Advertisement

ಸಾಲ ತೀರಿಸಲು ತನ್ನ ತಲೆ ಮೇಲೆ ಟೊಮ್ಯಾಟೋ ಸಾಸ್‌ ಸುರಿದುಕೊಂಡು ಕಿಡ್ನ್ಯಾಪ್‌ ಕಥೆ ಕಟ್ಟಿದ

10:23 AM Mar 16, 2024 | Team Udayavani |

ಬೆಂಗಳೂರು: ಆನ್‌ಲೈನ್‌ ಜೂಜಾಟದ ಗೀಳಿಗೆ ಬಿದ್ದಿದ್ದ ಕಾಲೇಜಿನ ವಾರ್ಡನ್‌ವೊಬ್ಬ ಅಪಹರಣದ ಕಥೆ ಸೃಷ್ಟಿಸಿ, ಚಿಕ್ಕಮ್ಮ­ನಿಂದಲೇ ಸಾವಿರಾರು ರೂ. ಸುಲಿಗೆ ಮಾಡಿ ಇದೀಗ ತನ್ನ ಸಹಚರರ ಜತೆ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಹಾಸನ ಮೂಲದ ಜೀವನ್‌ (29) ಮತ್ತು ಆತನ ಸ್ನೇಹಿತರಾದ ವಿನಯ್‌(27), ಪೂರ್ಣೇಶ್‌ ಅಲಿಯಾಸ್‌ ಪ್ರೀತಮ್‌ (28), ರಾಜು (28) ಬಂಧಿ­ತರು. ಆರೋಪಿಗಳಿಂದ 1 ಬೈಕ್‌, 4 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಆರೋಪಿ ಜೀವನ್‌ ಚಿಕ್ಕಮ್ಮ ಸುನಂದ ಎಂಬುವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಕೇವಲ ಐದಾರು ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸ­ಲಾ­ಗಿದೆ ಎಂದು ಪೊಲೀಸರು ಹೇಳಿದರು.

ದೂರುದಾರೆ ಸುನಂದ ಬೊಮ್ಮನಹಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಅಪಹರಣದ ಕಥೆ ಸೃಷ್ಟಿಸಿದ ಆರೋಪಿ ಜೀವನ್‌, ಡಿಪ್ಲೋಮಾ ಇನ್‌ ವಾರ್ಡನ್‌ ವ್ಯಾಸಂಗ ಮಾಡಿದ್ದರಿಂದ ತಮ್ಮ ಕಾಲೇಜಿನಲ್ಲೇ ಆತನಿಗೆ ವಾರ್ಡನ್‌ ಕೆಲಸ ಕೊಡಿಸಿದ್ದರು. ಜತೆಗೆ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು.

ಈ ಮಧ್ಯೆ ಆರೋಪಿ ಆನ್‌ಲೈನ್‌ ಜೂಜಾಟ, ಗೇಮಿಂಗ್‌, ಇತರೆ ದುಶ್ಚಟಗಳ ದಾಸನಾಗಿದ್ದು. ಸಂಬಳದ ಹಣವನ್ನು ಆನ್‌ಲೈನ್‌ ಜೂಜಾಟಕ್ಕೆ ಹೂಡಿಕೆ ಮಾಡಿ ನಷ್ಟ ಹೊಂದಿದ್ದ. ಜತೆಗೆ ಸ್ನೇಹಿತರ ಬಳಿಯು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಚಿಕ್ಕಮ್ಮ ಜೀವನ್‌ಗೆ ಎಚ್ಚರಿಕೆ ನೀಡಿದ್ದರು. ಆದರೂ ಆರೋಪಿ ತನ್ನ ದುಶ್ಚಟಗಳಿಂದ ದೂರವಾಗಿರಲಿಲ್ಲ ಎಂದು ಪೊಲೀಸರು ಹೇಳಿದರು.

