Advertisement
ಪ್ಯಾಟ್ರಿಕ್ ನನ್ನೆಡೆಗೆ ನೋಡುತ್ತಾ ನಿಮ್ಮನ್ನೇ ಕಾಯುತ್ತಿದೆ. ನೋಡಿ ನಿನ್ನೆ ರಾತ್ರಿಯಿಂದ ಇವ ಊಟವೇ ಮಾಡಿಲ್ಲ ಎನ್ನುತ್ತಾ ಕಿಸೆಯಿಂದ ತಿಂಡಿ ಪೊಟ್ಟಣ ತೆಗೆದು ನನ್ನ ಮಗಳ ಕೈಗಿತ್ತು “ನೀ ತಿನ್ನಿಸು. ಆಡುವ ಗುಂಗಿನಲ್ಲಿ ಸ್ವಲ್ಪ ತಿಂದರೂ ತಿನ್ನಬಹುದು’ ಎಂದ. ಮಗಳು ನಿಯತಿ ಒಂದು ಒಣ ಕಟ್ಟಿಗೆಯ ತುಂಡನ್ನು ಹಿಡಿದು ಬಾಬ್‌ನೊಂದಿಗೆ ಆಟವಾಡುತ್ತ ಅವನಿಗೆ ತಿಂಡಿ ತಿನ್ನಿಸಿದಳು. ಹದಿನೈದು ನಿಮಿಷದಲ್ಲಿ ಬಾಬ್ ಪೂರ್ತಿ ಪೊಟ್ಟಣ ತಿಂದು ಮುಗಿಸಿದ್ದನ್ನು ನೋಡಿ ಪ್ಯಾಟ್ರಿಕ್ ಮುಖದಲ್ಲಿ ಸಮಾಧಾನದ ನಗು ಹರಡಿತ್ತು.
Related Articles
Advertisement
ಕಳೆದ ವಾರ ನನಗೆ ಜ್ವರವಿತ್ತು, ಬಾಬ್ ನನ್ನ ಪಕ್ಕವೇ ಮಲಗಿದ್ದ. ನಾ ಕೆಮ್ಮಿದರು ಏಳುತ್ತಿದ್ದ. ಮಕ್ಕಳು ಹತ್ತಿರವಿಲ್ಲದಿದ್ದರೆ ಏನಾಯಿತು ಇವನಿದ್ದಾನಲ್ಲ ಎಂದು $ಪಾಟ್ರಿಕ್ ಹೇಳಿದಾಗ ನನಗೆ ಪಿಚ್ಚೆನಿಸುತ್ತದೆ. ಅವನು ಹೇಳುವುದು ಸುಳ್ಳಲ್ಲ ಎಂಬುದೂ ಆ ಏರಿಯಾದಲ್ಲಿರುವ ಎಲ್ಲರಿಗೂ ಗೊತ್ತು.
ಮನೆ ಹತ್ತಿರ ಒಂದು ವೃದ್ಧಾಶ್ರಮವಿದೆ. ಅಲ್ಲಿರುವ ಬಹುತೇಕ ಅಜ್ಜಿಯರಿಗೆ ಬಾಬ್ ಎಂದರೆ ಪ್ರಾಣ. ಅಲ್ಲಿ ಒಂದು ಅಜ್ಜಿ ಗಟ್ಟಿಮುಟ್ಟಾಗಿದ್ದಾಳೆ. ಬಾಬ್ ಸೀದಾ ಅವಳ ಮೇಲೆ ಮುದ್ದಿನಿಂದ ಜಿಗಿದು ಆಕೆಯ ಹೊಟ್ಟೆ ಮೇಲೆ ಕಾಲಿಟ್ಟು ನಿಂತು ತಲೆ ನೇವರಿಸಿಕೊಳ್ಳುತ್ತಾನೆ. ವೀಲ್‌ಚಯರ್ ಮೇಲೆ ಇರುವ ಅಜ್ಜಿಯ ಹತ್ತಿರ ವಿಧೇಯ ಮಗುವಿನಂತೆ ಅಕ್ಕ ಪಕ್ಕ ಸುತ್ತುತ್ತಾನೆ. ಹಾಸಿಗೆ ಹಿಡಿರುವ ಅಜ್ಜಿ ಯ ಬಳಿ ಹೋಗಿ ಅವರ ಮಂಚದ ಮೇಲೆ ಕಾಲಿಟ್ಟು ನಿಂತು ಮುದ್ದು ಮಾಡಿಸಿಕೊಂಡು ಬರುತ್ತಾನೆ. ಅದಕ್ಕೆ ಅವರು ಅವನಿಗೆ ತಿಂಡಿ ತರುವುದು, ಇವನಿಗೂ ಇದು ಅಭ್ಯಾಸವಾಗಿದೆ. ಯಾರು ಹೇಳಿದ್ದು ಪ್ರಾಣಿಗಳಿಗೆ ಸಭ್ಯತೆ ಇಲ್ಲ ಅಂತ! ನೋಡು ನನ್ನ ಹುಡುಗ ಎಷ್ಟು ಜಾಣ ಎಂದು ಹೆಮ್ಮೆಯಿಂದ ಬಾಬ್ ಕಡೆಗೆ ನೋಡುತ್ತಾನೆ. ಬಾಬ್ ಎಲ್ಲ ಅರ್ಥವಾದವರಂತೆ ಬಾಲ ಅಲ್ಲಾಡಿಸಿ ಕಣ್ಣರಳಿಸುತ್ತಾನೆ.
ಪ್ರತಿದಿನ ಭೇಟಿ ಬಾಬ್‌ನನ್ನು ಭೇಟಿ ಮಾಡುವುದು ಅಭ್ಯಾಸ ಆಗಿಬಿಟ್ಟಿತ್ತು. ಆ ದಿನ ನಿತ್ಯದ 10 ಆಟ ಮುಗಿಸಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಬಾಬ್ ವಿಚಿತ್ರ ಧ್ವನಿ ತೆಗೆದ. ಅವನಿಗೆ ನೀವು ಹೋಗ್ತೀನೆ ಅಂದಿದ್ದು ಇಷ್ಟವಾಗ್ತಿಲ್ಲ ಎಂದು ಪ್ಯಾಟ್ರಿಕ್ ನಗಲು ಶುರು ಮಾಡಿದ. ನನಗೂ ನಗು ಬಂದಿತ್ತು. ಮತ್ತೆ ಆ ದಿನ ಶುರುವಾದ ಈ ಅಳುವ ಕ್ರಮ ಈಗಲೂ ಜಾರಿಯಲ್ಲಿದೆ.
ಬಾಬ್ ಸ್ವಲ್ಪ ಚಟುವಟಿಕೆ ಕಡಿಮೆ ಮಾಡಿದರೂ ಸಾಕು, ಪ್ಯಾಟ್ರಿಕ್ ಅವನನ್ನು ಕರೆದುಕೊಂಡು ಟ್ರಿಪ್ ಹೊರಡುತ್ತಾನೆ. ಸಮುದ್ರ ತೀರದಲ್ಲಿ ಕ್ಯಾರಾವ್ಯಾನ್‌ನಲ್ಲಿ ತಿಂಗಳುಗಟ್ಟಲೆ ಉಳಿದು ಬರುತ್ತಾರೆ. ಬಂದ ಅನಂತರ ಬಾಬ್‌ನ ವೀರಗಾಥೆಗಳನ್ನು ಕಣ್ಣೆದುರೇ ನಡೆದಂತೆ ಬಣ್ಣಿಸುತ್ತಾನೆ.
