Advertisement

ತಾನೇ ಬಂದು ಶರಣಾದ ಉದ್ಯಮಿ

01:07 PM Dec 03, 2017 | |

ಬೆಂಗಳೂರು: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ಸಿಸಿಬಿ ಪೊಲೀಸರೇ ಭಾಗಿಯಾಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ದೊರೆತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬನನ್ನು ಹೈಗ್ರೌಂಡ್ಸ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಯಲಹಂಕ ನಿವಾಸಿ ರಮೇಶ್‌ ರಾಜು (45) ಬಂಧಿತ ಉದ್ಯಮಿ. ರಮೇಶ್‌ ರಾಜು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ಜತೆಗೆ ಸಿಸಿಬಿ ಪೊಲೀಸರಿಗೆ ಮಾಹಿತಿದಾರನೂ ಆಗಿದ್ದ. ಅಲ್ಲದೆ ಪ್ರಸ್ತುತ ಪ್ರಕರಣದ ದೂರುದಾರ ಸುಬಾನು ಹಾಗೂ ಆರೋಪಿಗಳಿಗೂ ಪರಿಚಿತನಾಗಿದ್ದ ಎಂದು ತಿಳಿದು ಬಂದಿದೆ. ಇಡೀ ದಂಧೆಯಲ್ಲಿ ರಮೇಶ್‌ರಾಜು ಕೈವಾಡ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಆದರೆ, ನಾಪತ್ತೆಯಾಗಿರುವ ಸಿಸಿಬಿಯ ಮೂವರು ಸಿಬ್ಬಂದಿ ಪತ್ತೆಯಾಗುವವರೆಗೂ ಸ್ಪಷ್ಟತೆ ಸಿಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರುತ್ತಿದ್ದಂತೆ ಆರೋಪಿ ರಮೇಶ್‌ ರಾಜುಗೆ ಬಂಧನದ ಸೂಳಿವು ಸಿಕ್ಕಿತ್ತು. ಜತೆಗೆ ಭೀತಿ ಕೂಡ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ತನ್ನ ಮನೆಗೆ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಳಿ ಮಾಡುವ ಮೊದಲೇ ವಕೀಲರ ಜತೆ ಸ್ವತಃ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ವಿಚಾರಣೆಗೊಳಪಡಿಸಿದಾಗ ಒಂದು ಕೋಟಿ ರೂ. ಹಳೇ ಮತ್ತು ಹೊಸ ನೋಟುಗಳ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಕಮಿಷನ್‌ ಆಸೆಗೆ ಬಿದ್ದಿದ್ದ ಬಿಎಂಟಿಸಿ ನೌಕರ ಸುಬಾನು, ರಿಯಲ್‌ ಎಸ್ಟೇಟ್‌ ಏಜೆಂಟ್‌ ಸತ್ಯನಾರಾಯಣ ಸೂಚನೆಯಂತೆ ನೋಟುಗಳ ಬದಲಾವಣೆ ದಂಧೆಗೆ ಇಳಿದಿದ್ದ. ಆದರೆ, ನೋಟುಗಳ ಬದಲಾವಣೆ ಆಗದ ಕಾರಣ, ವೆಂಕಟೇಶ್‌ ಜತೆ ದಂಧೆ ಮುಂದುವರಿಸಲು ಹೋಗಿದ್ದ. ಈ ಮಧ್ಯೆ ತನ್ನ ಸ್ನೇಹಿತ ವೆಂಕಟೇಶ್‌ ಕಡೆಯಿಂದ ನೋಟು ಬದಲಾವಣೆ ಕುರಿತು ಮಾಹಿತಿ ಪಡೆದ ರಮೇಶ್‌ ರಾಜು,

Advertisement

ಕೂಡಲೇ ಸಿಸಿಬಿಯ ಎಎಸ್‌ಐ ಹೊಂಬಾಳೇಗೌಡ, ಪೇದೆ ನರಸಿಂಹಮೂರ್ತಿ ಹಾಗೂ ಗಂಗಾಧರ್‌ಗೆ ತಿಳಿಸಿದ್ದಾನೆ. ಈ ಮಾಹಿತಿಯನ್ನಾಧರಿಸಿ ವೆಂಕಟೇಶ್‌ನನ್ನು ಸಂಪರ್ಕಿಸಿದ ಸಿಸಿಬಿ ಪೊಲೀಸರು, ಸುಬಾನು ಹಾಗೂ ಇಬ್ಬರು ಮಹಿಳೆಯರು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಒಂದು ಕೋಟಿ ರೂ. ಹೊಸ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಎಲ್ಲಿಯೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ.

ನಾಲ್ಕು ವರ್ಷಗಳಿಂದ ಬಾತ್ಮೀದಾರ: ಆರೋಪಿ ರಮೇಶ್‌ ರಾಜು ಕಳೆದ ನಾಲ್ಕು ವರ್ಷಗಳಿಂದ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರಿಗೆ ಬಾತ್ಮೀದಾರನಾಗಿದ್ದಾನೆ. ರಕ್ತಚಂದನ, ಮಾದಕ ವಸ್ತು ಮಾರಾಟ ಹಾಗೂ ಇತ್ತೀಚೆಗೆ ನೋಟುಗಳ ಬದಲಾವಣೆ ದಂಧೆಕೋರರ ಮಾಹಿತಿ ಪಡೆಯುತ್ತಿದ್ದ ಈತ, ಈ ಬಗ್ಗೆೆ ಮಾಹಿತಿ ನೀಡಿತ್ತಿದ್ದ. ದೇ ರೀತಿ ನೋಟು ಬದಲಾವಣೆ ಕುರಿತು ಸಿಸಿಬಿ ಪೊಲೀಸರಿಗೆ ಮಾಹತಿ ನೀಡಿದ್ದ ಎನ್ನಲಾಗಿದೆ.

