ಕಡಿತವಾಗಿದೆ. ಸದ್ಯ ಟ್ವಿಟರ್ ನಷ್ಟ ಅನುಭವಿಸುತ್ತಿದೆ.