ನಿಯತಿ ಕೂಡ ಒಂದು ನಾಯಿ ಮರಿ ಬೇಕು ಅಂತಾಳೆ. ಆದ್ರೆ ನಮಗೆ ಧೈರ್ಯ ಇಲ್ಲ ಎಂದಾಗ ಪಾಟ್ರಿಕ್ ಗಂಭೀರವಾಗಿ, ನಾವು ಮಕ್ಕಳನ್ನು ಬೆಳೆಸುತ್ತೇವೆ, ಕೇಳಿದ್ದೆಲ್ಲ ಕೊಡಿಸುತ್ತೇವೆ, ಅದಕ್ಕಾಗಿ ದಿನ ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತೇವೆ. ಒತ್ತಡದಲ್ಲಿ ಬದುಕುತ್ತೇವೆ. ಆದರೆ ಮಕ್ಕಳು ನಮ್ಮನ್ನು ಒಂಟಿಯಾಗಿ ಬಿಟ್ಟು ತಮ್ಮ ಕನಸುಗಳನ್ನ ಅರಸಿ ಹೊರಡುತ್ತಾರೆ ಅಥವಾ ಚಟಗಳಿಗೆ ಬಿದ್ದು ದಾರಿ ಹೆಣವಾಗಿ ಹೋಗ್ತಾರೆ. ಬಾಬ್ ನೋಡು ನಾನು ಬರುವುದನ್ನು ಎದುರು ನೋಡ್ತಾನೆ. ಸದಾ ಹಿಂದೆ ಮುಂದೆ ಓಡಾಡ್ತಾನೆ. ಎಲ್ಲಿದ್ದಾರೆ ನಾ ಬೆಳೆಸಿದ ನನ್ನ ಮಕ್ಕಳು ಎಂದು ಬೇಸರಿಸಿದ. ಒಂದು ಸಣ್ಣ ಮರಿಯನ್ನು ತಂದುಕೊಡಿ, ಅವಳ ಬಾಲ್ಯ ಇನ್ನು ಸುಂದರವಾಗುತ್ತದೆ ಎಂದು ಹೇಳಿ ಅವನೇನೋ ಸುಮ್ಮನಾದ. ಆದರೆ ನನ್ನ ತಲೆಯಲ್ಲಿ ಮಹಾಪೂರ ಹರಿಬಿಟ್ಟ. ನಾನು ಬಿಟ್ಟು ಬಂದಿರುವ ಅಪ್ಪ ಅಮ್ಮ, ಮನೆ ಮಗಳಾಗಿ ನನಗಿರುವ ಕರ್ತವ್ಯ. ಏನೇನೋ ತಲೆಯಲ್ಲಿ ಸುಳಿದಾಡಿತು. ನಮ್ಮ ತಂದೆ ತಾಯಿ ನಮ್ಮ ಬಗ್ಗೆ ಹೀಗೆ ಅಂದುಕೊಂಡರೆ, ನಾ ಅವರನ್ನು ಪ್ರೀತಿಸುವುದು ಸುಳ್ಳಲ್ಲ. ಆದರೆ ಜತೆಗಿರಲು ಆಗುವುದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತು ಹಿಡಿಯಿತು.
ಬಾಬ್ ಈಗಲೂ ನಮಗಾಗಿ ಕಾಯುತ್ತಾನೆ, ನಾವು ಅವನಿಗೆ ಕೊಡುವ ಬರೀ ಕೆಲವು ನಿಮಿಷದ ಬದಲು, ಬದುಕಿನ ಅತಿ ಸುಂದರ ಪಾಠ ಹೇಳಿಕೊಟ್ಟ ಜೀವಿ ಬಾಬ್ .
ದೇಶ ಬಿಟ್ಟು ದೇಶಕ್ಕೆ ಬಂದಿರುವ ನನಗೆ ಬರೀ ಮನುಷ್ಯ ಬಾಂಧವ್ಯಗಳಷ್ಟೇ ಅಲ್ಲ. ಕಾಲ ಕಾಲಕ್ಕೆ ಅರಳುವ ಹೂ, ಚಿಗುರಿ ಬರಿದಾಗಿ ಮತ್ತೆ ಹಸುರಾಗುವ ಮರಗಿಡಗಳು , ಹಕ್ಕಿ ಚಿಟ್ಟೆ ಮಾತು ಬಾರದ ಈ ಪ್ರಾಣಿಗಳೂ ಮನಸ್ಸನ್ನು , ಬದುಕನ್ನೂ ಬೆಚ್ಚಗಿಟ್ಟಿವೆ.
ಅಮಿತಾ ರವಿಕಿರಣ್, ಬೆಲ್‌ಫಾಸ್ಟ್,
ನಾರ್ದನ್ ಐರ್ಲೆಂಡ್