ಸಿಸಿಬಿಗೆ ಬುಲೆರೋ ಕೊಟ್ಟಿದ್ದ ಆರೋಪಿ: ಆರೋಪಿ ರಮೇಶ್‌ ರಾಜು ತಾನುರೀದಿಸಿದ್ದ ಬುಲೆರೋ ವಾಹನವನ್ನು ಸಿಸಿಬಿ ಪೊಲೀಸರಿಗೆ ನೀಡಿದ್ದ. ದಾಳಿ ಸಂದರ್ಭದಲ್ಲಿ ಬಳಸುವಂತೆ ರಮೇಶ್‌ರಾಜು ಅಧಿಕಾರಿಗಳಿಗೆ ವಾಹನ ಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಈತನ ಕೆಲವೊಂದು ವ್ಯವಹಾರಗಳಿಗೆ ಸಿಸಿಬಿಯ ಕೆಲ ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದರು ಎಮ್ಮಲಾಗಿದೆ. ಈ ಹಿಂದೆಯೂ ನಾಲ್ಕೈದು ಬಾರಿ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗಳ ಬಗ್ಗೆ ರಮೇಶ್‌ ರಾಜು ಸಿಸಿಬಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಎಲ್ಲರೂ ಕಮಿಷನ್‌ ಏಜೆಂಟ್‌ಗಳೇ: ಬಿಎಂಟಿಸಿ ನೌಕರ ಸುಬಾನು ನೀಡಿರುವ ದೂರಿನಲ್ಲಿ ಆರೋಪಿಸಿರುವ ವೆಂಕಟೇಶ್‌, ಸತ್ಯನಾರಾಯಣ, ಚಂದ್ರಶೇಖರ್‌, ವಿಷ್ಣು, ರತ್ನಾ ಹಾಗೂ ರಾಗಿಣಿ ಶೇ.25ರಷ್ಟು ಕಮಿಷನ್‌ ಆಧಾರದ ಮೇಲೆ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದರು. ರತ್ನಾ ಆಟೋ ಚಾಲಕನ ಪತ್ನಿಯಾಗಿದ್ದು, ರಾಗಿಣಿ ಎನ್‌ಜಿಒ ನಡೆಸುತ್ತಿದ್ದಾರೆ.

ಇನ್ನುಳಿದ ಆರೋಪಿಗಳು ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಾರೆ. ಪ್ರಕರಣ ಸಂಬಂಧ ಎಲ್ಲರನ್ನೂ ವಿಚಾರಣೆ ನಡೆಸಲಾಗಿದೆ. ಆದರೆ, ರಾಗಿಣಿ ಹಳೇ ನೋಟುಗಳನ್ನು ಕೊಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಮತ್ತೂಬ್ಬ ಆರೋಪಿ ವೆಂಕಟೇಶ್‌ ಕೂಡ ಬದಲಾವಣೆ ಮಾಡಿಕೊಂಡ ಹೊಸ ನೋಟುಗಳ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ತು ಸಾವಿರ ಮಾತ್ರ ಹೊಸ ನೋಟು?: ವೆಂಕಟೇಶ್‌ ಸೂಚನೆ ಮೇರೆಗೆ ನೋಟುಗಳ ಬದಲಾವಣೆಗೆ ಹೋಗಿದ್ದ ರಾಗಿಣಿಗೆ ಆರೋಪಿ ಚಂದ್ರಶೇಖರ್‌ ತೋರಿಸಿದ್ದು ಕೇವಲ 10 ಸಾವಿರ ರೂ. ಮೌಲ್ಯದ ಹೊಸ ನೋಟುಗಳು ಎಂಬ ಅಂಶ ಕೇಳಿಬಂದಿದೆ. ಆರೋಪಿ ಚಂದ್ರಶೇಖರ್‌, ಪೊಲೀಸರ ವಿಚಾರಣೆ ವೇಳೆ ಹೇಳಿರುವಂತೆ, ರಾಗಿಣಿ ಹೊಸ ನೋಟುಗಳನ್ನು ಪಡೆಯಲು ಬಂದಾಗ,

ಬ್ಯಾಗ್‌ನ ಮೇಲ್ಭಾಗದಲ್ಲಿರುವ ಎಲ್ಲ ಕಂತೆಗಳ ಮೇಲೆ ಒಂದೆರಡು ಹೊಸ ನೋಟುಗಳನ್ನು ಇಡಲಾಗಿತ್ತು. ಈ ನೋಟುಗಳನ್ನೇ ತೋರಿಸಿ ಬದಲಾವಣೆ ಮಾಡಿಕೊಡಲಾಗಿದೆ. ಆದರೆ, ದೂರುದಾರ ಸುಬಾನು, ಎಲ್ಲವೂ ಹೊಸ ನೋಟುಗಳು ಎಂದು ಉಲ್ಲೇಖೀಸಿರುವುದರಿಂದ ಇಡೀ ಪ್ರಕರಣ ಪೊಲೀಸರಿಗೆ ಗೊಂದಲಮಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next