ಜೀ ಕನ್ನಡದಲ್ಲಿ ಪ್ರಸಾರವಾಗಿ, ಅತ್ಯಂತ ಯಶಸ್ವಿಯಾದ ಕಾರ್ಯಕ್ರಮವೆಂದರೆ ಅದು “ಡ್ರಾಮಾ ಜ್ಯೂನಿಯರ್’. “ನಾವು ಹುಟ್ಟಿರೋದೇ ಡ್ರಾಮಾ ಮಾಡೋಕೇ …’ ಅಂತ ರಾಗ ಎಳೆಯುತ್ತಾ ಬಂದ ಈ ಎಳೆಯರು, ಈಗ “ನಾವು ಹುಟ್ಟಿರೋದೇ ಸಿನಿಮಾ ಮಾಡೋಕೆ …’ ಎಂದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬಂದಿರುವುದು ನಟ ವಿಕ್ರಮ್ ಸೂರಿ. ಇದುವರೆಗೂ ಹಲವು ಧಾರಾವಾಹಿಗಳು ಮತ್ತು ಚಿತ್ರಗಳಲ್ಲಿ ನಟಿಸಿರುವ ವಿಕ್ರಮ್ ಸೂರಿ, ಇದೇ ಮೊದಲ ಬಾರಿಗೆ “ಎಳೆಯರು ನಾವು ಗೆಳೆಯರು’ ಎನ್ನುವ ಚಿತ್ರ ಮಾಡಿದ್ದಾರೆ ಮತ್ತು ಈ ಚಿತ್ರದ ಮೂಲಕ “ಡ್ರಾಮಾ ಜ್ಯೂನಿಯರ್’ ಕಾರ್ಯಕ್ರಮದ ಹತ್ತು ಪ್ರತಿಭಾವಂತ ಮಕ್ಕಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ವಿಕ್ರಮ್‌ರಿಂದಾಗಿ ಅಚಿಂತ್ಯ, ನಿಹಾಲ್, ಅಭಿಷೇಕ್, ಅಮೋಘ…, ಪುಟ್ಟರಾಜು, ತುಷಾರ್, ಮಹತಿ, ತೇಜಸ್ವಿನಿ, ಮಹೇಂದ್ರ ಮತ್ತು ಸೂರಜ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. “ಎಳೆಯರು ನಾವು ಗೆಳೆಯರು’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ. ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಅಂದಹಾಗೆ, “ಎಳೆಯರು ನಾವು ಗೆಳೆಯರು’ ಚಿತ್ರವನ್ನು ನಿರ್ಮಿಸಿರುವುದು ನಾಗರಾಜ್ ಗೋಪಾಲ್. ಅವರು ಆಕಾಶ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಹುಟ್ಟುಹಾಕಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆಯನ್ನೂ ರಚಿಸಿದ್ದಾರೆ. ಇನ್ನು ನಾಗರಾಜ್ ಅವರು ಬರೆದಿರುವ ಕಥೆಗೆ ಚಿತ್ರಕಥೆಯನ್ನು ರಚಿಸಿರುವುದು ರಿಚರ್ಡ್ ಲೂಯಿಸ್.
10 ಮಕ್ಕಳು ಶಾಲಾ ದಿನಗಳನ್ನು ಸಂತೋಷದಿಂದ ಕಳೆಯುತ್ತಿರುವ ಸಂದರ್ಭದಲ್ಲಿ ಒಂದು ಸಂದಿಗ್ಧ ಪರಿಸ್ಥಿತಿ ಮಕ್ಕಳಿಗೆ ಎದುರಾಗುತ್ತದೆ. ಆಗ ಆ ಮಕ್ಕಳು ಅದನ್ನು ಸವಾಲಾಗಿ ಸ್ವೀಕರಿಸಿ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಮುಂದಾಗುತ್ತಾರೆ. ಇಷ್ಟಕ್ಕೂ ಆ ಸಂದಿಗ್ಧ ಏನು ಮತ್ತು ಆ ಮಕ್ಕಳು ಅದನ್ನು ಹೇಗೆ ದಾಟುತ್ತಾರೆ ಎನ್ನುವುದು ಚಿತ್ರದ ಕಥೆಯಂತೆ. ಚಿತ್ರಕ್ಕೆ ಅಶೋಕ್ ರಾಮನ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಅವರ ಸಂಕಲನವಿದೆ.
ಚಿತ್ರಕ್ಕೆ ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಬಿ.ಆರ್. ಲಕ್ಷ್ಮಣ ರಾವ್, ಎಂ.ಎನ್. ವ್ಯಾಸರಾವ್, ಅರಸು ಅಂತಾರೆ ಸಾಹಿತ್ಯ ರಚಿಸಿದ್ದಾರೆ. ಇನ್ನು ಹಿರಿಯ ನೃತ್ಯ ನಿರ್ದೇಶಕರಾದ ಮದನ್-ಹರಿಣಿ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಮಕ್ಕಳ ಜೊತೆಗೆ ಶಂಕರ್ ಅಶ್ವತ್ಥ್, ಶ್ರೀಕಾಂತ್ ಹೆಬ್ಳೀಕರ್, ಹರಿಣಿ, ಪರಮೇಶ್, ವೆಂಕಟಾಚಲ, ಸಂಜಯ್ ಸೂರಿ ಮುಂತಾದವರು ನಟಿಸಿದ್ದಾರೆ.