ಅಪಹರಣಕ್ಕೆ ಸಂಚು: ಆರೋಪಿ ಜೀವನ್‌ ಮಾದೇವ ಬುಕ್ಕಿ (ಗೋಲ್ಡ್‌-­369) ಎಂಬ ಆನ್‌ಲೈನ್‌ ಜೂಜಾಟದಲ್ಲಿ ಲಕ್ಷಾಂತರ ರೂ. ಕಳೆದುಕೊಂಡಿದ್ದ. ಮಾ.11ರಂದು, ಸಾಲದ ಹಣ ಕೊಡದಕ್ಕೆ ಕೆಲವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಚಿಕ್ಕಮ್ಮ ಸುನಂದಗೆ ಸುಳ್ಳು ಹೇಳಿ ಮನೆಯಲ್ಲಿದ್ದ 37 ಸಾವಿರ ರೂ. ಪಡೆದುಕೊಂಡು ಹೋಗಿದ್ದ. ಈ ಹಣವನ್ನೂ ಜೂಜಾಟದಲ್ಲಿ ಹೂಡಿಕೆ ಮಾಡಿ ನಷ್ಟ ಹೊಂದಿದ್ದಾನೆ.

Advertisement

ಮತ್ತೆ ಜೂಜು ಆಡಲು ಹಣ ಬೇಕಾಗಿ­ದ್ದರಿಂದ ತನ್ನ ಸ್ನೇಹಿತರನ್ನು ಬೊಮ್ಮನ­ಹಳ್ಳಿಯಲ್ಲಿರುವ ಬಾರ್‌ವೊಂದಕ್ಕೆ ಕರೆಸಿ­ಕೊಂಡಿದ್ದ. ಬಳಿಕ ನಾಲ್ವರು ಆರೋ­ ಪಿ­­ಗಳು ಅಪಹರಣದ ಸಂಚು ರೂಪಿಸಿ­ದ್ದಾರೆ. ಕೆಲ ಹೊತ್ತಿನ ಬಳಿಕ ಕೋಣೆ­ಯೊಂದರಲ್ಲಿ ಕೆಲವರು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿ­ಸಲು, ತನ್ನ ತಲೆಯ ಮೇಲೆ ಟೊಮ್ಯಾಟೋ ಸಾಸ್‌ ಚಿಲ್ಲಿಕೊಂಡು ಚಿಕ್ಕಮ್ಮನಿಗೆ ಫೋಟೋ ಕಳುಹಿಸಿದ್ದ. ಬಳಿಕ ಆತನ ಸ್ನೇಹಿತರ ಮೂಲಕ ಕರೆ ಮಾಡಿಸಿ, “ಕೂಡಲೇ 1 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಜೀವನ್‌ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿಸಿದ್ದ.

ಅದರಿಂದ ಹೆದರಿದ ಚಿಕ್ಕಮ್ಮ, ಕೂಡಲೇ ಜೀವನ್‌ನ ಫೋನ್‌ಪೇ ಖಾತೆಗೆ 20 ಸಾವಿರ ರೂ.ವರ್ಗಾಹಿ­ಸಿದ್ದರು.  ಮತ್ತೂಂದೆಡೆ ಪೊಲೀಸ್‌ ಠಾಣೆಗೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್‌ ಚಂದ್ರಶೇಖರ್‌ ಮತ್ತು ತಂಡ ಆನೇಕಲ್‌ ತಾಲೂಕಿನ ಜಿಗಣಿ ಬಳಿಯ ಎಸ್‌.ಬಿಂಗೀಪುರ ಗ್ರಾಮದ ಕೋಣೆಯೊಂದರಲ್ಲಿ ಮದ್ಯದ ಪಾರ್ಟಿ ಮಾಡುವಾಗ ಆರೋಪಿಗಳನ್ನು ಬಂಧಿಸಲಾಗಿದೆ ಆರೋಪಿಗಳು ಆನ್‌ಲೈನ್‌ ಜೂಜಾಟಕ್ಕೆ ಹಣ ಹೂಡಿಕೆ ಮಾಡಲು  ಅಪಹರಣದ ನಾಟಕವಾಡಿ­ದ್ದರು ಎಂಬುದು ಗೊತ್ತಾಗಿದೆ. ಇನ್ನು ಆರೋಪಿಗಳ ಪೈಕಿ ಜೀವನ್‌ ಕಾಲೇಜಿನಲ್ಲಿ ವಾರ್ಡನ್‌ ಆಗಿದ್ದರೆ, ಪ್ರೀತಮ್‌, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವಿನಯ್‌ ಮತ್ತು ರಾಜು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next