ಹುಬ್ಬಳ್ಳಿ: ದೇಶದಲ್ಲಿ ಇದ್ದವರೇ ಅನೇಕರು ಮತದಾನದಿಂದ ದೂರ ಉಳಿಯುತ್ತಾರೆ. ಆದರೆ, ಮಂಗಳವಾರ ನಡೆದ 2ನೇ ಹಂತದ ಲೋಕಸಭಾ ಚುನಾವಣೆ ವೇಳೆ ಆಸ್ಟ್ರೇಲಿಯಾ, ನೈಜೀರಿಯಾ, ಚೀನಾ, ಇಟಲಿ ಇನ್ನಿತರ ಕಡೆ ವಾಸವಾಗಿದ್ದ ಅನೇಕರು ತಾಯ್ನಾಡಿಗೆ ಆಗಮಿಸಿ ಮತದಾನ ಕರ್ತವ್ಯ ನಿರ್ವಹಿಸಿ ಮಾದರಿಯಾಗಿದ್ದಾರೆ.
ಇಲ್ಲಿನ ಕೇಶ್ವಾಪುರದವರಾದ ನೈಜೀರಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವಾಸ ಕಬಾಡಿ ಹಾಗೂ ಶೀಲಾ ದಂಪತಿ ನಗರಕ್ಕೆ ಆಗಮಿಸಿ ಮತದಾನ ಮಾಡಿದರು. ವಿಶ್ವಾಸ ಕಬಾಡಿ ಮಾತನಾಡಿ, ದೇಶದಲ್ಲಿ ಚುನಾವಣೆ ಹಬ್ಬ ನಡೆಯುತ್ತಿದ್ದು, ವಿದೇಶದಲ್ಲಿರುವ ನಾವು ಮತದಾನ ಮಾಡುವ ಮೂಲಕ ನಮ್ಮ ಹಕ್ಕು ಚಲಾಯಿಸಲು ಆಗಮಿಸಿದ್ದೇವೆ ಎಂದರು.
ಇಟಲಿಯಲ್ಲಿ ಮಾಸ್ಟರ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ಪದ್ಮನಾಭ ಕಂಚಿಯವರು ಗೋಕುಲ ರಸ್ತೆ ಮಂಜುನಾಥ ನಗರ ಸರಕಾರಿ ಶಾಲೆಗೆ ಆಗಮಿಸಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಈ ದೇಶದ ಪ್ರಜೆಯಾಗಿರುವ ನಾನು, “ನನ್ನ ಮತ ನನ್ನ ಹಕ್ಕು’ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಮತ ಚಲಾವಣೆಗೆ ಆಗಮಿಸಿದ್ದೇನೆ ಎಂದರು.
ಆಸ್ಟ್ರೇಲಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ಬಮ್ಮಾಪುರ ಓಣಿ ನಿವಾಸಿ ವಿವೇಕ ಇಂಡಿ ಲೋಕಸಆಅ ಚುನಾವಣೆ ನಿಮಿತ್ತ ರಜೆ ಹಾಕಿ ಬಂದಿದ್ದು, “ಜನಪ್ರತಿನಿಧಿಯ ಆಯ್ಕೆ ಪ್ರತಿಯೊಬ್ಬರ ಹಕ್ಕು. ಈ ಹಕ್ಕು ಚಲಾವಣೆಗೆ ಆಗಮಿಸಿದ್ದೇನೆ’ ಎಂದರು. ಚೀನಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇಲ್ಲಿನ ಡಾಕಪ್ಪ ವೃತ್ತ ಬಳಿಯ ಅರಳಿಕಟ್ಟಿ ಓಣಿ ನಿವಾಸಿ ಪರಶುರಾಮ ಪಾಟೀಲ ಕೂಡ ಮಂಗಳವಾರ ತಮ್ಮ ಮತ ಚಲಾಯಿಸಿದರು.