ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲ ಮತ್ತು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಜ್ಯದ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ “ಕನ್ನಡ, ಕನ್ನಡಿಗ, ಕರ್ನಾಟಕ”ದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ;ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!
ನೀರಾವರಿ ಯೋಜನೆಯ ಟೆಂಡರ್ ನಲ್ಲಿ 20,000 ಕೋಟಿ ಭ್ರಷ್ಟಾಚಾರ ನಡೆದ ಆರೋಪವಿದೆ. ನಿರಾವರಿ ಯೋಜನೆಯಲ್ಲಿ ಸಿಎಂ ಕುಟುಂಬಸ್ಥರೇ ಕಿಕ್ ಬ್ಯಾಕ್ ಪಡೆದ ಬಗ್ಗೆ ಸ್ವಪಕ್ಷದ ಹಿರಿಯ ನಾಯಕರೇ ಆರೋಪ ಮಾಡಿದ್ದರೂ ತನಿಖೆಗೆ ಸರ್ಕಾರ ಮುಂದಾಗಿಲ್ಲ. ಅಬಕಾರಿ ಇಲಾಖೆಯಲ್ಲಿಯೂ ಲಂಚ ಪಡೆದ ಆರೋಪ ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ಸಮರ್ಪಕವಾಗಿ ನಡೆದಿಲ್ಲ. ಕೋವಿಡ್ ಎರಡನೆ ಅಲೆ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ನೀಡಲಾದ ಪರಿಹಾರ ಸಮರ್ಪಕವಾಗಿಲ್ಲ. ಇನ್ನೊಂದೆಡೆ ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿದ್ದು, ಈ ಬಗ್ಗೆ ಸಿದ್ಧತೆ ನಡೆಸಿರುವ ರೀತಿಯ ಬಗ್ಗೆಯೂ ಚರ್ಚೆಯಾಗಬೇಕಿದೆ. ಈ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆಯುವ ಅಗತ್ಯವಿದೆ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.